ಶುಕ್ರವಾರ, ಅಕ್ಟೋಬರ್ 30, 2020
24 °C
ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ಕಾನೂನು ಹೋರಾಟ: ನಾಗೇಂದ್ರ

ಚಾಮರಾಜನಗರ: ಕರ್ನಾಟಕ ಬಂದ್‌ಗೆ ಎಪಿಎಂಸಿ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳನ್ನು ವಿರೋಧಿಸಿ ಸೋಮವಾರ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಚಾಮರಾಜನಗರ ಮತ್ತು ಗುಂಡ್ಲುಪೇಟೆ ಎಪಿಎಂಸಿಗಳು ಬೆಂಬಲ ಸೂಚಿಸಿವೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಡಿ.ನಾಗೇಂದ್ರ ಅವರು, ‘ಎಪಿಎಂಸಿ ತಿದ್ದುಪಡಿ ಕಾಯ್ದೆಯು ಎಪಿಎಂಸಿಗೆ ಮಾರಕವಾಗಿದ್ದು, ಮಾರುಕಟ್ಟೆ ವ್ಯವಸ್ಥೆಯನ್ನು ನಾಶ ಮಾಡುವ ಮೊದಲ ಹಂತವಾಗಿದೆ. ಇತ್ತೀಚೆಗೆ ದಾವಣೆಗೆರೆಯಲ್ಲಿ ವಿವಿಧ ಎಪಿಎಂಸಿ ಆಡಳಿತ ಮಂಡಳಿಗಳ ಪ್ರತಿನಿಧಿಗಳು ಸಭೆ ನಡೆಸಿದ್ದು, ಕಾಯ್ದೆಯನ್ನು ವಿರೋಧಿಸಲು ಹಾಗೂ ಇದರ ವಿರುದ್ಧ ಕಾನೂನು ಹೋರಾಟ ಮಾಡಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು. 

‘ದೊಡ್ಡ ದೊಡ್ಡ ಕಂಪನಿಗಳು, ಬಂಡವಾಳಶಾಹಿಗಳನ್ನು ಗುರಿಯಾಗಿಸಿಕೊಂಡು ಈ ಕಾಯ್ದೆಯನ್ನು ರೂಪಿಸಲಾಗಿದೆ. ಖಾಸಗಿ ವರ್ತಕರು ಮಾರುಕಟ್ಟೆಯ ಪ್ರಾಂಗಣದ ಹೊರಗೆ ಯಾವುದೇ ಟೆಂಡರ್‌, ಹರಾಜುಗಳಿಲ್ಲದೇ ಅವರ ಇಷ್ಟ ಬಂದ ಹಾಗೆ ರೈತರಿಂದ ಖರೀದಿಸಲು ಅವಕಾಶ ನೀಡಲಾಗಿದೆ. ಇವರ ಮೇಲೆ ದರ ನಿಗದಿ, ತೂಕ ವ್ಯತ್ಯಾಸ ಇನ್ನಿತರ ಯಾವುದೇ ವಿಷಯಗಳಲ್ಲಿ ರೈತರಿಗೆ ಆಗುವ ಅನ್ಯಾಯ, ಮೋಸಗಳ ಮೇಲೆ ಮೇಲ್ವಿಚಾರಣೆ ನಡೆಸುವ ಅಧಿಕಾರ ಎಪಿಎಂಸಿಗಳಿಗೆ ಇಲ್ಲದಂತೆ ಮಾಡಲಾಗಿದೆ’ ಎಂದು ಅವರು ದೂರಿದರು. 

‘ಪ್ರಸ್ತುತ ಮಾರುಕಟ್ಟೆ ಶುಲ್ಕ ಶೆ 1.5ರಷ್ಟಿದ್ದು, ತಿದ್ದುಪಡಿ ಕಾಯ್ದೆಯಲ್ಲಿ ಶೇ 0.35ಕ್ಕೆ ಇಳಿಸಲಾಗಿದೆ. ಈ ಪೈಕಿ ಶೇ 0.14ರಷ್ಟನ್ನು ಸಮಿತಿಯ ನಿರ್ವಹಣೆಗೆ ಉಪಯೋಗಿಸಲು ಸೂಚಿಸಲಾಗಿದೆ. ಆದರೆ, ಶೇ 0.14ರಷ್ಟು ಹಣದಲ್ಲಿ ನಿರ್ವಹಣೆ ಮಾಡಲು ಸಾಧ್ಯವೇ ಇಲ್ಲ. ಇದರಿಂದ ಕಾಲ ಕ್ರಮೇಣ ಎಪಿಎಂಸಿಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದರು. 

‘ಸೋಮವಾರ ನಡೆಯಲಿರುವ ಕರ್ನಾಟಕ ಬಂದ್‌ ಅನ್ನು ನಾವು ಬೆಂಬಲಿಸುತ್ತೇವೆ. ಇಡೀ ದಿನ ಎಪಿಎಂಸಿ ವಹಿವಾಟು ಸ್ಥಗಿತಗೊಳಿಸಲಿದ್ದೇವೆ’ ಎಂದು ಅವರು ಹೇಳಿದರು. 

ಎಪಿಎಂಸಿ ಸದಸ್ಯ ಬಿ.ಕೆ.ರವಿಕುಮಾರ್ ಅವರು ಮಾತನಾಡಿ, ‘ ಬಿಜೆಪಿ ಸರ್ಕಾರವು ಎಪಿಎಂಸಿಗಳೊಂದಿಗೆ, ಅದರ ಪ್ರತಿನಿಧಿಗಳೊಂದಿಗೆ ಯಾವುದೇ ಚರ್ಚೆ ಮಾಡದೇ, ಸದನದಲ್ಲೂ ಸರಿಯಾಗಿ ಚರ್ಚಿಸದೇ ಬಲವಂತವಾಗಿ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿಗಳಿಗೆ ಹಾಗೂ ರೈತರಿಗೆ ತೊಂದರೆಯಾಗಲಿದೆ. ಲಾಭದಾಯಕವಾಗಿ ನಡೆಯುತ್ತಿರುವ ಎಪಿಎಂಸಿಗಳು ನಷ್ಟ ಅನುಭವಿಸಲಿವೆ’ ಎಂದರು. 

ಗುಂಡ್ಲುಪೇಟೆ ಎಪಿಎಂಸಿ ಅಧ್ಯಕ್ಷ ಶಿವಮಾದಪ್ಪ, ಉಪಾಧ್ಯಕ್ಷೆ ನಾಗಮ್ಮ, ಚಾಮರಾಜನಗರ ಎಪಿಎಂಸಿ ಸದಸ್ಯ ಶಂಕರಮೂರ್ತಿ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು