ಮಂಗಳವಾರ, ನವೆಂಬರ್ 24, 2020
26 °C
ಕೋವಿಡ್‌–19 ಲೆಕ್ಕಿಸದೆ ವಹಿವಾಟು, ಹೂವು, ಬಾಳೆ ಕಂದು, ಪೂಜಾ ಸಾಮಗ್ರಿಗೆ ಬೇಡಿಕೆ

ಚಾಮರಾಜನಗರ: ಆಯುಧಪೂಜೆ ಖರೀದಿ; ಪೇಟೆಗೆ ಜನರ ದಾಂಗುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಖರೀದಿಗಾಗಿ ಜನರು ಕೋವಿಡ್‌–19 ಲೆಕ್ಕಿಸದೇ ಮಾರುಕಟ್ಟೆ ಶನಿವಾರ ದಾಂಗುಡಿ ಇಟ್ಟರು. 

ನಗರದ ತರಕಾರಿ ಮಾರುಕಟ್ಟೆ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ರಥದ ಬೀದಿ ಹಾಗೂ ಸುತ್ತಮುತ್ತಲಿನ ಬೀದಿಗಳಲ್ಲಿ ಖರೀದಿ, ಮಾರಾಟ ಭರಾಟೆ ಜೋರಾಗಿತ್ತು. ಜನಸಂದಣಿ ಹೆಚ್ಚಾಗಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಭುವನೇಶ್ವರಿ ವೃತ್ತದಲ್ಲೇ ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಪೊಲೀಸರು ತಡೆಯುತ್ತಿದ್ದರು. ದ್ವಿಚಕ್ರವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಕೊಟ್ಟರು. 

ಆಯುಧ ಪೂಜೆಗಾಗಿ ಹೂವುಗಳು, ಬಾಳೆಕಂದು, ಬೂದು ಕುಂಬಳಕಾಯಿ, ನಿಂಬೆಹಣ್ಣು, ಬಾಳೆಹಣ್ಣು ಸೇರಿದಂತೆ ಇತರೆ ಹಣ್ಣುಗಳು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಕೋವಿಡ್–19 ನಿಯಮಗಳ ಪಾಲನೆ ಮಾಡುತ್ತಿರುವುದು ಎಲ್ಲಿಯೂ ಕಂಡು ಬರಲಿಲ್ಲ. 

ಕೆಲವು ವ್ಯಾಪಾರಿಗಳು ಕೆಜಿ ಕುಂಬಳಕಾಯಿಗೆ ₹20ರಂತೆ ಮಾರಾಟ ಮಾಡಿದರೆ ಇನ್ನೂ ಕೆಲವರು ಒಂದು ಕುಂಬಳಕಾಯಿಗೆ ₹20ರಂತೆ ಕೊಟ್ಟರು. ಜೋಡಿ ಬಾಳೆಕಂದು, ಮಾವಿನ ಸೊಪ್ಪಿನ ಕಟ್ಟನ್ನು ₹20ರಿಂದ ₹30ರವರೆಗೆ ಮಾರಾಟ ಮಾಡುತ್ತಿದ್ದರು. 

ಹೂವುಗಳು ತುಟ್ಟಿ: ಹಬ್ಬಕ್ಕೆ ಹೂವುಗಳ ಬೆಲೆ ಗಗನಕ್ಕೇರಿದೆ. ಕನಕಾಂಬರ ಕೆಜಿಗೆ ₹800–₹1000ದವರೆಗೆ ಇದೆ. ಕಾಕಡ ಕೆಜಿಗೆ ₹800, ಸುಂಗಧರಾಜ ₹400, ಚೆಂಡು ಹೂವು ₹120–₹150, ಬಟನ್‌ ಗುಲಾಬಿ ಕೆಜಿಗೆ ₹500 ಹಾಗೂ ಗುಲಾಬಿ ಒಂದಕ್ಕೆ ₹5 ಇತ್ತು. ಹೂವಿನ ಹಾರಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂತು. 

ಭಾನುವಾರ ಹಾಗೂ ಸೋಮವಾರವೂ ಇದೇ ದರ ಮುಂದುವರಿಯಲಿದೆ. ಮಂಗಳವಾರದ ನಂತರ ಬೆಲೆ ಕಡಿಮೆಯಾಗಲಿದೆ ಎಂದು ವ್ಯಾಪಾರಿಗಳು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.