ಗುರುವಾರ , ಮೇ 19, 2022
21 °C
ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 115ನೇ ಜನ್ಮ ದಿನಾಚರಣೆ

ದುರ್ಬಲರು, ಶೋಷಿತರ ಅಭಿವೃದ್ಧಿಯಿಂದ ಸಮ ಸಮಾಜ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ದುರ್ಬಲರು ಹಾಗೂ ಶೋಷಿತರ ಅಭಿವೃದ್ಧಿಯಾದಾಗ ಸಮ ಸಮಾಜ ನಿರ್ಮಾಣ ಸಾಧ್ಯ. ದೇಶದಲ್ಲಿ ದಲಿತರು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಇಡೀ ಸಮುದಾಯ ಒಗ್ಗಟ್ಟಾಗಬೇಕು’ ಎಂದು ಚಿತ್ರದುರ್ಗದ ಆದಿಜಾಂಬವ ಮಹಾಸಂಸ್ಥಾನ ಮಠದ ಕೋಡಿಹಳ್ಳಿ ಶ್ರೀಮದ್ ಕಡಪ ಸಿಂಹಾಸನದ ಷಡಕ್ಷರಮುನಿ ದೇಶೀಕೇಂದ್ರ ಸ್ವಾಮೀಜಿ ಅವರು ಮಂಗಳವಾರ ಅಭಿಪ್ರಾಯ ಪಟ್ಟರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 115ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ನಮ್ಮ ಸಮಾಜದಲ್ಲಿ ಜಾತಿ ಎಂಬುದು ಬಿಗಿಯಾಗಿ ಅಂಟಿಕೊಂಡಿದೆ. ಅದನ್ನು ಅಷ್ಟು ಸುಲಭವಾಗಿ ಕಳೆದುಕೊಳ್ಳಲು ಸಾಧ್ಯವಿಲ್ಲ. ಪ್ರೌಢಿಮೆ ಮತ್ತು ಸಾಧನೆಯಿಂದ ಜಾತಿಯನ್ನು ಕಳೆದುಕೊಳ್ಳಬಹುದು. ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಜಾತಿಯನ್ನು ಮೀರಿದವರ ಸಾಲಿನಲ್ಲಿ ಸೇರುತ್ತಾರೆ’ ಎಂದು ಬಣ್ಣಿಸಿದರು. 

‘ಬಾಬು ಜಗಜೀವನರಾಂ ಅವರು ಕಾರ್ಮಿಕ, ರಕ್ಷಣೆ ಸೇರಿದಂತೆ ಹಲವು ಮಹತ್ವದ ಖಾತೆಗಳನ್ನು ದಕ್ಷತೆಯಿಂದ ನಿರ್ವಹಣೆ ಮಾಡಿದ್ದರು. ಹಸಿವಿನ ಬವಣೆ ನೀಗಲು ಜಾರಿಗೆ ತಂದ ಕ್ರಮಗಳಿಂದ ಹಸಿರು ಕ್ರಾಂತಿಯ ಹರಿಕಾರರು ಎನಿಸಿಕೊಂಡರು. ಯಾವ ವ್ಯಕ್ತಿ ಜನರ ಮನಸ್ಸಿನಲ್ಲಿ ಉಳಿಯುತ್ತಾರೋ ಅವರೇ ಸಾಧಕರು, ಸುಧಾರಕರಾಗಿರುತ್ತಾರೆ. ಅಂತಹವರಲ್ಲಿ ಬಾಬುಜಗಜೀವನ್ ರಾಮ್ ಅವರು ಪ್ರಮುಖರು. ಅವರು ಒಬ್ಬರು ರಾಜ ನೀತಿತಜ್ಞ.  ಸಮಾಜ ಸುಧಾರಕರೂ ಹೌದು’ ಎಂದು ಶ್ರೀಗಳು ಹೇಳಿದರು. 

ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ‘ಸಮಾಜದ ಉನ್ನತಿಗೆ ದುಡಿದ ಮಹನೀಯರ ವಿಚಾರಗಳು ಹಾಗೂ ಆದರ್ಶಗಳನ್ನು ತಿಳಿಯಬೇಕಿದೆ. ಬಾಬು ಜಗಜೀವನ್‌ರಾಂ ಅವರ ಸೇವೆ ಸಾಧನೆಗಳನ್ನು ಅರಿಯಬೇಕಿದೆ. ಸಮಾಜದಲ್ಲಿ ಮೇಲು ಕೀಳು ಭಾವನೆ ತೊಡೆದು ಸಮಾನತೆ ಮೂಡಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕಿದೆ’ ಎಂದರು. 

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ‘ಬಾಬೂಜಿ ಅವರು ದಲಿತರ ವಿಮೋಚನೆಗಾಗಿ 1935ರಲ್ಲಿ ಹರಿಜನ ಸೇವಕ ಸಂಘ ಸ್ಥಾಪಿಸಿದರು. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದರು. ಅಸ್ಪೃಶ್ಯತೆ ನಿರ್ಮೂಲನೆಗೂ ಶ್ರಮಿಸಿದರು’ ಎಂದರು‌.

ಬೆಂಗಳೂರು ವಿವಿಯ ಡಾ. ಬಾಬುಜಗಜೀವನ ರಾಮ್ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಪ್ರೊ. ಬಿ.ಗಂಗಾಧರ್ ಅವರು ವಿಶೇಷ ಉಪನ್ಯಾಸ ನೀಡಿದರು. 

ಸನ್ಮಾನ: ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆ ಮಾಡಿ ಹೆಚ್ಚು ಚಿನ್ನದ ಪದಕ ಮತ್ತು ನಗದು ಬಹುಮಾನ ಗಳಿಸಿದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಮಹದೇವಸ್ವಾಮಿ ಹಾಗೂ ತೇಜಸ್ವಿನಿ ಅವರನ್ನು ಸನ್ಮಾನಿಸಲಾಯಿತು. 

ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ  ಪಿ.ಬಿ. ಶಾಂತಮೂರ್ತಿ ಕುಲಗಾಣ, ನಗರಸಭಾ ಸದಸ್ಯರಾದ ಮಹದೇವಯ್ಯ, ಬಸವಣ್ಣ, ಜಿ.ಪಂ ಸಿಇಒ ಕೆ.ಎಂ. ಗಾಯಿತ್ರಿ, ಎಸ್‌ಪಿ ಟಿ.ಪಿ. ಶಿವಕುಮಾರ್ ಇತರರು ಇದ್ದರು. 

ಭಾವಚಿತ್ರ ಮೆರವಣಿಗೆ, ಸಿಹಿ ವಿತರಣೆ

ವೇದಿಕೆ ಸಮಾರಂಭಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಲ್ಲಿ ಡಾ. ಬಾಬುಜಗಜೀವನ್ ರಾಮ್ ಅವರ ಭಾವಚಿತ್ರದ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು.

ಡೊಳ್ಳು ಕುಣಿತ, ಗೊರವರ ನೃತ್ಯ, ಬ್ಯಾಂಡ್‌, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಸಮಾರಂಭ ಆಯೋಜನೆಯಾಗಿದ್ದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಮುಕ್ತಾಯ ಕಂಡಿತು.  

ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್‌ ಅವರು ಲಾಡು ವಿತರಿಸಿದರು. ಜನಪ್ರತಿನಿಧಿಗಳು, ಸರ್ಕಾರಿ ನೌಕಕರು, ಕಲಾವಿದರು, ಸಾರ್ವಜನಿಕರಿಗೆ ಸಿಹಿ ವಿತರಿಸಿ ಬಾಬುಜಗಜೀವನರಾಂ ಜಯಂತಿಯ ಶುಭಾಶಯ ಕೋರಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು