ಸೋಮವಾರ, ಅಕ್ಟೋಬರ್ 25, 2021
26 °C
ಸಂತೇಮರಹಳ್ಳಿ: ಕೆರೆ ಇದ್ದರೂ ರೈತರಿಗೆ ಇಲ್ಲದ ಪ್ರಯೋಜನ

ಕಬಿನಿ ನೀರಿಗಾಗಿ ಕಾಯುತ್ತಿದೆ ಬಾಗಳಿ ಕೆರೆ

ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಒಂದು ಕಾಲದಲ್ಲಿ ನೂರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿದ್ದ ಹೋಬಳಿ ವ್ಯಾಪ್ತಿಯ ಬಾಗಳಿ ಕೆರೆಗೆ ಇಂದು ಕಬಿನಿ ನಾಲೆಯಿಂದ ನೀರು ಹರಿಸಿದರೂ ತುಂಬದ ಸ್ಥಿತಿಯಲ್ಲಿದೆ.

ಕೃಷಿಯೇ ಪ್ರಧಾನವಾಗಿರುವ ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿಯ ಪ್ರಮುಖ ಕೆರೆಗಳಲ್ಲಿ ಬಾಗಳಿ ಗ್ರಾಮದಲ್ಲಿರುವ ಕೆರೆಯೂ ಒಂದು. ಇದು 150 ಎಕರೆ ವಿಸ್ತೀರ್ಣ ಇದೆ. 210 ಎಕರೆ ಕೃಷಿ ಭೂಮಿಗೆ ಇದು ನೀರನ್ನು ಪೂರೈಸುತ್ತಿತ್ತು ಎಂದು ಹೇಳುತ್ತಾರೆ ಗ್ರಾಮಸ್ಥರು.

ಮಳೆಯ ಪ್ರಮಾಣ ಕಡಿಮೆಯಾದಂತೆ ಕೆರೆಯಲ್ಲಿ ನೀರು ನಿಲ್ಲುವ ಪ್ರಮಾಣ ಕಡಿಮೆಯಾಯಿತು. ನಿರ್ವಹಣೆ ಕೊರತೆಯಿಂದ ಪಾಳು ಬೀಳುವುದಕ್ಕೆ ಆರಂಭವಾಯಿತು. ಒತ್ತುವರಿ, ಹೂಳಿನ ಸಮಸ್ಯೆ ಜಲಮೂಲವನ್ನು ಬಾಧಿಸಿತು. ಪರಿಣಾಮ ಕೆರೆ ಇದ್ದರೂ ರೈತರಿಗೆ ಪ್ರಯೋಜನಕ್ಕೆ ಇಲ್ಲದಂತಾಯಿತು. 

ನಾಲೆಯ ನೀರು ಹಾಗೂ ಮಳೆ ನೀರಿನಿಂದ ತುಂಬಿ ತುಳಕಬೇಕಾಗಿದ್ದ ಕೆರೆ ಅಂಗಳದಲ್ಲಿ ಜಾಲಿ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಕೆರೆಯು ಸಂಪೂರ್ಣವಾಗಿ ಹೂಳುಮಯವಾಗಿದೆ. ಕೆರೆಗೆ ಹರಿದು ಬರುತ್ತಿದ್ದ ಮಳೆಯ ನೀರಿನ ಕಾಲುವೆಗಳು ಮುಚ್ಚಿಹೋಗಿವೆ. ಒತ್ತುವರಿ ಕಾರಣಕ್ಕೆ ಕೆರೆಯ ವ್ಯಾಪ್ತಿ ಕುಗ್ಗಿದೆ.

ಸಣ್ಣ ನೀರಾವರಿ ಇಲಾಖೆಯವರು ಕೆರೆಯ ಹೂಳು ತೆಗೆದು ನೀರು ಬರುವ ನಾಲೆಗಳನ್ನು ದುರಸ್ತಿಗೊಳಿಸಿದರೆ ಮಳೆ ಹಾಗೂ ಕಬಿನಿ ನಾಲೆ ನೀರಿನ ಮೂಲಕ ಸ್ವಲ್ಪ ಪ್ರಮಾಣದಲ್ಲಾದರೂ ನೀರು ತುಂಬುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ನಾಲೆಯೇ ಆಧಾರ: ಬಾಗಳಿ ಗ್ರಾಮದ ಮಗ್ಗುಲಲ್ಲಿ ಹಾದು ಹೋಗಿರುವ ಕಬಿನಿ ಮುಖ್ಯ ನಾಲೆಯಿಂದ ಏತ ನೀರಾವರಿ ಪದ್ಧತಿಯಲ್ಲಿ ನೀರನ್ನು ಮೇಲಕ್ಕೆತ್ತಿ ರೈತರಿಗೆ ವ್ಯವಸಾಯಕ್ಕೆ ಅನುಕೂಲ ಮಾಡಿಕೊಡಲು 1988ರಲ್ಲಿ ಏತ ನೀರಾವರಿ ಆರಂಭಿಸಲಾಯಿತು. ಆದರೆ, ನಾಲೆಯಿಂದ ಸಮರ್ಪಕ ನೀರು ಪೂರೈಕೆಯಾಗದಿರುವುದರಿಂದ ಏತ ನೀರಾವರಿ ಯೋಜನೆಯಿಂದ ರೈತರು ಬೆಳೆ ತೆಗೆದಿರುವ ನಿದರ್ಶನಗಳಿಲ್ಲ.

ಈ ಭಾಗದಲ್ಲಿ ರೈತರು, ಒಂದು ಬೆಳೆಗೆ ಮಾತ್ರ ಬಿಡಲಾಗುತ್ತಿರುವ ಕಬಿನಿ ನಾಲೆ ನೀರಿನಿಂದ ಬೆಳೆ ತೆಗೆಯುತ್ತಿದ್ದಾರೆ. ಈ ಅವಧಿಯಲ್ಲಿ ಕೆರೆಯ ಹೂಳು ತೆಗೆದು ಸಮರ್ಪಕವಾಗಿ ಏತ ನೀರಾವರಿಯಿಂದ ನೀರು ತುಂಬಿಸಿದರೆ ಬೇಸಿಗೆ ಕಾಲದಲ್ಲೂ ರೈತರು ಫಸಲು ತೆಗೆಯಬಹುದು ಎಂಬುದು ರೈತರ ಅನಿಸಿಕೆ.

ಸುತ್ತೂರು ಏತ ನೀರಾವರಿ ಯೋಜನೆ ಅಡಿಯಲ್ಲಿ ನದಿ ಮೂಲದಿಂದ ಚಾಮರಾಜನರ ಹಾಗೂ ಯಳಂದೂರು ತಾಲ್ಲೂಕುಗಳ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಬಾಗಳಿ ಕೆರೆಯು ಒಂದಾಗಿದೆ. ಪಕ್ಕದ ಉಮ್ಮತ್ತೂರು ದೊಡ್ಡಕೆರೆಗೆ ಗ್ರಾಮಸ್ಥರ ಹಾಗೂ ರೈತ ಮುಖಂಡರ ಹೋರಾಟದ ಫಲವಾಗಿ ನೀರು ಹರಿದಿದೆ. ಆದರೆ, ಉಮ್ಮತ್ತೂರು ಕೆರೆಗೂ ಮೊದಲೇ ಸಿಗುವ ಬಾಗಳಿ ಕೆರೆಗೆ ನೀರು ಹರಿದಿಲ್ಲ. 

ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದುವರೆಗೂ ಗ್ರಾಮದ ಕೆರೆ ಕಡೆಗೆ ಗಮನ ಹರಿಸಿಲ್ಲ ಎಂಬುದು ಗ್ರಾಮಸ್ಥರ ದೂರು.

ನದಿ ಮೂಲದಿಂದ ಕೆರೆಗೆ ನೀರು ತುಂಬಿಸಿದರೆ ಸುತ್ತಲಿನ ಬಾಣಹಳ್ಳಿ, ಕಮರವಾಡಿ, ಹೆಬಚಹಳ್ಳಿ, ದೇಮಹಳ್ಳಿ, ಹೊಸಹಳ್ಳಿ ಹಾಗೂ ಹೊಸಹಳ್ಳಿ ಮೋಳೆ ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಿ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗುತ್ತದೆ ಎಂದು ಹೇಳುತ್ತಾರೆ ಗ್ರಾಮಸ್ಥರು.

‘ಕೆರೆಗೆ ಬೇಗ ನೀರು ತುಂಬಿಸಿ’

ಭೂಮಾಪನ ಇಲಾಖೆಯ ಅಧಿಕಾರಿಗಳು ಕೆರೆಯ ಸರ್ವೆ ನಡೆಸಿದ್ದು, ಒತ್ತುವರಿಯಾಗಿರುವುದನ್ನು ಗುರುತಿಸಿದ್ದಾರೆ. 

‘ಆಗಿರುವ ಒತ್ತುವರಿಯನ್ನು ಮೊದಲು ತೆರವುಗೊಳಿಸಬೇಕು. ನಂತರ ಹೂಳು ತೆಗೆಸಿ ಕೆರೆ ದುರಸ್ತಿ ಮಾಡಬೇಕು. ಆ ಬಳಿಕವಷ್ಟೇ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಈಗಾಗಲೇ ಕಾಮಗಾರಿ ವಿಳಂಬವಾಗಿದೆ. ನೀರು ತುಂಬಿಸಲು ಕ್ರಮ ವಹಿಸದಿದ್ದರೆ ಗ್ರಾಮಸ್ಥರೆಲ್ಲ ಸೇರಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಮುಖಂಡ ಬಾಗಳಿ ರೇವಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರ: ‘ಮೂರು ವರ್ಷಗಳ ಹಿಂದೆಯೇ ಕೆರೆಯ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಲಾಗಿದೆ. ಕೆರೆಯನ್ನು ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ’ ಎಂದು ಗ್ರಾಮ ಲೆಕ್ಕಾಧಿಕಾರಿ ಮಹದೇವಮ್ಮ ಅವರು ಮಾಹಿತಿ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು