ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಲಕ್ಷ ಸಸಿಗಳು ಮಾರಾಟಕ್ಕೆ ಲಭ್ಯ

ಮಲೆ ಮಹದೇಶ್ವರ ವನ್ಯಧಾಮ: ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಸಿಗಳ ವಿತರಣೆಗೆ ಸಿದ್ಧತೆ
Last Updated 24 ಮೇ 2020, 15:43 IST
ಅಕ್ಷರ ಗಾತ್ರ

ಹನೂರು: ಅರಣ್ಯೇತರ ಪ್ರದೇಶದ ಕೃಷಿ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸಿ ಹಸಿರನ್ನು ಹೆಚ್ಚಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಜಾರಿಗೆ ತಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಮಲೆಮಹದೇಶ್ವರ ವನ್ಯಧಾಮವು ಈ ವರ್ಷವೂ ರೈತರಿಗೆ ಗಿಡಗಳನ್ನು ವಿತರಿಸುವ ಯೋಜನೆ ಹಾಕಿಕೊಂಡಿದ್ದು, ಈ ಉದ್ದೇಶಕ್ಕಾಗಿ ಎಂಟು ಲಕ್ಷ ಸಸಿಗಳನ್ನು ಬೆಳೆಸಿದೆ.

2011-12ರಲ್ಲಿ ಇಲಾಖೆಯು ಈ ಯೋಜನೆಯನ್ನು ಜಾರಿಗೆ ತಂದಿತ್ತು.ಗ್ರಾಮೀಣ ಭಾಗದ ರೈತರ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಅರಣ್ಯೇತರ ಪ್ರದೇಶಗಳಲ್ಲಿ ಕಾಡನ್ನು ಬೆಳೆಸುವ ಮಹತ್ವದ ಯೋಜನೆ ಇದು.

ರೈತರು ತಮಗೆ ಲಭ್ಯವಿರುವ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿ ಸಂರಕ್ಷಿಸಿದರೆ ಅದಕ್ಕೆ ಪ್ರತಿಯಾಗಿ ರೈತರಿಗೆ ಮೂರು ವರ್ಷದವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ.ಇದುವರೆಗೂ ಪ್ರತಿ ಗಿಡಕ್ಕೆ ಮೂರು ವರ್ಷಕ್ಕೆ ₹100 ಇತ್ತು. ಅದನ್ನೀಗ ₹125ಕ್ಕೆ ಹೆಚ್ಚಿಸಲಾಗಿದೆ.

ರೈತರು ಕೃಷಿ ಜೊತೆಗೆ, ಪಾಳು ಬಿದ್ದಿರುವ ತಮ್ಮ ಜಮೀನುಗಳನ್ನು ಸಸಿಗಳನ್ನು ನೆಟ್ಟು, ಪೋಷಿಸಿ ಅದನ್ನು ಮೂರು ವರ್ಷಗಳವರೆಗೆ ಸಂರಕ್ಷಿಸಬೇಕು. ಕಾಡುಗಳ ಸಂರಕ್ಷಣೆ ಹಾಗೂ ಅರಣ್ಯದ ಹೊರಗಿರುವ ಜಮೀನುಗಳಲ್ಲಿ ಗಿಡಮರಗಳನ್ನು ಬೆಳೆಸಿ ಅರಣ್ಯಗಳ ಮೇಲಿನ ಒತ್ತಡ ಕಡಿಮೆ ಮಾಡುವುದು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ಗುರಿ.

ಎಲ್ಲೆಲ್ಲಿ ದೊರೆಯಲಿದೆ?:ಮಲೆಮಹದೇಶ್ವರ ವನ್ಯಧಾಮದ ಕೊಳ್ಳೇಗಾಲ, ಹನೂರು, ಪಿ.ಜಿ. ಪಾಳ್ಯ, ಮಿಣ್ಯಂ ಹಾಗೂ ರಾಮಾಪುರ ಸಸ್ಯಕ್ಷೇತ್ರಗಳಲ್ಲಿ ಸಸಿಗಳನ್ನು ಬೆಳೆಸಲಾಗಿದೆ. ಗಿಡಗಳನ್ನು ಬೆಳೆಸಲು ಆಸಕ್ತಿಯಿರುವ ರೈತರು ಆಯಾ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ತಮ್ಮ ಜಮೀನಿಗೆ ಸಂಬಂಧಿಸಿದ ಪಹಣಿ ನೀಡಿ ನೋಂದಾಯಿಸಿಕೊಂಡು ಅರ್ಜಿಯನ್ನು ಪಡೆದು ದಾಖಲಾತಿ ಸಲ್ಲಿಸಿ ಸಸಿಗಳನ್ನು ಪಡೆಯಬಹುದು.

ಸಾಗುವಾನಿ, ತೇಗ, ಶ್ರೀಗಂಧ, ರಕ್ತಚಂದನ, ಹುಣಸೆ, ಹೆಬ್ಬೇವು, ನೇರಳೆ, ಹೊಂಗೆ, ನೆಲ್ಲಿಕಾಯಿ, ಬೇವು ಸೇರಿದಂತೆ ವಿವಿಧ ಸಸಿಗಳು ಲಭ್ಯವಿವೆ.

ಬದುಕುಳಿದ ಗಿಡಗಳಿಗೆ ಮಾತ್ರ ಪ್ರೋತ್ಸಾಹ ಧನ

‘ಸಸಿಗಳನ್ನು ಬೆಳೆಸಿರುವ ಚೀಲಗಳ ಗಾತ್ರ ಹಾಗೂ ಎತ್ತರಕ್ಕೆ ಅನುಣವಾಗಿ ಪ್ರತಿ ಸಸಿಗೆ ₹1ರಿಂದ ₹3 ವರೆಗೆ ಪಡೆಯಲಾಗುತ್ತದೆ. ರೈತರು ಯಾವುದೇ ಮಿತಿಯಿಲ್ಲದೆ, ಎಷ್ಟು ಸಸಿಗಳನ್ನಾದರೂ ಪಡೆಯಬಹುದು. ಆದರೆ, ಪ್ರೋತ್ಸಾಹ ಧನ ನೀಡುವಾಗ ಬದುಕುಳಿದ ಸಸಿಗಳನ್ನು ಮಾತ್ರ ಪರಿಗಣಿಸಲಾಗುವುದು’ ಎಂದು ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‌

‘ಸ್ಥಳೀಯ ಅರಣ್ಯಾಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ಬಳಿಕ ಗಿಡಗಳನ್ನು ಕಾಪಾಡಿರುವ ರೈತರಿಗೆ ಚೆಕ್ ಮೂಲಕ ಪ್ರೋತ್ಸಾಹ ಧನ ವಿತರಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT