ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ ಅಖಿಲ ಭಾರತ ಸಮ್ಮೇಳನ ನಡೆಸಲಾಗುವುದು: ಮಹೇಶ ಜೋಶಿ

ಜಿಲ್ಲಾ ಮಟ್ಟದ ಸಾಹಿತ್ಯ ಜಾತ್ರೆಗೆ ಅದ್ಧೂರಿ ಚಾಲನೆ, ಹಲವು ಗಣ್ಯರು ಭಾಗಿ
Last Updated 8 ಫೆಬ್ರುವರಿ 2023, 15:53 IST
ಅಕ್ಷರ ಗಾತ್ರ

ಕೊಳ್ಳೇಗಾಲ (ಶ್ರೀ ಕುಮಾರ ನಿಜಗುಣ ವೇದಿಕೆ): ‘ನಮ್ಮ ಅಧಿಕಾರಾವಧಿ ಮುಗಿಯುವುದರ ಒಳಗಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ.ಮಹೇಶ ಜೋಶಿ ಬುಧವಾರ ಹೇಳಿದರು.

ಕೊಳ್ಳೇಗಾಲದ ಎಂಜಿಎಸ್‌ವಿ ಮೈದಾನದಲ್ಲಿ ಬುಧವಾರ ಆರಂಭಗೊಂಡ ಎರಡು ದಿನಗಳ ಚಾಮರಾಜನಗರ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನಾನು ಚುನಾವಣೆ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ದಾಗ, ಗೆದ್ದರೆ ಅಖಿಲ ಭಾರತ ಸಮ್ಮೇಳನ ಆಯೋಜಿಸುವ ಭರವಸೆ ನೀಡಿದ್ದೆ. ನಮಗೆ ಇನ್ನೂ ನಾಲ್ಕು ವರ್ಷಗಳ ಅವಧಿ ಇದ್ದು, ಖಂಡಿತವಾಗಿಯೂ ಜಿಲ್ಲೆಯಲ್ಲಿ ಅಖಿಲ ಭಾರತ ಸಮ್ಮೇಳನ ನಡೆಸಲಾಗುವುದು. ‘ಮಹದೇಶ್ವರ ಬೆಟ್ಟದಲ್ಲಿ ಎಲ್ಲ ಸೌಲಭ್ಯ ಇದೆ.‌ ಅಲ್ಲಿಯೇ ಮಾಡಬಹುದು’ ಎಂದು ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಲಹೆ ನೀಡಿದ್ದಾರೆ' ಎಂದರು.

‘ಸಾಹಿತ್ಯ ಕ್ಷೇತ್ರದಲ್ಲೂ ಈಗ ರಾಜಕೀಯ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿರುತ್ತವೆ. ಆದರೆ ನಾನು, ಕಸಾಪದ ಆಡಳಿತದಲ್ಲಿ ರಾಜಕೀಯ ಬರಲು ನಾನು ಬಿಡುವುದಿಲ್ಲ. ಇದು ಸ್ವಾಯತ್ತ ಸಂಸ್ಥೆ. ಇಲ್ಲಿ ಜಾತಿ, ಧರ್ಮ ಯಾವುದೂ ಇಲ್ಲ. ಬಲ ಪಂಥ, ಎಡ ಪಂಥ, ಮೇಲ್ಪಂಥ, ಕೇಳಪಂಥ ಎಂಬುದಿಲ್ಲ. ನಮ್ಮದು ಕನ್ಜಡದ ಪಂಥ ಮಾತ್ರ' ಎಂದು ಹೇಳಿದರು.

ಜಾಗತಿಕ ಮಟ್ಟಕ್ಕೆ ತಲುಪಬೇಕು: ಕನ್ನಡ ಬಾವುಟವನ್ನು ಸಮ್ಮೇಳನದ ಸರ್ವಾಧ್ಯಕ್ಷ ಮಹಾದೇವ ಶಂಕನಪುರ ಅವರಿಗೆ ಹಸ್ತಾಂತರಿಸಿ ಮಾತನಾಡಿದ ನಿಕಟಪೂರ್ವ ಸಮ್ಮೇಳನದ ಸರ್ವಾಧ್ಯಕ್ಷ ಮಂಜು ಕೋಡಿ ಉಗನೆ, 'ಜಿಲ್ಲೆಯ ಸಾಹಿತ್ಯ ಕನ್ನಡದ ಸಾಹಿತ್ಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಶಿಷ್ಟ ಸಾಹಿತ್ಯಕ್ಕೆ ಮೂಲ ದ್ರವ್ಯ ಜಿಲ್ಲೆಯ ಜಾನಪದ ಕಾವ್ಯಗಳು. ಕನ್ನಡ ಸಾಹಿತ್ಯ ಜಾಗತಿಕ ಮಟ್ಟಕ್ಕೆ ತಲುಪಲು ಇಲ್ಲಿನ ಸಾಹಿತ್ಯ ಭಾಷಾಂತರಗೊಳ್ಳಬೇಕು. ಆದರೆ, ನಮ್ಮ ಸಾಹಿತ್ಯದ ಕೃತಿಗಳು ಜಗತ್ತಿನ ಬೇರೆ ಬೇರೆ ಭಾಷೆಗಳಿಗೆ ತರ್ಜುಮೆ ಮಾಡದಿರುವುದು ನಮ್ಮ ದೊಡ್ಡ ಕೊರತೆ. ಇದರಿಂದಾಗಿ ನಮ್ಮ ಸಾಹಿತ್ಯಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ವಿಫಲವಾಗುತ್ತಿವೆ. ನಮ್ಮ ಚಿಂತನೆಗಳು, ಆಶಯಗಳನ್ನು ಜಗತ್ತಿಗೆ ತಿಳಿಸಲು ಸಾಧ್ಯವಾಗುತ್ತಿಲ್ಲ’ ಎಂದರು.

ಸಾಲೂರು ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ನಮ್ಮಲ್ಲಿ ಜಾನಪದ ವಿವಿ ಸ್ಥಾಪನೆಯಾಗಬೇಕಿತ್ತು. ಆದರೆ, ಅದು ಹಾವೇರಿಗೆ ಹೋಯಿತು. ಇನ್ನೂ ನಮಗೆ ಆ ಬೇಸರ ಇದೆ. ಇಲ್ಲಿ ವಿವಿಯ ಪ್ರಾದೇಶಿಕ ಕೇಂದ್ರ ಇದೆ. ಆದರೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು ಜಾನಪದ ಜೀವಂತವಾಗಿರುವ ಗ್ರಾಮೀಣ ಭಾಗಗಳಲ್ಲಿ ನಡೆಯಬೇಕು. ಕಸಾಪ ಜಿಲ್ಲೆಯ ಗಡಿ ಭಾಗಗಳ ಶಾಲೆಗಳ ಬಗ್ಗೆ ಗಮನ ಹರಿಸಬೇಕು. ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಬೇಕು' ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿ ಹೊರೆಯಾಲ ದೊರೆಸ್ವಾಮಿ ಅವರಿಗೆ ಮುದ್ದು ಮಾದಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲಾ‌ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ಮುದ್ದುಮಾದಪ್ಪ ಪ್ರಶಸ್ತಿ ದಾನಿಗಳು ಮಂಗಳಾ ಮುದ್ದು ಮಾದಪ್ಪ, ಮುಖಂಡ ಎಸ್.ಬಾಲರಾಜ್ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಕೊಳ್ಳೇಗಾಲ ಬಿಇಒ ಚಂದ್ರಕಾಂತ್ ಪಾಟೀಲ, ತಾಲ್ಲೂಕು ಕಸಾಪ ಅಧ್ಯಕ್ಷ ನಾಗರಾಜು ಕೊಂಗರಹಳ್ಳಿ ಇದ್ದರು.

‘ಸಲಹೆ ಕಾರ್ಯಗತ ಮಾಡಲು ಯತ್ನ’

ಶಾಸಕ ಎನ್‌.ಮಹೇಶ್‌ ಮಾತನಾಡಿ, ‘ಮಹಾದೇವ ಶಂಕನಪುರ ಅವರು ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇಲ್ಲಿನ ಸಮಸ್ಯೆಗಳ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಅವರು ಹೇಳಿದ್ದೆಲ್ಲವೂ ವಾಸ್ತವ ಹಾಗೂ ಸತ್ಯ. ಅದೆಲ್ಲವನ್ನೂ ಕಾರ್ಯಗತಗೊಳಿಸಲು ಶಾಸಕನಾಗಿ ಹಾಗೂ ಸರ್ಕಾರದ ಭಾಗವಾಗಿ ಪ್ರಯತ್ನಿಸುತ್ತೇನೆ’ ಎಂದರು.

ಶಿಕ್ಷಣದ ಮೂಲಸೌಕರ್ಯ ಹೆಚ್ಚಿಸಲು ಸರ್ಕಾರ ಈಗ ಕ್ರಮ ಕೈಗೊಂಡಿದೆ. ಯಾವುದೇ ಪ್ರಭಾವಕ್ಕೆ ಒಳಗಾಗದೆ ಪ್ರತಿಭೆಗಳನ್ನು, ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಮಾಡುತ್ತಿವೆ. ಜಿಲ್ಲೆಯಲ್ಲಿ ಶೇ 48ರಷ್ಟು ಅರಣ್ಯ ಇದೆ. ಉಳಿದ ಭೂ ಪ್ರದೇಶದಲ್ಲಿ ಶೇ 22ರಷ್ಟು ಜಾಗದಲ್ಲಿ ಮಾತ್ರ ಕೃಷಿ ನಡೆಸಲಾಗುತ್ತಿದೆ. ನೀರಿನ ಸಮಸ್ಯೆ ಇರುವುದರಿಂದ ರೈತರು ವ್ಯವಸಾಯಕ್ಕೆ ಮುಂಗಾಗುತ್ತಿಲ್ಲ. ಇದರ ಪರಿಹಾರಕ್ಕಾಗಿ ₹1,400 ಕೋಟಿ ವೆಚ್ಚದಲ್ಲಿ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಸಮಗ್ರವರದಿ ಸಿದ್ಧವಾಗಿದೆ. ಸಚಿವ ಸಂಪುಟಕ್ಕೆ ಬರಲಿದ್ದು, ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ’ ಎಂದರು.

‘ಜಾನಪದ ಮಹಾಕಾವ್ಯಗಳು ಮಕ್ಕಳಿಗೆ ತಲುಪಲಿ’

ಮಳವಳ್ಳಿ ಮಂಟೇಸ್ವಾಮಿ ಪೀಠದ ಶ್ರೀಕಂಠಸಿದ್ಧಲಿಂಗರಾಜೇ ಅರಸ್‌ ಮಾತನಾಡಿ, ‘ಜಿಲ್ಲೆಯ ಎರಡು ಪ್ರಮುಖ ಮಹಾಕಾವ್ಯಗಳಾದ ಮಲೆ ಮಹದೇಶ್ವರ ಕಾವ್ಯ ಮತ್ತು ಮಂಟೇಸ್ವಾಮಿ ಕಾವ್ಯಗಳು ಶಾಲಾ ಮಕ್ಕಳಿಗೆ ತಲುಪಬೇಕು. ಅದನ್ನು ಸರಳವಾಗಿ ಅವರಿಗೆ ತಿಳಿಹೇಳುವ ಕೆಲಸ ಆಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಈ ಜವಾಬ್ದಾರಿ ಹೊತ್ತುಕೊಂಡರೆ ನಮ್ಮ ಮಠ ಹಾಗೂ ನಾನು ವೈಯಕ್ತಿಕವಾಗಿ ಸಹಾಯ ಮಾಡುವೆ’ ಎಂದರು.

‘ಅಭಿವೃದ್ಧಿಯಲ್ಲಿ ಹಿಂದೆ ಉಳಿದಿರುವ ಚಾಮರಾಜನಗರ ಜಿಲ್ಲೆಗೆ ವಿಶೇಷ ಸ್ಥಾನಮಾನ ನೀಡುವ ಅಗತ್ಯವಿದೆ. ಇಲ್ಲಿನ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳು ಇನ್ನೂ ಹಾಗೆಯೇ ಉಳಿದುಕೊಂಡಿದೆ. ಮುಂದೆಯೂ ಇದನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ಎಲ್ಲರೂ ಯೋಚಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT