ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕ ಮನ್ನಿಸು ಪ್ರಭುವೇ: ಈಗಿನ ಸಮಾಜದ ಕಥೆ

Last Updated 30 ಮಾರ್ಚ್ 2023, 5:10 IST
ಅಕ್ಷರ ಗಾತ್ರ

ಚಾಮರಾಜನಗರ: ಮಗ ರಾಮಸ್ವಾಮಿ ಮದುವೆಗೆ ಸಿದ್ಧನಾಗಿದ್ದಾನೆ. ಅದೇ ಮನೆಯಲ್ಲಿ ಅಪ್ಪ ಭಗವಂತರಾಯನ ಶವ ಬಿದ್ದಿದೆ. ಈ ವಿಷಯ ಪತ್ರಿಕೆಯಲ್ಲಿ ಸುದ್ದಿಯಾಗಿ ಪೊಲೀಸ್ ಇನ್‌ಸ್ಪೆಕ್ಟರ್‌ ಮನೆಗೆ ಧಾವಿಸುತ್ತಾನೆ. ಇವನ ಹಿಂದೆಯೇ ಆಗಮಿಕರು, ವೈದ್ಯರು ಬರುವ ಮೂಲಕ ವಿವಾಹದ ಸಂಭ್ರಮದಲ್ಲಿದ್ದ ರಾಮಸ್ವಾಮಿಗೆ ತಲ್ಲಣ ಉಂಟು ಮಾಡುತ್ತಾರೆ...

- ಹೀಗೆ ಮೊದಲನೇ ದೃಶ್ಯ ಬಿಚ್ಚಿಕೊಳ್ಳುವ ‘ಬದುಕ ಮನ್ನಿಸು ಪ್ರಭುವೇ’ ನಾಟಕ ಒಂದೇ ದೃಶ್ಯದಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗುತ್ತದೆ.

ರಾಮಸ್ವಾಮಿಯ ತಂದೆಯ ಸಾವಿಗೆ ಕಾರಣರು ಯಾರು ಎಂಬುದನ್ನು ಅನಾವರಣಗೊಳಿಸುವುದೇ ನಾಟಕದ ಕಥಾವಸ್ತು. ತಾನು ಮಾಡಿದ ಕೊಲೆಯನ್ನು ಆತ್ಮಹತ್ಯೆ ಎಂಬಂತೆ ಬಿಂಬಿಸಲು ಹೊರಟ ರಾಮಸ್ವಾಮಿಯ ಲೆಕ್ಕಾಚಾರ ತಲೆಕೆಳಗಾಗುತ್ತದೆ. ಕೈಗೆ ಕೋಳ ಬೀಳುತ್ತದೆ. ಸ್ನೇಹಿತರು, ನೆಂಟರಿಷ್ಟರು ಎಲ್ಲರಿಂದಲೂ ತಿರಸ್ಕೃತನಾಗುತ್ತಾನೆ.

ಖ್ಯಾತ ನಿರ್ದೇಶಕ ಟಿ.ಎನ್‌.ಸೀತಾರಾಂ ಅವರಿಗೆ 50 ವರ್ಷಗಳ ಹಿಂದೆ ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ತಂದಿದ್ದ ‘ಬದುಕ ಮನ್ನಿಸು ಪ್ರಭುವೇ’ ಇಂದಿನ ಕಾಲಕ್ಕೂ ಪ್ರಸ್ತುತವಾಗುವ ನಾಟಕ.

‘ನನ್ನ ಇಷ್ಟ ಬಂದ ಹಾಗೆ ಬದುಕುತ್ತೇನೆ’ ಎಂಬ ಹಂಬಲ, ಅತ್ಯುತ್ಸಾಹದಲ್ಲಿ ‘ನನ್ನ ಬದುಕು ಕಟ್ಟಿಕೊಳ್ಳುತ್ತೇನೆ’ ಎಂದು ರಾಮಸ್ವಾಮಿ ಮುಂದಡಿ ಇಟ್ಟಾಗ ಕೌಟುಂಬಿಕ ವಿಘಟನೆ ಹೇಗೆ ಅನಾವರಣಗೊಳ್ಳುತ್ತವೆ ಎಂಬುದನ್ನು ಪ್ರಜಾವಾಣಿ@75 ಮತ್ತು ಶಾಂತಲಾ ಕಲಾವಿದರು ಸುವರ್ಣ ಸಂಭ್ರಮ ಅಂಗವಾಗಿ ಆಯೋಜಿಸಲಾದ ನಾಟಕ ‘ಬದುಕ ಮನ್ನಿಸು ಪ್ರಭುವೇ’ ಕಟ್ಟಿಕೊಟ್ಟಿತು.

ಮನುಷ್ಯನ ಆಸೆ, ಪ್ರೀತಿ, ಲಂಪಟತೆ ವ್ಯಕ್ತಿಯಿಂದ ಏನೆಲ್ಲವನ್ನೂ ಮಾಡಿಸುತ್ತದೆ ಎಂಬುದನ್ನು 50 ನಿಮಿಷಗಳ ನಾಟಕ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿತು.

ನಾಟಕದ ಪ್ರಯೋಗ ಹಲವು ಕಾರಣಗಳಿಗಾಗಿ ಗಮನ ಸೆಳೆಯುತ್ತದೆ. ಇದು ಬರೀ ನಾಟಕದ ಕಥೆಯಾಗಿರದೆ, ನಮ್ಮ ಸಮಾಜದ ನಡುವೆ ನಡೆಯುವ ಕಥೆ. ಹೀಗಾಗಿ, ಗೊಂದಲಗಳಿಲ್ಲದೆ ನಾಟಕದ ಸಂದೇಶ ನೆರೆದಿದ್ದ ಪ್ರೇಕ್ಷಕರ ಮನತಟ್ಟಲು ಯಶಸ್ವಿಯಾಯಿತು.

ನಾಟಕದಲ್ಲಿ ಅಣ್ಣ, ತಂಗಿ ಮತ್ತು ತಾಯಿ ನಡುವೆ ಸುತ್ತುವ ಕಥೆ ಇದೆ. ತನ್ನ ಇಷ್ಟಕ್ಕೆ ಅಡ್ಡ ಬಂದವರನ್ನು ಮುಗಿಸುವ ಮಗನ ಕ್ರೌರ್ಯ ಅನಾವರಣಗೊಳ್ಳುತ್ತದೆ. ಒಂದಾಗಿದ್ದ ಸ್ನೇಹಿತರು ಕೊನೆ ಕ್ಷಣದಲ್ಲಿ ರಾಮಸ್ವಾಮಿಯ ಕೈಬಿಡುತ್ತಾರೆ. ಇದರಿಂದಾಗಿ ಅವನ ಕೈಗೆ ಕೋಳಬೀಳುತ್ತದೆ.

ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ ಯುವ, ಹಿರಿ ಕಲಾವಿದರು ಉತ್ತಮ ಪ್ರದರ್ಶನ ನೀಡಿ ರಂಗಾಸಕ್ತರಿಂದ ಚಪ್ಪಾಳೆ ಗಿಟ್ಟಿಸಿದರು.

ಶಾಂತಲಾ ಕಲಾವಿದರ ತಂಡ

ಟಿ.ಎನ್.ಸೀತಾರಾಂ ರಚಿಸಿದ್ದ ನಾಟಕದ ನಿರ್ದೇಶನ ಮತ್ತು ನಿರ್ವಹಣೆಯನ್ನು ಕೆ. ವೆಂಕಟರಾಜು ಹೊತ್ತಿದ್ದರು. ವಿನ್ಯಾಸ ಬೆಳಕು ಹಾಗೂ ಪ್ರಸಾಧನ ಜವಾಬ್ದಾರಿ ಚಿತ್ರಾ ವೆಂಕಟರಾಜು, ಸಂಗೀತ ಸಂಯೋಜನೆ ಭಿನ್ನ ಷಡ್ಜ.

ವಿವಿಧ ಪಾತ್ರಗಳಲ್ಲಿ ವೆಂಕಟರಾಜು (ರಾಮಸ್ವಾಮಿ), ಅಬ್ರಹಾಂ ಡಿಸಿಲ್ವಾ (ಇನ್‌ಸ್ಪೆಕ್ಟರ್‌), ಶಂಕರ್ (ಸೋಮಶೇಖರ್ ), ನಾಗೇಶ್ (ಪುರೋಹಿತ), ಗೌತಮ್ ರಾಜ್ (ಪುರೋಹಿತನ ಮಗ), ಸೈಮನ್ ಡಿಸಿಲ್ವ (ವೈದ್ಯ) ಸುರೇಶ್ (ವೈದ್ಯನ ಸಹಾಯಕ), ಪ್ರೀತಿ (ರಾಮಸ್ವಾಮಿಯ ತಂಗಿ), ಅಭಿಜ್ಞಾ ಆರಾಧ್ಯ (ಪೊಲೀಸ್‌ ಕಾನ್‌ಸ್ಟೆಬಲ್‌), ನಾಗೇಶ್ (ಯಜಮಾನ), ಸ್ಫೂರ್ತಿ ಸುಬ್ರಹ್ಮಣ್ಯ (ಯಜಮಾನನ ಪತ್ನಿ) ಲವಲವಿಕೆಯಿಂದ ಅಭಿನಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT