ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪನಿಗೆ ಉಯ್ಯಾಲೋತ್ಸವ, ಒಡವೆ ಅಲಂಕಾರ

ಮಹದೇಶ್ವರ ಬೆಟ್ಟದಲ್ಲಿ ಆಯುಧ ಪೂಜೆ, ವಿಜಯ ದಶಮಿ ಪೂಜೆ
Last Updated 4 ಅಕ್ಟೋಬರ್ 2022, 6:17 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಆಯುಧಪೂಜೆ ಹಾಗೂ ವಿಜಯ ದಶಮಿ ಅಂಗವಾಗಿ ಮಂಗಳವಾರ (ಅ.4) ಮತ್ತು ಬುಧವಾರ (ಅ.5) ಮಹಾನವಮಿ ಹಾಗೂ ವಿಜಯದಶಮಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.

ನವರಾತ್ರಿ ಆರಂಭಗೊಂಡ ಸೆ.26ರಿಂದಲೇ ವ್ರತ ಹಾಗೂ ಉಯ್ಯಾಲೋತ್ಸವ ಆರಂಭಗೊಂಡಿದೆ. ಮಂಗಳವಾರ ಮಹಾನವಮಿ, ಆಯುಧಪೂಜೆ ಅಂಗವಾಗಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಬುಧವಾರ ವಿಜಯದಶಮಿ, ಕುದುರೆ ವಾಹನೋತ್ಸವ, ದಶಮಿ ಪೂಜೆ ನೆರವೇರಲಿದೆ.

ಬೇಡಗಂ‍ಪಣ ಬುಡಕಟ್ಟು ಪರಂಪರೆಯ ಪದ್ಧತಿಯಂತೆ ಮಹದೇಶ್ವರ ಸ್ವಾಮಿಗೆ ದಸರಾ ಪೂಜೆ ಹಾಗೂ ಮಹಾನವಮಿಯ ಪೂಜಾ ಕಾರ್ಯಗಳು ನಡೆಯುವುದು ವಿಶೇಷ. ಸಾಲೂರು ಗುರು ಪರಂಪರೆಯ ಸಮ್ಮುಖದಲ್ಲಿಬೇಡಗಂಪಣ ಕುಲದ ಶಿಷ್ಯ ಪರಂಪರೆಯ ಪದ್ಧತಿಯಂತೆ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಉಯ್ಯಾಲೋತ್ಸವ: ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ದೇವಾಲಯದಲ್ಲಿ ಉಯ್ಯಾಲೋತ್ಸವ ನಡೆಯುತ್ತದೆ.

ಆಯುಧ ಪೂಜೆಯಂದು ವಿಶೇಷವಾಗಿ ಈ ಉತ್ಸವ ನಡೆಯುತ್ತಿದೆ.ಉಯ್ಯಾಲೆ ಉತ್ಸವಕ್ಕೆ ಅಗತ್ಯವಿರುವ ಬಿದಿರನ್ನು ಕಾಡಿನಿಂದ ತಂದು ದೇವಾಲಯದ ಪಶ್ಚಿಮ ದಿಕ್ಕಿನ ಕಂಠ ಶಾಲೆಯ ಆವರಣದಲ್ಲಿ ಹಸಿರು ಚಪ್ಪರವನ್ನು ಹಾಕಿ ಪಟ್ಟದ ತೂಗು ಉಯ್ಯಾಲೆಯ ತೊಟ್ಟಿಲು ಮಂಟಪವನ್ನು ನಿರ್ಮಾಣ ಮಾಡಲಾಗುತ್ತದೆ.

ದೇವಾಲಯದಲ್ಲಿ ಇರುವ ಪುರಾತನ ಪಟ್ಟಗಾರ ರಾಯಣ್ಣ ನಾಯಕನ ಯುದ್ಧ ಬಳಕೆಯ ಕತ್ತಿ, ಕಠಾರಿ, ಭರ್ಜಿಗಳು, ಪಟ್ಟದ ಕತ್ತಿ, ಖಡ್ಗ ಕಠಾರಿಗಳಿಗೆ ಹಾಗೂ ಉತ್ಸವದ ದಂಡಾಯುಧಗಳನ್ನು ದೇವಾಲಯದ ಕೋಶಗಾರದಿಂದ ಹೊರತೆಗೆದು ಮಜ್ಜನ ಬಾವಿಗೆ ಮೆರವಣಿಗೆಯಲ್ಲಿ ತೆರಳಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ನಂತರ ಈ ಆಯುಧಗಳನ್ನು ತೊಟ್ಟಿಲಿನ ಮುಂಭಾಗದಲ್ಲಿ ಇರಿಸಿ ಪೂಜಿಸಲಾಗುತ್ತದೆ.

ಆಯುಧ ಪೂಜೆಯಂದುಸಂಜೆಯ ತ್ರಿಕಾಲ ಪೂಜೆ ನಂತರ ಸ್ವಾಮಿಯ ಉತ್ಸವ ಮೂರ್ತಿಯನ್ನು ಧೂಪ ದೀಪದ, ಮರುಗ, ಮಲ್ಲಿಗೆ, ಜಾಜಿ, ಸಂಪಿಗೆಯ ಹೂವಿನ ಅಲಂಕಾರದಲ್ಲಿ ಜಾಗಟೆ, ನಗಾರಿ, ದವಣೆ ಹಾಗೂ ದೀವಟಿಗೆಯ ಸೇವೆಯಲ್ಲಿ ಮಂಗಳ ವಾದ್ಯಗಳ ಸಮೇತವಾಗಿ ಮೆರವಣಿಗೆಯಲ್ಲಿ ತಂದು ಬಿದಿರಿನಿಂದ ನಿರ್ಮಿಸಲಾಗಿರುವ ತೂಗು ಮಂಟಪದಲ್ಲಿ ಇರಿಸಿ ಬೇಡಗಂಪಣರ ಸಂಪ್ರದಾಯ ಉಯ್ಯಾಲೆಯ ಜೋಗುಳದ ಪದವನ್ನು ಹಾಡಿ ತೊಟ್ಟಿಲು ತೂಗಿ ಪೂಜೆ ಮಾಡಲಾಗುತ್ತದೆ.

ಮೈಸೂರು ಅರಸರು ಕೊಟ್ಟ ಆಭರಣ

ವಿಜಯ ದಶಮಿಯಂದು ಮಹದೇಶ್ವರ ಸ್ವಾಮಿಗೆ ಮೈಸೂರು ಸಂಸ್ಥಾನದ ಅರಸರು ಕೊಡುಗೆಯಾಗಿ ನೀಡಿದ ಒಡವೆಗಳ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.

ನಾಲ್ವಡಿ ಕೃಷ್ಣರಾಜ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್, ರಾಣಿ ಕೆಂಪು ಚೆಲುವಾಜಮ್ಮಣ್ಣಿ, ಜಯಚಾಮರಾಜೇಂದ್ರ ಒಡೆಯರ್ ಸ್ವಾಮಿಗೆ ನೀಡಿರುವ ಗಂಡಭೇರುಂಡ ಲಾಂಛನ ಹೊಂದಿರುವ ಬಂಗಾರದ ಸರಗಳು, ಮೋಹನ ಮಾಲೆಯ ಬಂಗಾರದ ಹಾರ, ಎರಡು ಎಳೆಗಳ ಮುತ್ತಿನ ಹಾರ, ವಜ್ರದ ಪದಕ, ರತ್ನ ಖಚಿತ ಪಚ್ಚೆಮಣಿಯ ಪದಕ, ಏಳು ಎಳೆಯ ಮುತ್ತಿನ ಹಾರದ 15 ಪಚ್ಚೆಮಣಿಯ ಅಷ್ಟ ವಜ್ರದ ಪದಕ, 33 ಗುಂಡುಗಳ ಚಿನ್ನದ ಸರದ ಜೊತೆಗೆ 30 ಗುಂಡುಗಳ ನೀಲಿ ಹರಳಿನ ಪದಕ, ಬಹುರತ್ನ ವಂಕಿ ಹೂವಿನ ಕೀರಿಟ, ಶೇಷಣ್ಣ ಒಡೆಯರ ಬಂಗಾರದ ಕಿರೀಟ, ಮುಕ್ಕಣು ಸೇರಿದಂತೆ ವಿವಿಧ ಆಭರಣಗಳಿಂದ ವರ್ಷಕ್ಕೆ ಒಮ್ಮೆ ಸ್ವಾಮಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT