ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆದರ್ಶ’ ವಿದ್ಯಾರ್ಥಿಗಳು, ಪೋಷಕರ ಪ್ರತಿಭಟನೆ

ಬಸ್‌, ರಸ್ತೆ ಸೌಲಭ್ಯಕ್ಕೆ ಆಗ್ರಹ; ಚಾಮರಾಜನಗರ–ಗುಂಡ್ಲುಪೇಟೆ ರಸ್ತೆ ತಡೆ, ವಾಹನ ಸಂಚಾರ ಅಸ್ಯವ್ಯಸ್ತ
Last Updated 3 ಡಿಸೆಂಬರ್ 2022, 15:36 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ಆದರ್ಶ ವಿದ್ಯಾಲಯಕ್ಕೆ ಸಮರ್ಪಕ ರಸ್ತೆ ನಿರ್ಮಾಣ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಇಲ್ಲದೇ ರೋಸಿ ಹೋಗಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಶನಿವಾರ ರಸ್ತೆಗಿಳಿದು ಬೃಹತ್‌ ಪ್ರತಿಭಟನೆ ನಡೆಸಿದರು.

400ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ನಗರದ ಮೂಡ್ಲುಪುರದ ಬಳಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ರಸ್ತೆಯಲ್ಲಿ ಗಂಟೆಗೂ ಹೆಚ್ಚು ಕಾಲ ವಾಹನಗಳು ಹಾಗೂ ಜನರ ಓಡಾಟವನ್ನು ತಡೆದು ತಾಲ್ಲೂಕು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು. ತಕ್ಷಣವೇ ಬಸ್‌ ಸೌಲಭ್ಯ ಕಲ್ಪಿಸುವಂತೆ ಹಾಗೂ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿದರು. ಇದರಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು. ಜನರಿಗೂ ತೊಂದರೆಯಾಯಿತು.

ರಸ್ತೆ ಹಾಗೂ ಬಸ್‌ ಸೌಲಭ್ಯ ಇಲ್ಲದೆ ‘ಆದರ್ಶ’ ಶಾಲೆಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ‘ಪ್ರಜಾವಾಣಿ’ ನ.24ರಂದು ‘ಆದರ್ಶ ಶಾಲೆಗೆ ರಸ್ತೆ ಇಲ್ಲ, ಬಸ್‌ ಬರಲ್ಲ’ ಎಂಬ ತಲೆಬರಹದ ಅಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಆ ಸಂದರ್ಭದಲ್ಲಿ ಪತ್ರಿಕೆಗೆ ಪ್ರತಿಕ್ರಿಯಿಸಿದ್ದ ಪೊಲೀಸರು, ಸಮಸ್ಯೆ ಬಗೆಹರಿಸದಿದ್ದರೆ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.

ಶನಿವಾರ ಮೂಡ್ಲುಪುರ ಬಳಿ ಜಮಾಯಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.

‘ಚಾಮರಾಜನಗರದಿಂದ ಮಲ್ಲಯ್ಯನಪುರ ಆದರ್ಶ ವಿದ್ಯಾಲಯಕ್ಕೆ ನೂರಾರು ವಿದ್ಯಾರ್ಥಿಗಳು ಹೋಗುತ್ತಾರೆ. ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದ್ದು, 391 ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ.ನಗರದಿಂದ ಶಾಲೆಗೆ ಬೆಳಿಗ್ಗೆ 9 ಹಾಗೂ 9.15ಕ್ಕೆ ಎರಡು ಬಸ್‌ಗಳಿವೆ. ಉಳಿದಂತೆ ಶನಿವಾರ ಬೆಳಿಗ್ಗೆ ಒಂದು ಬಸ್ ಮಾತ್ರ ಬಿಡಲಾಗುತ್ತಿದೆ. ಇದರಿಂದ ಬೆಳಿಗ್ಗೆ 9 ಗಂಟೆಗೆ ಪರೀಕ್ಷೆ ಇದ್ದರೆ ಸೂಕ್ತ ಸಮಯಕ್ಕೆ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ಅಲ್ಲದೇ ಸಂಜೆಯ ವೇಳೆಯೂ ಎರಡು ಬಸ್‌ಗಳು ಮಾತ್ರ ಇರುವುದರಿಂದ ಒಂದು ಬಸ್‌ನಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಲಾಗುತ್ತಿದೆ’ ಎಂದು ದೂರಿದರು.

‘ವಿದ್ಯಾರ್ಥಿ ಪಾಸ್‌ ಮಾಡಿಸಿಯೂ ಪ್ರಯೋಜನಕ್ಕೆ ಇಲ್ಲದಂತಾಗಿದೆ. ಬಸ್‌ ಬಾರದೇ ಇರುವುದರಿಂದತೊಂದರೆಯಾಗುತ್ತಿದ್ದು ನಗರದಿಂದ ಶಾಲೆಯವರೆಗೆ 4 ಕಿ.ಮೀ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಐ.ಇ.ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು.

ರಸ್ತೆಯನ್ನು ದುರಸ್ತಿಗೊಳಿಸಿ, ಹೆಚ್ಚುವರಿ ಬಸ್‌ ಸೌಲಭ್ಯವನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಪೋಷಕರು ಹಾಗೂ ವಿದ್ಯಾರ್ಥಿಗಳು ‍ಪ್ರತಿಭಟನೆ ಕೈಬಿಟ್ಟರು.

‘ಶೂ ಬಿಚ್ಚಿ ನಡೆದಾಡಬೇಕು’

‘ಗುಂಡ್ಲುಪೇಟೆ ಹೆದ್ದಾರಿಯಿಂದ ಶಾಲೆಯವರೆಗೆ 3 ಕಿ.ಮೀ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ನಡೆದುಕೊಂಡು ಹೋಗಲೂ ಸಾಧ್ಯವಾಗದಂತೆ ಇದೆ. ಬರುವ ಬಸ್‌ಗಳು ಈ ರಸ್ತೆಯಲ್ಲಿ ಓಲಾಡಿಕೊಂಡು ಸಂಚರಿಸುತ್ತವೆ. ಬಸ್‌ ಒಳಗಡೆ 130ಕ್ಕೂ ಹೆಚ್ಚು ಮಕ್ಕಳಿರುತ್ತಿದ್ದು, ಕೊಂಚ ಹೆಚ್ಚು ಕಡಿಮೆಯಾದರೂ ದೊಡ್ಡ ಅನಾಹುತವೇ ಸಂಭವಿಸಲಿದೆ. ಹಾಗಾಗಿ, ರಸ್ತೆ ಅಭಿವೃದ್ಧಿಗೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

ಮಳೆ ಬಂದರೆ ಈ ರಸ್ತೆ ಕೆಸರುಮಯವಾಗುವುದರಿಂದ ಮಕ್ಕಳು ಶೂ ಬಿಚ್ಚಿ ನಡೆದುಕೊಂಡು ಹೋಗಬೇಕಿದೆ. ಆದ್ದರಿಂದ ಸಂಬಂಧಪಟ್ಟವರು ಹೆಚ್ಚುವರಿ ಬಸ್ ವ್ಯವಸ್ಥೆ ಹಾಗೂ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

––

ಪ್ರತಿಭಟನೆ ನಡೆದಿರುವುದು ಗಮನಕ್ಕೆ ಬಂದಿದೆ. ರಸ್ತೆ ಅಭಿವೃದ್ಧಿಗೆ ₹9 ಲಕ್ಷ ನೀಡಲಾಗಿದೆ. ಸೋಮವಾರವೇ ಕಾಮಗಾರಿಗೆ ಚಾಲನೆ ನೀಡುವೆ
ಸಿ.ಪುಟ್ಟರಂಗಶೆಟ್ಟಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT