ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಕಳ್ಳ ಸಾಗಣೆ: ಕಾನೂನು ಅರಿವು ಕಾರ್ಯಕ್ರಮ

Last Updated 19 ಜನವರಿ 2021, 15:50 IST
ಅಕ್ಷರ ಗಾತ್ರ

ಚಾಮರಾಜನಗರ: ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ ಮಾನವ ಕಳ್ಳ ಸಾಗಾಣಿಕೆ ಮಾಡುವುದು ಕಾನೂನು ಬಾಹಿರವಾಗಿದ್ದು ಇಂತಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನಪುರಿ ಅವರು ಮಂಗಳವಾರ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಶಿಶು ಅಭಿವೃದ್ದಿ ಇಲಾಖೆಗಳು ನಗರದಲ್ಲಿ ಹಮ್ಮಿಕೊಂಡಿದ್ದ ಮಾನವ ಸಾಗಾಣಿಕೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಹಿಳೆಯರು, ಮಕ್ಕಳನ್ನು ಪದಾರ್ಥಗಳಂತೆ ಮಾರಾಟ ಮಾಡಿ ವಾಮ ಮಾರ್ಗದಿಂದ ಹಣ ಸಂಪಾದನೆ ಮಾಡುವವರು ಇದ್ದಾರೆ. ಮಾನವ ಕಳ್ಳ ಸಾಗಾಣಿಕೆಯಂತಹ ನೀಚ ಕಾರ್ಯಕ್ಕೆ ಇಳಿಯುವವರ ಬಗ್ಗೆ ಮಾಹಿತಿ ಇದ್ದವರು ಯಾವುದೇ ಅಂಜಿಕೆ ಮಾಡದೇ ದೂರು ನೀಡಬೇಕು’ ಎಂದರು.

‘ಮಹಿಳೆಯರು ಆಸೆ ಆಮಿಷಗಳಿಗೆ ಒಳಗಾದರೆ, ಮಕ್ಕಳು ಅರಿವಿಲ್ಲದೇ ಮಾನವ ಸಾಗಾಣಿಕೆಗೆ ಒಳಗಾಗುತ್ತಾರೆ. ಮಹಿಳೆಯರು ಹೊರ ಹೋಗಬೇಕಾದರೆ ಒಂಟಿಯಾಗಿ ಹೋಗದೆ ಇನ್ನೊಬ್ಬರ ಒಡಗೂಡಿ ಎಚ್ಚರಿಕೆಯಿಂದ ಇದ್ದರೆ ಮಾನವ ಕಳ್ಳ ಸಾಗಾಣಿಕೆಗೆ ಬಲಿಯಾಗುವುದನ್ನು ತಪ್ಪಿಸಬಹುದು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ. ವಿನಯ್ ಅವರು ಮಾತನಾಡಿ, ‘ಬಡವರು ಮತ್ತು ನಿರ್ಗತಿಕರ ಮಕ್ಕಳನ್ನೇ ಗುರಿಯಾಗಿಸಿಕೊಂಡು ಅಪಹರಿಸುವ ಜಾಲಗಳು ಹುಟ್ಟಿಕೊಂಡಿವೆ. ಮಕ್ಕಳ ಅಂಗಾಂಗಗಳನ್ನು ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಹೀನ ಕೃತ್ಯ ತಪ್ಪಿಸುವುದು ನಾಗರೀಕ ಸಮಾಜದ ಜವಾಬ್ದಾರಿ. ಈ ನಿಟ್ಟಿನಲ್ಲಿ ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ ಅವರು ಮಾತನಾಡಿ, ‘ಮಾನವ ಸಾಗಾಣಿಕೆ ಅಸಮಾನತೆ ಸಮಾಜ, ಶೋಷಣೆಯ ಪ್ರತೀಕ. ಮಾನವ ಸಾಗಾಣಿಕೆ ತಡೆಯಲು ಪ್ರಬಲ ಇಚ್ಛಾ ಶಕ್ತಿ ಇರಬೇಕು. ಅಧಿಕಾರಿಗಳು ಸೇರಿದಂತೆ ಎಲ್ಲಾ ಸಂಘಟನೆಗಳು ಪ್ರಯತ್ನ ಮಾಡಿದರೆ ಮಾನವ ಸಾಗಾಣಿಕೆಯನ್ನು ತಡೆಗಟ್ಟಬಹುದು’ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಮಾತನಾಡಿದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಮಂಜು ಹರವೆ, ಶಿಶು ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕರಾದ ಕಸ್ತೂರಿ, ಸಾಧನ ಸಂಸ್ಥೆಯ ನಿರ್ದೇಶಕ ಟಿ.ಜೆ.ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT