ಶುಕ್ರವಾರ, ಅಕ್ಟೋಬರ್ 22, 2021
29 °C
ರಾಷ್ಟ್ರಪತಿ ಭೇಟಿ: ಹದಗೆಟ್ಟ ರಸ್ತೆಗಳಿಗೆ ಟಾರು, ನಗರದಾದ್ಯಂತ ಸ್ವಚ್ಛತಾ ಕಾರ್ಯ

ಹೊಂಡ ಗುಂಡಿಗಳ ರಸ್ತೆಗಳಿಗೆ ದುರಸ್ತಿ ಭಾಗ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಹೊರವಲಯದ ಯಡಬೆಟ್ಟದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಬಳಿ ನಿರ್ಮಿಸಲಾಗಿರುವ 450 ಹಾಸಿಗೆಗಳ ಬೋಧನಾ ಆಸ್ಪತ್ರೆಯ ಉದ್ಘಾಟನೆಗೆ ಇದೇ 7ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಬರಲಿರುವುದರಿಂದ ಅವರ ಭೇಟಿಗಾಗಿ ಜಿಲ್ಲಾಡಳಿತ ಹಾಗೂ ವೈದ್ಯಕೀಯ ಆಡಳಿತ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಮಾಡುತ್ತಿದೆ.

ರಾಷ್ಟ್ರಪತಿ ಅವರಲ್ಲದೇ ರಾಜ್ಯಪಾಲ ತ್ಯಾವರಚಂದ್‌ ಗೆಹಲೋತ್‌ ಅವರು ಕೂಡ ಬರುವುದು ದೃಢಪಟ್ಟಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಸೇರಿದಂತೆ ಹಲವು ಗಣ್ಯರು ಅಂದು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ, ಜಿಲ್ಲಾಡಳಿತವು ಜಿಲ್ಲಾ ಕೇಂದ್ರಕ್ಕೆ ಹೊಸ ರೂಪ ನೀಡುತ್ತಿದೆ. 

ರಾಷ್ಟ್ರಪತಿ ಹಾಗೂ ಇತರ ಗಣ್ಯರು ಬರುವ ನೆಪದಲ್ಲಿ ಹಲವು ತಿಂಗಳುಗಳಿಂದ ಹೊಂಡ ಗುಂಡಿಗಳಿಂದ ಕೂಡಿದ್ದ ರಸ್ತೆಗಳಿಗೆ ಡಾಂಬರು ಭಾಗ್ಯ ದೊರೆತಿದೆ. ನಗರದ ಗುಂಡ್ಲುಪೇಟೆ ವೃತ್ತದಿಂದ ವೈದ್ಯಕೀಯ ಕಾಲೇಜಿಗೆ ತಿರುಗುವ ರಸ್ತೆಯವರೆಗೂ ಹೊಸದಾಗಿ ಡಾಂಬರು ಹಾಕಲಾಗಿದೆ. ಈ ರಸ್ತೆಯು ಹಲವು ಸಮಯದಿಂದ ಹದಗೆಟ್ಟಿತ್ತು. ದೊಡ್ಡ ದೊಡ್ಡ ಗುಂಡಿಗಳ ಕಾರಣಕ್ಕೆ ವಾಹನ ಸಂಚಾರಕ್ಕೆ ತೊಡಕಾಗಿತ್ತು. 

ತಾಲ್ಲೂಕಿನ ಸಂತೇಮರಹಳ್ಳಿಯಿಂದ ಮೂಗೂರು ಕ್ರಾಸ್‌ವರೆಗಿನ ಎಂಟು ಕಿ.ಮೀ ಉದ್ದದ ರಸ್ತೆಯೂ ಸಂಪೂರ್ಣವಾಗಿ ಹಾಳಾಗಿತ್ತು. ರಾಷ್ಟ್ರಪತಿ ಹಾಗೂ ಇತರ ಗಣ್ಯರ ಭೇಟಿಯು ಆ ರಸ್ತೆಯೂ ದುರಸ್ತಿ ಕಾಣುವಂತೆ ಮಾಡಿದೆ. ರಸ್ತೆಗೆ ಹೊಸ ಡಾಂಬರು ಹಾಕುವ, ಗುಂಡಿಗಳನ್ನು ಮುಚ್ಚುವ ಕೆಲಸ ಪ್ರಗತಿಯಲ್ಲಿದೆ. ಉಸ್ತುವಾರಿ ಸಚಿವರ ನೇತೃತ್ವದಲ್ಲಿ, ಸಂಸದರ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿ ಈ ರಸ್ತೆಯ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗುತ್ತಿತ್ತು. ಹೊಸ ಯೋಜನೆಯ ಬಗ್ಗೆ ಅಧಿಕಾರಿಗಳು ಪ್ರಸ್ತಾಪಿಸಿದ್ದರೇ ವಿನಾ, ದುರಸ್ತಿಗೆ ಕ್ರಮ ಕೈಗೊಂಡಿರಲಿಲ್ಲ. ಈಗ ದಿಢೀರ್‌ ಆಗಿ ಡಾಂಬರು ಹಾಕುತ್ತಿರುವುದು ಸ್ಥಳಿಯರಲ್ಲಿ ಅಚ್ಚರಿಗೆ ಕಾರಣವಾಗಿದೆ. ಕೆಲಸದ ಗುಣಮಟ್ಟದ ಬಗ್ಗೆಯೂ ಅವರಿಗೆ ಸಂಶಯವಿದೆ. 

ಸಂತೇಮರಹಳ್ಳಿ ರಸ್ತೆಯಲ್ಲಿ ಮಂಗಲದ ಬಳಿಯೂ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ ನಡೆಯುತ್ತಿದೆ.

ರಾಷ್ಟ್ರಪತಿ ಅವರು ಹೆಲಿಕಾಪ್ಟರ್‌ನಲ್ಲಿ ಬಂದು, ಅದರಲ್ಲೇ ತೆರಳುತ್ತಾರೆ. ಆದರೆ, ಮುಖ್ಯಮಂತ್ರಿಯವರು ರಸ್ತೆ ಮಾರ್ಗವಾಗಿ ಬರುವ ಸಾಧ್ಯತೆ ಇದೆ. ಇದಲ್ಲದೇ, ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ ಪ್ರಯಾಣ ಸಾಧ್ಯವಾಗದೇ ಇದ್ದರೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಸ್ತೆ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ನಗರದಲ್ಲೂ ದುರಸ್ತಿ: ರಸ್ತೆಗಳು ಮಾತ್ರವಲ್ಲದೇ, ನಗರದಲ್ಲೂ ಸಣ್ಣ ಪುಟ್ಟ ದುರಸ್ತಿ ಕಾರ್ಯವನ್ನು ಮಾಡಲಾಗುತ್ತಿದೆ. ಭುವನೇಶ್ವರಿ ವೃತ್ತದ ಬಳಿ ಹಾಗೂ ಬಿ.ರಾಚಯ್ಯ ಜೋಡಿ ರಸ್ತೆಯ ಡಿವೈಎಸ್‌ಪಿ ಕಚೇರಿ ಬಳಿ ಕಾಂಕ್ರೀಟ್‌ ಕಿತ್ತು ಬಂದ ಜಾಗಕ್ಕೆ ಹೊಸದಾಗಿ ಕಾಂಕ್ರೀಟ್‌ ಹಾಕಲಾಗಿದೆ. ಜೋಡಿ ರಸ್ತೆಗೆ ಬೀದಿ ದೀಪ ಅಳವಡಿಸುವಾ‌ಗ ವಿಭಜಕದ ಮೇಲೆ ಹಾಕಲಾಗಿದ್ದ ವಿದ್ಯುತ್‌ ವೈರ್‌ನ ಪೈಪ್‌ ಕಾಣದಂತೆ ಕಾಂಕ್ರೀಟ್‌ ಹಾಕಲಾಗುತ್ತಿದೆ. ಜೋಡಿ ರಸ್ತೆಯ ಬದಿಯಲ್ಲಿ ಕಳೆಗಿಡ, ಮಣ್ಣನ್ನು ತೆಗೆಯುವ ಕೆಲಸವೂ ನಡೆಯುತ್ತಿದೆ. 

ಪ್ರಮುಖ ಸ್ಥಳಗಳಲ್ಲಿ ವಿದ್ಯುತ್‌ ಅಲಂಕಾರ

ಇದೇ 7ರಿಂದ ನಾಲ್ಕು ದಿನಗಳ ಕಾಲ ಜಿಲ್ಲಾ ದಸರಾ ನಡೆಯಲಿರುವುದರಿಂದ ಜಿಲ್ಲಾಡಳಿತ ಭವನ ಸೇರಿದಂತೆ ಪ್ರಮುಖ ವೃತ್ತಗಳು, ಸ್ಥಳಗಳಲ್ಲಿ ವಿದ್ಯುತ್‌ ಬಲ್ಬ್‌ಗಳಿಂದ ಅಲಂಕಾರವನ್ನೂ ಮಾಡಲಾಗುತ್ತಿದೆ. 

ಜಿಲ್ಲಾಡಳಿತ ಭವನ ಕಟ್ಟಡಕ್ಕೆ ಹಾಗೂ ರಾಚಯ್ಯ ಜೋಡಿ ರಸ್ತೆಯಲ್ಲಿರುವ ಪ್ರವೇಶದ್ವಾರದಿಂದ ಭವನದವರೆಗಿನ ದಾರಿಯಲ್ಲಿ ವಿದ್ಯುತ್‌ ದೀಪಗಳನ್ನು ಹಾಕಲಾಗಿದೆ. ಭುವನೇಶ್ವರಿ ವೃತ್ತ, ಜೋಡಿ ರಸ್ತೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಬಳಿ ವಿದ್ಯುತ್‌ ದೀಪಗಳನ್ನು ಹಾಕಲಾಗುತ್ತಿದೆ. 

ಶಿಷ್ಟಾಚಾರ ಪಾಲನೆ ಸವಾಲು

ರಾಷ್ಟ್ರಪತಿ ಅವರು ನಗರಕ್ಕೆ ಬರುವುದಕ್ಕೂ ಮೊದಲು ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿ ರಂಗನಾಥಸ್ವಾಮಿಯ ದರ್ಶನ ಮಾಡಲಿದ್ದಾರೆ. ವಡಗೆರೆ ಬಳಿ ಹೆಲಿಕಾಪ್ಟರ್‌ನಲ್ಲಿ ಇಳಿದು ಅಲ್ಲಿಂದ ರಸ್ತೆ ಮಾರ್ಗದಲ್ಲಿ ಬೆಟ್ಟಕ್ಕೆ ತೆರಳಲಿದ್ದಾರೆ.

ಮಧ್ಯಾಹ್ನದ ಮೇಲೆ ಆಸ್ಪತ್ರೆ ಉದ್ಘಾಟನೆಯನ್ನು ಅವರು ನೆರವೇರಿಸಲಿದ್ದಾರೆ. ವೈದ್ಯಕೀಯ ಕಾಲೇಜಿನ ಬಳಿ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ರಾಷ್ಟ್ರಪತಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ತಂಗುವ ವ್ಯವಸ್ಥೆ, ರಾಷ್ಟ್ರಪತಿ ಅವರೊಂದಿಗೆ ಬರುವ ಸಿಬ್ಬಂದಿಗೆ ಉಳಿದುಕೊಳ್ಳುವ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಎಲ್ಲವನ್ನೂ ಶಿಷ್ಟಾಚಾರಕ್ಕೆ ಕುಂದಾಗದಂತೆ ಮಾಡಬೇಕಾದ ಸವಾಲು ಜಿಲ್ಲಾಡಳಿತದ ಮುಂದಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು