ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಕಟಾವಿಗೆ ಬಂದಿದ್ದ 350 ಬಾಳೆಗೊನೆ ಕಳವು

ಹನೂರು ತಾಲ್ಲೂಕಿನಲ್ಲಿ ಫಸಲು, ಜಾನುವಾರು ಕಳ್ಳತನ ಪ್ರಕರಣ, ಆತಂಕದಲ್ಲಿ ರೈತರು
Last Updated 19 ಆಗಸ್ಟ್ 2021, 16:47 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನಲ್ಲಿ ರೈತರ ಜಮೀನುಗಳಿಂದಲೇ ರಾತ್ರೋ ರಾತ್ರಿ ಬಾಳೆಗೊನೆಗಳನ್ನು ಕಳ್ಳತನ ಮಾಡುವ ಪ್ರಕರಣಗಳು ಮುಂದುವರಿದಿದ್ದು, ಆರೋಪಿಗಳು ಪೊಲೀಸರ ಕೈಗೆ ಸಿಗುತ್ತಿಲ್ಲ.

ಕಳೆದ ತಿಂಗಳು ಕಣ್ಣೂರು ಗ್ರಾಮದ ಸಯ್ಯದ್‌ ಮುಜಾಮಿಲ್‌ ಎಂಬ ರೈತರ ಜಮೀನಿನಲ್ಲಿ ಬೆಳೆದಿದ್ದ 350 ಬಾಳೆಗೊನೆಗಳನ್ನು ಕಳ್ಳರು ರಾತ್ರೋ ರಾತ್ರಿ ಕಟಾವು ಮಾಡಿಕೊಂಡು ಹೋಗಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೆ ಕೃತ್ಯ ಎಸಗಿದವರು ಯಾರು ಎಂಬುದು ಗೊತ್ತಾಗಿಲ್ಲ.

ಮುಜಾಮಿಲ್‌ ಅವರು ಒಂದು ಎಕರೆಯಲ್ಲಿ ಬಾಳೆ ಬೆಳೆದಿದ್ದರು. ಜುಲೈ 8ರಂದು 50 ಗೊನೆಗಳನ್ನು ಕಟಾವು ಮಾಡಿ ಮಾರಾಟ ಮಾಡಿದ್ದರು. ಮಾರನೇ ದಿನ ಅಮಾವಾಸ್ಯೆ ಎಂಬ ಕಾರಣಕ್ಕೆ ವ್ಯಾಪಾರಿಗಳು ಬಂದಿರಲಿಲ್ಲ. ಆದರೆ, ಅದೇ ದಿನ ರಾತ್ರಿ 350 ಗೊನೆಗಳನ್ನು ಕಳ್ಳರು ಕಡಿದು ಕೊಂಡೊಯ್ದಿದ್ದಾರೆ. ಇದರಿಂದಾಗಿ ಅವರಿಗೆ ₹1 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.

‘₹75 ಸಾವಿರ ಖರ್ಚು ಮಾಡಿ 1 ಎಕರೆಯಲ್ಲಿ ಬಾಳೆ ಬೆಳೆದಿದ್ದೆ. ಕಳೆದ ತಿಂಗಳು ವ್ಯಾಪಾರಿಯೊಬ್ಬರು ಬಂದು 50 ಗೊನೆಗಳನ್ನು ಕಟಾವು ಮಾಡಿಕೊಂಡು ಹೋಗಿದ್ದರು. ಅಮಾವಾಸ್ಯೆ ಬಳಿಕ ಕಟಾವು ಮಾಡುವುದಾಗಿ ಹೇಳಿ ಅವರು ಹೋಗಿದ್ದರು. ಅಷ್ಟರಲ್ಲಿ ರಾತ್ರೋ ರಾತ್ರಿ ಯಾರೋ ಬಂದು 350 ಗೊನೆಗಳನ್ನು ಕಡಿದುಕೊಂಡು ಹೋಗಿದ್ದಾರೆ. ಒಂದು ಗೊನೆ ಅಂದಾಜು 12 ಕೆಜಿ ತೂಕವಿತ್ತು. ಅಂದಿನ ಬೆಲೆಗೆ ಮಾರಾಟವಾಗಿದ್ದರೆ ಕನಿಷ್ಠ ಎಂದರೂ ₹1.5 ಲಕ್ಷ ಸಿಗುತ್ತಿತ್ತು. ಆದರೆ ಈಗ ಹಾಕಿದ್ದ ಬಂಡವಾಳವೂ ಇಲ್ಲವಾಗಿದೆ’ ಎಂದು ಜಮೀನು ಮಾಲೀಕ ತಮ್ಮ ಅಳಲನ್ನು ‘ಪ್ರಜಾವಾಣಿ’ಯೊಂದಿಗೆ ತೋಡಿಕೊಂಡರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಪರಾಧ ವಿಭಾಗದ ಪಿಎಸ್ಐ ಸಿದ್ಧಲಿಂಗೇಗೌಡ ಅವರು ‘ಜಮೀನಿನಲ್ಲಿ ಬಾಳೆ ಗೊನೆಗಳು ಕಳ್ಳತನವಾಗಿರುವ ಬಗ್ಗೆ ಮಾಲೀಕರು ಮೌಖಿಕವಾಗಿ ದೂರು ನೀಡಿದ್ದಾರೆ. ಕಾರ್ಯಾಚರಣೆ ಆರಂಭಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು’ ಎಂದರು.

ಮರುಕಳಿಸಿದ ಪ್ರಕರಣ: ತಾಲ್ಲೂಕಿನಲ್ಲಿ ಬಾಳೆಗೊನೆ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಜನವರಿ ತಿಂಗಳಲ್ಲೂ ಇದೇ ರೀತಿ ಹನೂರು ಪಟ್ಟಣ ಸೇರಿದಂತೆ ಸುತ್ತಮತ್ತಲ ಗ್ರಾಮಗಳಲ್ಲಿ ನೂರಾರು ಬಾಳೆಗೊನೆಗಳ ಕಳ್ಳತನವಾಗಿತ್ತು. ಕಟಾವಿಗೆ ಬಂದಿದ್ದ ಬಾಳೆಗೊನೆಗಳನ್ನು ಕದ್ದೊಯ್ದಿದ್ದರು.

‘ಪ್ರಜಾವಾಣಿ’ ಕೂಡ ಜೂನ್‌ 26ರಂದು ಈ ಬಗ್ಗೆ ವಿಶೇಷ ವರದಿ ಪ್ರಕಟಿಸಿ ಪೊಲೀಸ್‌ ಇಲಾಖೆಯ ಗಮನ ಸೆಳೆದಿತ್ತು. ಆದರೆ, ಪ್ರಕರಣಗಳನ್ನು ಇನ್ನೂ ಬೇಧಿಸಲಾಗಿಲ್ಲ.

‘ಸಾಲ ಮಾಡಿ ಬೆಳೆದ ಫಸಲು ಹೀಗೆ ಕಳ್ಳಕಾಕರ ಪಾಲಾದರೆ ನಮ್ಮ ಗತಿಯೇನು? ಪೊಲೀಸರು ಪತ್ತೆ ಹಚ್ಚುತ್ತೇವೆ ಎಂದು ಹೇಳುತ್ತಾರೆ. ಆದರೆ ಕೆಲವು ದಿನಗಳು ಕಳೆದಂತೆ ಸಾಮಾನ್ಯವಾಗಿ ಬಿಡುತ್ತದೆ. ರಾತ್ರಿ ವೇಳೆ ಈ ಘಟನೆಗಳು ಸಂಭವಿಸುತ್ತಿರುವುರಿಂದ ರೈತರಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ’ ಎಂದು ಕೃಷಿಕರು ಕಳವಳ ವ್ಯಕ್ತಪಡಿಸುತ್ತಾರೆ.

ಕಟ್ಟಿಹಾಕಿದ ಹಸುಗಳ ಕಳ್ಳತನ

ಜಮೀನಿನಲ್ಲಿ ಫಸಲು ಕಳ್ಳತನ ಒಂದೆಡೆಯದರೆ ಜಮೀನಿನಲ್ಲಿ ಕಟ್ಟಿಹಾಕಿರುವ ಜಾನುವಾರುಗಳನ್ನು ಕಳವು ಮಾಡುತ್ತಿರುವ ಪ್ರಕರಣಗವೂ ತಾಲ್ಲೂಕಿನಲ್ಲಿ ಆಗಾಗ ನಡೆಯುತ್ತಿದೆ.

ಕಣ್ಣೂರು ಗ್ರಾಮದ ಮಹೇಂದ್ರ ಎಂಬುವವರ ಜಮೀನಿನಲ್ಲಿ ಕಟ್ಟಿಹಾಕಿದ್ದ ಹಸುವನ್ನು ಜೂನ್‌ 20ರಂದು ಕಳ್ಳತನ ಮಾಡಲಾಗಿದೆ. ಜುಲೈ 22ರಂದು ಪ್ರಕಾಶ್ ಎಂಬುವವರ ಜಮೀನಿನಲ್ಲಿ ಒಂದು ಹಸು ಕಳ್ಳತನವಾಗಿವೆ. ಅದೇ ಗ್ರಾಮದ ಜಗದೀಶ್ ಎಂಬುವವರ ಜಮೀನಿನಲ್ಲೂ ಜಾನುವಾರು ಕಳ್ಳತನಕ್ಕೆ ಯತ್ನ ನಡೆದಿದೆ.

ಮೇಲಿಂದ ಮೇಲೆ ಇಂತಹ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದರಿಂದ ರೈತರು ಆತಂಕಗೊಂಡಿದ್ದಾರೆ.

‘ರಾತ್ರಿ ವೇಳೆ ಕಳ್ಳತನದ ಸಂದರ್ಭದಲ್ಲಿ ತಡೆಯಲು ಹೋದರೆ ನಮ್ಮ ಮೇಲೆ ಹಲ್ಲೆ ಮಾಡುವ ಸಂಭವವೂ ಉಂಟು. ಆದ್ದರಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT