ಸೋಮವಾರ, ಸೆಪ್ಟೆಂಬರ್ 20, 2021
24 °C
ಎರಡು ತಿಂಗಳಲ್ಲಿ 12ಕ್ಕೂ ಹೆಚ್ಚು ಪ್ರಕರಣ, ಠಾಣೆಯಲ್ಲಿ ಎರಡು ಪ್ರಕರಣ ದಾಖಲು

ಹನೂರು: ಬಾಳೆ ತೋಟಕ್ಕೆ ಕನ್ನ, ಕಟಾವಿಗೆ ಬಂದಿದ್ದ ನೂರಾರು ಗೊನೆ ಕಳ್ಳರ ಪಾಲು

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಕಳ್ಳರ ದೃಷ್ಟಿ ಬಾಳೆ ತೋಟಗಳ ಮೇಲೆ ಬಿದ್ದಿದ್ದು, ಎರಡು ತಿಂಗಳ ಅವಧಿಯಲ್ಲಿ 12ಕ್ಕೂ ಹೆಚ್ಚು ತೋಟಗಳಲ್ಲಿ ಕಟಾವಿಗೆ ಬಂದ ನೂರಾರು ಬಾಳೆಗೊನೆಗಳನ್ನು ಕದ್ದು ಒಯ್ದಿದ್ದಾರೆ. 

ಈ ಸಂಬಂಧ ಹನೂರು ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಉಳಿದ ರೈತರು ದೂರು ನೀಡಿಲ್ಲ. 

ಡಿಸೆಂಬರ್‌ನಿಂದಲೇ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಜನವರಿಯಲ್ಲೂ ಮುಂದುವರಿದಿದೆ. ವರ್ಷದಿಂದ ಬೆಳೆಸಿ ಕಟಾವಿಗೆ ಬಂದಿದ್ದ ಸಂದರ್ಭದಲ್ಲಿ ಗೊನೆಗಳು ಕಳ್ಳರ ಪಾಲಾಗಿರುವುದರಿಂದ ರೈತರಿಗೆ ಸಾವಿರಾರು ರೂಪಾಯಿ ನಷ್ಟವಾಗಿದೆ. ಕಳ್ಳತನ ಆಗಿರುವುದರಲ್ಲಿ ಏಲಕ್ಕಿ ತಳಿಯ ಬಾಳೆಗೊನೆಯೇ ಹೆಚ್ಚಿದೆ. ಏಲಕ್ಕಿ ಬಳೆಗೆ ಉತ್ತಮ ದರವಿದ್ದು, ಹೆಚ್ಚು ಆದಾಯ ನಿರೀಕ್ಷಿಸಿದ್ದ ರೈತರಿಗೆ ನಿರಾಸೆಯಾಗಿದೆ. 

‘ಪ್ರಜಾವಾಣಿ’ಗೆ ದೊರಕಿದ ಮಾಹಿತಿ ಪ್ರಕಾರ ಕನಿಷ್ಠ 12 ಕಡೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಬಾಳೆಗೊನೆಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. 

ತಾಲ್ಲೂಕಿನ ಲೊಕ್ಕನಹಳ್ಳಿ ರಸ್ತೆಯಲ್ಲಿರುವ ಸೀನಾ ಎಂಬುವವರ ತೋಟದಲ್ಲಿ 300 ಗೊನೆ, ಅದೇ ಗ್ರಾಮದ ಮೈಲುಸ್ವಾಮಿ ಎಂಬುವವರ ಜಮೀನಿನಲ್ಲಿ ಒಂದು ಟ್ರ್ಯಾಕ್ಟರ್ ಬಾಳೆಗೊನೆಗಳನ್ನು ಕದ್ದೊಯ್ದಿದ್ದಾರೆ.

ಚಂಗೋಡಿ ಗ್ರಾಮದ ಶ್ರೀನಿವಾಸ್ ಎಂಬುವವರ ಜಮೀನಿನಲ್ಲಿ 93 ಗೊನೆ, ಅಲಗುಮೂಲೆ ಹಾಗೂ ಜಿ.ಕೆ.ಹೊಸೂರು, ಬಂಡಳ್ಳಿ ಗ್ರಾಮದ ತೋಟದಲ್ಲಿ 180 ಗೊನೆ, ಹಲಗಾಪುರ ಮತ್ತು ಕಾಂಚಳ್ಳಿ ಗ್ರಾಮದ ಜಮೀನುಗಳಲ್ಲಿ 120 ಬಾಳೆಗೊನೆ ಹಾಗೂ ಪಟ್ಟಣದ ಅರುಣ್ ರಾವ್ ಎಂಬುವವರ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಫಸಲಿನಲ್ಲಿ 63 ಗೊನೆಗಳು ಕಳ್ಳತನವಾಗಿವೆ.

‘ಎರಡು ತಿಂಗಳ ಅವಧಿಯಲ್ಲಿ ತಾಲ್ಲೂಕಿನಾದ್ಯಂತ ನಿರಂತರವಾಗಿ ತೋಟಗಳಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ಈ ಬಗ್ಗೆ ಕೆಲವು ರೈತರು ಠಾಣೆಯಲ್ಲಿ ದೂರು ನೀಡಿದರೆ ಮತ್ತೆ ಕೆಲವರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಕೊಟ್ಟ ದೂರುಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ನಾವು ದೂರು ನೀಡಿದರೆ ಏನು ಪ್ರಯೋಜನ’ ಎಂದು ಕೆಲವು ರೈತರು ‘ಪ್ರಜಾವಾಣಿ’ಯೊಂದಿಗೆ ಅಸಹಾಯಕತೆ ತೋಡಿಕೊಂಡರು. 

‘ನಾಲ್ಕೂವರೆ ಎಕರೆ ಜಮೀನಿನ ಪೈಕಿ ಎರಡು ಎಕರೆಯಲ್ಲಿ ಬಾಳೆ ಬೆಳೆದಿದ್ದೆ. ವರ್ಷದಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ಬಾಳೆಗೊನೆಗಳು ಕಟಾವಿಗೆ ಎರಡು ದಿನಗಳಿರುವಂತೆ 200 ಗೊನೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಲಕ್ಷಾಂತರ ರೂಪಾಯಿ ಬಂಡವಾಳ ಖರ್ಚು ಮಾಡಿ ಬೆಳೆದಿದ್ದ ಫಸಲು ಕಳ್ಳರ ಪಾಲಾಗಿದೆ. ಈ ಬಗ್ಗೆ ಹನೂರು ಪೊಲೀಸ್ ಠಾಣೆಗೆ ದೂರು ನೀಡುವುದರ ಜೊತೆಗೆ ಶಾಸಕರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಪಟ್ಟಣದ ರೈತ ನಿಂಗರಾಜು ಅವರು ಹೇಳಿದರು. 

ನಾಗನತ್ತ ಗ್ರಾಮದ ನಂದೀಶ್ ಅವರ ಜಮೀನಿನಲ್ಲೂ 218 ಗೊನೆಗಳನ್ನು ಕಳ್ಳರು ಕಟಾವು ಮಾಡಿಕೊಂಡು ಹೋಗಿದ್ದಾರೆ. 

‘ಕಳ್ಳರನ್ನು ನಾವು ಪತ್ತೆ ಹಚ್ಚುವುದು ಹೇಗೆ?. ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ’ ಎನ್ನುತ್ತಾರೆ ಅವರು. ಮೊಳಗನಕಟ್ಟೆ ಗ್ರಾಮ ಅರುಣ್ (ಅಣ್ಣಾದೊರೈ) ಅವರ ಜಮೀನಿನಲ್ಲಿ 120 ಹಾಗೂ ನಟರಾಜ್ ಎಂಬುವವರ ಜಮೀನಿನಲ್ಲಿ 90 ಗೊನೆಗಳು ಕಳುವಾಗಿವೆ.

‘ಕಟಾವಿಗೆ ಬಂದಿದ್ದ ಬಾಳೆಗೊನೆಗಳ ಪೈಕಿ 63 ಗೊನೆಗಳು ಕಳ್ಳತನವಾಗಿದೆ. ಇದರಿಂದ ₹50 ಸಾವಿರ ನಷ್ಟವಾಗಿದೆ’ ಎಂದು ಹನೂರಿನ ರೈತ ಅರುಣ್‌ ರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ವ್ಯಾಪಾರಿಗಳ ಮೇಲೆ ಸಂಶಯ: ವಿವಿಧ ತಳಿಯ ಬಾಳೆಗೊನೆಗಳನ್ನು ಕದ್ದಿದ್ದರೂ, ಏಲಕ್ಕಿ ಬಾಳೆಗೊನೆಗಳೇ ಹೆಚ್ಚಿವೆ ಎಂದು ಹೇಳುತ್ತಾರೆ ರೈತರು. 

ದೂರದ ಊರಿನಿಂದ ಬರುವ ವ್ಯಾಪಾರಿಗಳು, ಉತ್ತಮ ದರ ಹೇಳದಿದ್ದರೆ ರೈತರು ಕೊಡುವುದಿಲ್ಲ. ಇದೇ ಕೋಪಕ್ಕೆ ಅವರೇ ಕಳುವು ಮಾಡಿರುವ ಸಾಧ್ಯತೆ ಇದೆ ಎಂಬುದು ಬೆಳೆಗಾರರ ಸಂಶಯ. ಇದನ್ನು ಪೊಲೀಸರ ಬಳಿಯೂ ಅವರು ತಿಳಿಸಿದ್ದಾರೆ. 

ತನಿಖಾ ತಂಡ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹನೂರು ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ನಾಗೇಶ್ ಅವರು. ‘ನಮ್ಮಲ್ಲಿ ಎರಡು ‌ಪ್ರಕರಣಗಳು ದಾಖಲಾಗಿವೆ. ವ್ಯಾಪಾರಕ್ಕಾಗಿ ಬಂದಿದ್ದವರೇ ಕಳ್ಳತನ ಮಾಡಿರುವ ಬಗ್ಗೆ ರೈತರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಳ್ಳರ ಪತ್ತೆಗೆ ತನಿಖಾ ತಂಡ ರಚಿಸಲಾಗಿದೆ. ದೂರು ನೀಡದಿರುವ ರೈತರ ಬಗ್ಗೆಯೂ ಮಾಹಿತಿ ಸಗ್ರಹಿಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು