ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಅಡಿಕೆ ಬೆಳೆ ಪ್ರದೇಶ ಹೆಚ್ಚಳ

ಖರ್ಚು ಕಡಿಮೆ, ಲಾಭ ಹೆಚ್ಚು, ಅಡಿಕೆ ಮೇಲೆ ರೈತರ ಆಸಕ್ತಿ
Last Updated 15 ನವೆಂಬರ್ 2022, 4:15 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಅಡಿಕೆ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದ್ದು, ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆಯುವ ಪ್ರದೇಶ ವಿಸ್ತಾರವಾಗುತ್ತಿದೆ.

ತೋಟಗಾರಿಕಾ ಇಲಾಖೆಯಲ್ಲಿ ಲಭ್ಯವಿರುವ ಅಂಕಿ ಅಂಶಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.ಮಿಶ್ರ ಬೆಳೆ ಬೆಳೆಯುವ ಬಹುತೇಕ ರೈತರು ತಮ್ಮ ಜಮೀನಿನ ಒಂದಷ್ಟು ಜಾಗದಲ್ಲಿ ಅಡಿಕೆ ಗಿಡಗಳನ್ನು ನೆಡುತ್ತಿದ್ದಾರೆ.

2016-17ರಲ್ಲಿ ಜಿಲ್ಲೆಯಲ್ಲಿ 315 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆ ಇತ್ತು. 2020–21ನೇ ಸಾಲಿನಲ್ಲಿ ಇದು 1,105.02 ಹೆಕ್ಟೇರ್‌ಗೆ ಹೆಚ್ಚಿದೆ. 2021–22ರ ಮಾಹಿತಿ ಲಭ್ಯವಾಗಿಲ್ಲ. ಅದಕ್ಕಿಂತಲೂ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ಚಾಮರಾಜನಗರದಲ್ಲೇ ಹೆಚ್ಚು ಬೆಳೆಯಲಾಗುತ್ತಿದೆ. ಬೆಳೆ ವಿಸ್ತರಣೆ ಪ್ರಮಾಣವೂ ಇಲ್ಲಿ ವೇಗವಾಗಿ ಏರುತ್ತಿದೆ. ಉಳಿದ ತಾಲ್ಲೂಕುಗಳಲ್ಲಿ ಬೆಳೆ ವಿಸ್ತರಣೆ ನಿಧಾನವಾಗಿ ನಡೆಯುತ್ತಿದೆ.

ಜಿಲ್ಲೆಯಲ್ಲಿ ಮಲೆನಾಡು ಮಾದರಿಯಲ್ಲಿ ಹಸಿ ಅಡಿಕೆಯನ್ನು ಕೊಯ್ದು, ಸುಲಿದು ಉಂಡೆ ಅಥವಾ ಕತ್ತರಿಸಿ ಬೇಯಿಸಿ, ಒಣಗಿಸಿ ಮಾರಾಟ ಮಾಡಲಾಗುತ್ತದೆ. ಕೆಂಪಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ.

ಕೆಲವು ಬೆಳೆಗಾರರು ತಮ್ಮ ಅಡಿಕೆ ತೋಟವನ್ನು ವ್ಯಾಪಾರಿಗಳಿಗೆ ಗುತ್ತಿಗೆಗೆ ನೀಡಿದರೆ ಇನ್ನೂ ಕೆಲವರು ಹಸಿ ಅಡಿಕೆಯಲ್ಲಿ ಕ್ವಿಂಟಲ್‌ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಡಿಕೆಯನ್ನು ಸುಲಿದು, ಬೇಯಿಸಿ ಒಣಗಿಸಿ ಕೊಡುವ ಬೆಳೆಗಾರರು ಇಲ್ಲಿ ವಿರಳ. ದೊಡ್ಡ ಮಟ್ಟದಲ್ಲಿ ಅಡಿಕೆ ಖರೀದಿಸುವ ವ್ಯಾಪಾರಿಗಳೇ ಆ ಕೆಲಸ ಮಾಡುತ್ತಾರೆ.

ಕಾರಣ ಏನು?: ಬೆಳೆ ನಿರ್ವಹಣೆ ಸುಲಭ, ಲಾಭ ಹೆಚ್ಚು ಎಂಬ ಕಾರಣಕ್ಕೆ ರೈತರು ಅಡಿಕೆಯ ಮೊರೆ ಹೋಗುತ್ತಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು, ಬೆಳೆಗಾರರು, ವ್ಯಾಪಾರಿಗಳು ಹೇಳುತ್ತಾರೆ.

‘ನಾನು ಎರಡು ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆದಿದ್ದೇನೆ. ಹಸಿ ಅಡಿಕೆಯನ್ನು ಕ್ವಿಂಟಲ್‌ ದರದಲ್ಲಿ ಮಾರಾಟ ಮಾಡುತ್ತೇನೆ. ವ್ಯಾಪಾರಿಗಳೇ ಬಂದು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ. ಅಡಿಕೆ ಬೆಳೆಯ ನಿರ್ವಹಣೆ ಸುಲಭ. ಹೆಚ್ಚು ಖರ್ಚು ಮಾಡಬೇಕಿಲ್ಲ. ಅಡಿಕೆಗೆ ಬೆಲೆಯೂ ಹೆಚ್ಚಿರುವುದರಿಂದ ನಷ್ಟ ಆಗುವ ಪ್ರಮೇಯ ಇಲ್ಲ. ಈ ಬಾರಿ ಕ್ಚಿಂಟಲ್‌ಗೆ ₹5,000ದಂತೆ ಕೊಟ್ಟಿದ್ದೇನೆ’ ಎಂದು ತಾಲ್ಲೂಕಿನ ಗೂಳಿಪುರದ ಬೆಳೆಗಾರ ಮಹದೇವ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚು ನೀರು ಬೇಕು: ಅಡಿಕೆ ಬೆಳೆ ಹೆಚ್ಚು ನೀರು ಬೇಡುತ್ತದೆ. ನೀರಾವರಿ ಇರುವ ಪ್ರದೇಶದಲ್ಲಿ ರೈತರು ಇದನ್ನು ಬೆಳೆಯುತ್ತಾರೆ. ನೀರಾವರಿ ವ್ಯವಸ್ಥೆ ಇಲ್ಲದವರು ಕೊಳವೆ ಬಾವಿ ವ್ಯವಸ್ಥೆ ಮಾಡಿಕೊಂಡು ನೀರು ಪೂರೈಸುತ್ತಾರೆ.

ಕಾಡದ ರೋಗ: ದಕ್ಷಿಣ ಕನ್ನಡ, ಮಲೆನಾಡು ಪ್ರದೇಶದಲ್ಲಿ ಮಳೆ ಹೆಚ್ಚಿರುವುದರಿಂದ ಮಳೆಗಾಲದಲ್ಲಿ ಅಡಿಕೆಗೆ ಕೊಳೆರೋಗ ಬಂದು ಬೆಳೆ ನಷ್ಟ ಆಗುತ್ತದೆ. ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿರುವುದರಿಂದ ಕೊಳೆರೋಗದ ಪ್ರಕರಣಗಳು ಕಡಿಮೆ ಹಾಗೂ ಬೆಳೆಗೆ ಔಷಧಿ ಸಿಂಪಡಿಸುವ ಕೆಲಸ ಇಲ್ಲ. ನಿಯಮಿತವಾಗಿ ನೀರು ಹಾಗೂ ಗೊಬ್ಬರ ಹಾಕಿದರೆ ಸಾಕು. ಇಳುವರಿ ಉತ್ತಮವಾಗಿ ಬರುತ್ತದೆ. ಬೆಲೆಯೂ ಹೆಚ್ಚು ಸಿಗುತ್ತದೆ.

ಇಳುವರಿಗೆ 7 ವರ್ಷ ಕಾಯಬೇಕು

‘ಗಿಡ ಹಾಕಿ ಐದು ವರ್ಷಗಳಿಗೆ ಅಡಿಕೆ ಫಸಲು ಬರಲು ಆರಂಭಿಸುತ್ತದೆ. ಪೂರ್ಣ ಇಳುವರಿ ಸಿಗಲು ಏಳು ವರ್ಷಗಳು ಕಾಯಬೇಕು. ಬಹುತೇಕ ರೈತರು ವರ್ಷಕ್ಕೊಮ್ಮೆ ಗೊಬ್ಬರ ಹಾಕುತ್ತಾರೆ. ಹಸಿ ಅಡಿಕೆಯನ್ನೇ ಮಾರಾಟ ಮಾಡುತ್ತಾರೆ. ಇಲ್ಲವೇ ಜಮೀನನ್ನೇ ಗುತ್ತಿಗೆ ಕೊಡುತ್ತಾರೆ’ ಎಂದು ಅಡಿಕೆ ವ್ಯಾಪಾರಿ ಕೋಡಿಮೋಳೆ ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವರ್ಷದ ಆರಂಭದಲ್ಲಿ ಬೆಲೆ ಹೆಚ್ಚಿತ್ತು. ಈಗ ಸ್ವಲ್ಪ ಕಡಿಮೆಯಾಗಿದೆ. ಹಸಿ ಅಡಿಕೆಗೆ ಕ್ವಿಂಟಲ್‌ಗೆ ₹5000ದಿಂದ ₹5,500ವರೆಗೆ ಇದೆ. ಉಂಡೆಗೆ ₹450 (ಕ್ವಿಂಟಲ್‌ಗೆ ₹45 ಸಾವಿರ), ಕೆಂಪಡಿಕೆಗೆ ಕೆಜಿಗೆ ₹580ರಿಂದ ₹600ರವರೆಗೆ (₹58 ಸಾವಿರದಿಂದ) ಬೆಲೆ ಇದೆ’ ಎಂದು ಅವರು ಮಾಹಿತಿ ನೀಡಿದರು.

ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ನಿರ್ವಹಣೆ ಸುಲಭ ಈ ಕಾರಣಕ್ಕೆ ರೈತರು ಅಡಿಕೆ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ
- ಬಿ.ಎಲ್‌.ಶಿವಪ್ರಸಾದ್‌, ತೋಟಗಾರಿಕಾ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT