ಶುಕ್ರವಾರ, ನವೆಂಬರ್ 22, 2019
21 °C
15 ದಿನ ಕಳೆದರೂ ಸಿಗದ ಸ್ಪಂದನೆ: ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಆಲಂಬಾಡಿ: 25ಕ್ಕೂ ಹೆಚ್ಚು ಮಂದಿಗೆ ಅನಾರೋಗ್ಯ

Published:
Updated:
Prajavani

ಮಹದೇಶ್ವರ ಬೆಟ್ಟ: ಸಮೀಪದ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆಲಂಬಾಡಿ ಹಾಗೂ ಪಾಲಾರ್‌ ಗ್ರಾಮಗಳಲ್ಲಿ  25ರಿಂದ 30 ಜನರು ಹೆಚ್ಚು ಮಂದಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಎದ್ದು ಓಡಾಡಲು ಸಾಧ್ಯವಾಗುತ್ತಿಲ್ಲ.

ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಹದಿನೈದು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು, ಅವರಿಗೆ ಆರೋಗ್ಯ ಸೇವೆ ಇನ್ನೂ ಸಿಕ್ಕಲ್ಲ. 

ಇಲ್ಲಿ 25ರಿಂದ 30 ಸೋಲಿಗ ಕುಟುಂಬಗಳು ವಾಸಿಸುತ್ತಿವೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸಾಂಕ್ರಾಮಿಕ ರೋಗ ತಗುಲಿರುವ ಶಂಕೆ ವ್ಯಕ್ತವಾಗಿದೆ.

ತಮಿಳುನಾಡಿನ ಮೆಟ್ಟೂರು ಜಲಾಶಯದ ಹಿನ್ನೀರು ಸೋರೆಕಾಯಿ ಮಡುವಿನ ವರೆಗೂ ವಿಸ್ತರಿಸಿದ್ದು, ನಿಂತಿರುವ ನೀರಿನಲ್ಲಿ ಕಸಕಡ್ಡಿ ಮಡುಗಟ್ಟಿವೆ. ಸೊಳ್ಳೆಗಳ ಕಾಟವು ಹೆಚ್ಚಳವಾಗುತ್ತಿದ್ದು, ಪಾಲಾರ್‌ ಗ್ರಾಮದ ಜನರು ಆತಂಕದಲ್ಲಿದ್ದಾರೆ.  

ಏಕೈಕ ಆರೋಗ್ಯ ಉಪಕೇಂದ್ರ: ಈ ಭಾಗದಲ್ಲಿರುವ ಗೋಪಿನಾಥಂ, ಪುದೂರು ಮಾರಿಕೊಟ್ಟಾಯಿ, ಆಲಂಬಾಡಿ ಹಾಗೂ ಇನ್ನಿತರ ಗ್ರಾಮಗಳಿಗೆ ಇರುವುದು ಒಂದೇ ಒಂದು ಆರೋಗ್ಯ ಉಪಕೇಂದ್ರ. ಅದು ಗೋಪಿನಾಥಂನಲ್ಲಿದೆ. ಆದರೆ, ಅಲ್ಲಿ ಶುಶ್ರೂಷಕರು ಇಲ್ಲ. ತುರ್ತು ಸಂದರ್ಭದಲ್ಲಿ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೇ ಹೋಗಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಕೊಳ್ಳೇಗಾಲದ ಉಪವಿಭಾಗದ ಆಸ್ಪತ್ರೆಗೆ ಹೋಗಬೇಕಿದೆ.

ಕೊಳ್ಳೇಗಾಲ ತುಂಬಾ ದೂರವಿರುವುದರಿಂದ ಇಲ್ಲಿನ ಜನರು ತಮಿಳುನಾಡಿನ ಮೆಟ್ಟೂರು ಸರ್ಕಾರಿ ಆಸ್ಪತ್ರೆಯನ್ನೇ ನೆಚ್ಚಿಕೊಂಡಿದ್ದಾರೆ. 

ಅಸಮಾಧಾನ: ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರೆಗೂ ತೀವ್ರ ಜ್ಚರದಿಂದ ಬಳಲುತ್ತಿದ್ದಾರೆ. 15 ದಿನ ಕಳೆದರೂ ವೈದ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಭೇಟಿ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮುಕುಂದ್‌ ಅವರು, ‘ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗಿರುವ ವಿಚಾರ ಗಮನಕ್ಕೆ ಬಂದಿದೆ. ಗೋಪಿನಾಥಂ ಉಪಕೇಂದ್ರದಲ್ಲಿ ಸಿಬ್ಬಂದಿ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಶುಕ್ರವಾರ ಬೆಳಿಗ್ಗೆ ಆಲಂಬಾಡಿಗೆ ಭೇಟಿ ನೀಡಿ, ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲಾಗುವುದು’ ಎಂದು ಹೇಳಿದರು. 

‘ಅಧಿಕಾರಿಗಳು, ಜಿಲ್ಲಾಡಳಿತ ಹೊಣೆ’‌
‘ಗಡಿ ಪ್ರದೇಶದಲ್ಲಿರುವ ಸೋಲಿಗರು ವಾಸಿಸುತ್ತಿರುವ ಗ್ರಾಮಗಳನ್ನು ಸರ್ಕಾರ ಕಡೆಗಣಿಸುತಿದ್ದು, ಇಲ್ಲಿನ ಜನರ ಕಷ್ಟಗಳನ್ನು ಕೇಳಲು ಯಾವ ಅಧಿಕಾರಿಗಳು ಮುಂದಾಗುತಿಲ್ಲ. ಅಧಿಕಾರಿಗಳು ಅಥವಾ ಚುನಾಯಿತ ಜನಪ್ರತಿನಿದಿಗಳು ಈ ಗ್ರಾಮಗಳ ಕಡೆ ತಿರುಗಿ ನೋದಿಲ್ಲ. ಜ್ವರ ಪೀಡಿತರಿಗೆ ಏನಾದರೂ ತೊಂದರೆಯಾದರೆ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ’ ಎಂದು ಸೋಲಿಗ ಸಮುದಾಯದ ಮುಖಂಡ ಮುತ್ತಯ್ಯ ಅವರು ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)