ಮಂಗಳವಾರ, ಮಾರ್ಚ್ 9, 2021
17 °C
ಲಾಕ್‌ಡೌನ್‌: ಹೂವು ಬೆಳೆಗಾರರಿಗೆ ಹೆಕ್ಟೇರ್‌ಗೆ ₹25 ಸಾವಿರ ಪರಿಹಾರ ಘೋಷಿಸಿದ ಯಡಿಯೂರಪ್ಪ

ಚಾಮರಾಜನಗರ: 69 ಎಕರೆ ಹಾನಿ, ₹2.57 ಕೋಟಿ ನಷ್ಟ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌–19 ತಡೆಗೆ ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯ 67 ರೈತರು 27.72 ಹೆಕ್ಟೇರ್‌ (69.3 ಎಕರೆ) ಪ್ರದೇಶದಲ್ಲಿ ಬೆಳೆದಿದ್ದ ಹೂವುಗಳು ಹಾನಿಗೀಡಾಗಿವೆ. ₹2.57 ಕೋಟಿಗಳಷ್ಟು ನಷ್ಟವಾಗಿದೆ. 

ಲಾಕ್‌ಡೌನ್‌ ಆರಂಭವಾದ ನಂತರ ಹೂವಿನ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿತ್ತು. 30 ದಿನಗಳ ಕಾಲ ಜಿಲ್ಲೆಯಲ್ಲಿ ಎಲ್ಲೂ ಹೂವಿನ ವ್ಯಾಪಾರ ನಡೆಯಲಿಲ್ಲ ಬೆಳೆಗಾರರು, ಹೂವಿನ ವ್ಯಾಪಾರಿಗಳು ಸೇರಿದಂತೆ ಉದ್ಯಮದಲ್ಲಿ ತೊಡಗಿರುವ ಎಲ್ಲರೂ ನಷ್ಟ ಅನುಭವಿಸಿದ್ದರು. ಬೇಡಿಕೆಯೇ ಇಲ್ಲದೇ ಇದ್ದುದರಿಂದ ರೈತರು ಹೂವುಗಳನ್ನು ಗಿಡದಲ್ಲೇ ಬಿಟ್ಟಿದ್ದರು. 

ತೋಟಗಾರಿಕೆ ಇಲಾಖೆಯು ಕಂದಾಯ ಇಲಾಖೆಯ ಸಹಕಾರದೊಂದಿಗೆ ಜಿಲ್ಲೆಯಾದ್ಯಂತ ಹೂವು ಬೆಳೆಗಾರರಿಗೆ ಆಗಿರುವ ನಷ್ಟವನ್ನು ಸಮೀಕ್ಷೆ ನಡೆಸಿದೆ. 

ಲಾಕ್‌ಡೌನ್‌ ಅವಧಿಯಲ್ಲಿ ನಷ್ಟ ಅನುಭವಿಸಿರುವ ಹೂವು ಬೆಳೆಗಾರರಿಗೆ ಹೆಕ್ಟೇರ್‌ಗೆ ₹25 ಸಾವಿರ ಪರಿಹಾರ ನೀಡುವ ಘೋಷಣೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ಮಾಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 67 ಹೂ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ, ಅವರಿಗೂ ಪರಿಹಾರ ಸಿಗುವ ನಿರೀಕ್ಷೆ ಇದೆ. 

ಕನಕಾಬಂರ, ಚೆಂಡು ಹೂವು, ಕಾಕಡ, ಸುಗಂಧರಾಜ, ಸೇವಂತಿ, ಜರ್ಬೇರಾ ಸೇರಿದಂತೆ ವಿವಿಧ ಹೂವುಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಕೆಲವು ರೈತರು ಮುಕ್ತ ಬೇಸಾಯ ಮಾಡಿದರೆ, ಇನ್ನೂ ಕೆಲವರು ಹಸಿರುವ ಮನೆ (ಪಾಲಿಹೌಸ್‌ ನಿರ್ಮಿಸಿ) ಪದ್ಧತಿಯಲ್ಲಿ ಹೂವುಗಳನ್ನು ಬೆಳೆಯುತ್ತಾರೆ.

ಪಾಲಿಹೌಸ್‌ ಕೃಷಿಯಲ್ಲಿ ನಷ್ಟ ಹೆಚ್ಚು

ತೋಟಗಾರಿಕೆ ಇಲಾಖೆ ನಡೆಸಿರುವ ಸಮೀಕ್ಷೆ ಪ್ರಕಾರ, 17.34 ಹೆಕ್ಟೇರ್‌ (43.35 ಎಕರೆ) ಪ್ರದೇಶದಲ್ಲಿ 40 ಮಂದಿ ರೈತರು ಹೂವುಗಳನ್ನು ಬೆಳೆದಿದ್ದಾರೆ. ಇವರಿಗೆ ₹13.87 ಲಕ್ಷ ನಷ್ಟವಾಗಿದೆ. ಹಸಿರು ಮನೆ ಪದ್ಧತಿಯಲ್ಲಿ 27 ರೈತರು 10.38 ಹೆಕ್ಟೇರ್‌ನಲ್ಲಿ (25.75 ಎಕರೆ) ಹೂವುಗಳನ್ನು ಬೆಳೆದಿದ್ದಾರೆ. ಇವರಿಗೆ ₹2.43 ಕೋಟಿ ನಷ್ಟ ಉಂಟಾಗಿದೆ.

ಯಡಿಯೂರಪ್ಪ ಅವರು ಘೋಷಿಸಿರುವ ನಷ್ಟ ಪರಿಹಾರ ಮೊತ್ತದಂತೆ 67 ರೈತರಿಗೆ ₹6.93 ಲಕ್ಷ ಪರಿಹಾರ ಸಿಗಲಿದೆ. 

‘ಲಾಕ್‌ಡೌನ್‌ ಅವಧಿಯಲ್ಲಿ ಹೂ ಬೆಳೆಗಾರರಿಗೆ ಆಗಿರುವ ನಷ್ಟದ ಮಾಹಿತಿ ಕಲೆ ಹಾಕುವಂತೆ ಇಲಾಖೆಯಿಂದ ಸೂಚನೆ ಬಂದಿತ್ತು. ಅದರಂತೆ ಸಮೀಕ್ಷೆ ನಡೆಸಿದ್ದೇವೆ. ಕಂದಾಯ ಇಲಾಖೆಯವರೂ ಸಹಕಾರ ನೀಡಿದ್ದಾರೆ’ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಶಿವಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜರ್ಬೇರಾದಂತಹ ಹೂವುಗಳನ್ನು ಬೆಳೆಯುವವರಿಗೆ ಹೆಚ್ಚು ನಷ್ಟವಾಗಿದೆ. ಅದರಲ್ಲೂ, ಜರ್ಬೇರಾಗಳನ್ನು ಅಲಂಕಾರಕ್ಕೆ ಬಳಸಲಾಗುತ್ತದೆ. ಲಾಕ್‌ಡೌನ್‌ ಅವಧಿಯಲ್ಲಿ, ಮದುವೆ, ಶುಭಸಮಾರಂಭಗಳು ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಹೀಗಾಗಿ ಇವುಗಳಿಗೆ ಬೇಡಿಕೆಯೇ ಇಲ್ಲ’ ಎಂದು ಅವರು ವಿವರಿಸಿದರು. 

‘ಮುಕ್ತ ಬೇಸಾಯಿಕ್ಕಿಂತಲೂ, ಪಾಲಿಹೌಸ್‌ ನಿರ್ಮಿಸಿ ಮಾಡುವ ಕೃಷಿ ದುಬಾರಿ. ಸಾಮಾನ್ಯವಾಗಿ ಜರ್ಬೇರಾವನ್ನು ಈ ಪದ್ಧತಿಯಲ್ಲಿ ಬೆಳೆಯಲಾಗುತ್ತದೆ. ಈ ಹೂವುಗಳು ದುಬಾರಿ. ಹಾಗಾಗಿ, ನಷ್ಟದ ಪ್ರಮಾಣ ಹೆಚ್ಚಿದೆ’ ಎಂದು ಶಿವಪ್ರಸಾದ್‌ ಅವರು ಮಾಹಿತಿ ನೀಡಿದರು. 

ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

ಯಡಿಯೂರಪ್ಪ ಅವರು ಘೋಷಿಸಿರುವ ನಷ್ಟ ಪರಿಹಾರದಿಂದ ರೈತರಿಂದ ಏನೂ ಪ್ರಯೋಜನ ಇಲ್ಲ ಎಂದು ಹೂ ಬೆಳೆಗಾರರು ಅಭಿಪ್ರಾಯ ಪಟ್ಟಿದ್ದಾರೆ.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ತಾಲ್ಲೂಕಿನ ಹೆಗ್ಗವಾಡಿಪುರದ ಹೂ ಬೆಳೆಗಾರ ಮಹೇಶ್‌ ಕುಮಾರ್‌ ಅವರು, ‘ಹೆಕ್ಟೇರ್‌ಗೆ ₹25 ಸಾವಿರ ಅಂದರೆ, ಎಕರೆಗೆ ₹10 ಸಾವಿರ ಆಯಿತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ರೈತರಿಗೆ ಇದರಿಂದ ಏನು ಪ್ರಯೋಜನವಾಗುತ್ತದೆ? ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಆಗುತ್ತದೆ’ ಎಂದು ಅವರು ಹೇಳಿದರು. 

‘ಈಗ ಹೂವುಗಳಿಗೆ ಬೇಡಿಕೆ ಇರುವ ಸಮಯ. ಶುಭ ಸಮಾರಂಭಗಳು, ಮದುವೆಗಳು, ಜಾತ್ರೆಗಳು ನಡೆಯುತ್ತಿರುತ್ತವೆ. ಸುಂಗಧರಾಜ ಹೂವಿಗೆ ಬೇಡಿಕೆ ಜೊತೆಗೆ ಉತ್ತಮ ದರವೂ ಇರುತ್ತದೆ. ಸುಗಂಧರಾಜ ಹೂವನ್ನು ಪ್ರತಿ ದಿನವೂ ಕೊಯ್ಯಬೇಕು. ₹3,000 ದಿಂದ ₹10 ಸಾವಿರವರೆಗೂ ಆದಾಯ ಬರುತ್ತದೆ. ಈ ಬಾರಿ ಲಾಕ್‌ಡೌನ್‌ನಿಂದಾಗಿ ಹೂವು ಕೊಯ್ದಿಲ್ಲ’ ಎಂದು 36 ವರ್ಷಗಳಿಂದ ಸುಗಂಧರಾಜವನ್ನು ಬೆಳೆಯುತ್ತಿರುವ ಅವರು ತಿಳಿಸಿದರು. 

–––

ಮುಖ್ಯಮಂತ್ರಿ ಅವರು ಘೋಷಿಸಿರುವ ಬೆಳೆ ಪರಿಹಾರ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳು ಇನ್ನೂ ಬಂದಿಲ್ಲ

-ಶಿವಪ್ರಸಾದ್‌, ‌ತೋಟಗಾರಿಕಾ ಇಲಾಖೆ ಉಪನಿರ್ದೇಶಕ

–––

ಹೆಕ್ಟೇರ್‌ಗೆ ₹25 ಸಾವಿರ ಪರಿಹಾರದಿಂದ ಪ್ರಯೋಜನ ಇಲ್ಲ. ಮುಖ್ಯಮಂತ್ರಿ ಅವರು ಪರಿಹಾರ ಮೊತ್ತ ಪರಿಷ್ಕರಿಸಬೇಕು
-ಮಹೇಶ್‌ಕುಮಾರ್‌, ಹೂ ಬೆಳೆಗಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು