ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ವಲಸೆ ಹಕ್ಕಿಗಳ ಕಲರವ ಕ್ಷೀಣ, ಪಕ್ಷಿ ವೀಕ್ಷಕರಲ್ಲಿ ನಿರಾಸೆ, ಆತಂಕ

ತಾಲ್ಲೂಕಿನ ಕೆರೆಗಳಲ್ಲಿ ಹೆಚ್ಚು ಕಂಡು ಬಂದಿಲ್ಲ ಬೇರೆ ಊರಿನ ಹಕ್ಕಿಗಳು
Last Updated 13 ಫೆಬ್ರುವರಿ 2022, 5:05 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ವಲಸೆ ಹಕ್ಕಿಗಳಿಗೆ ಭಾರತ ಮನೆ ಇದ್ದಂತೆ. ಚಳಿಗಾಲ ಹಾಗೂ ಬೇಸಿಗೆಯಲ್ಲಿ ಪ್ರಪಂಚದ ವಿವಿಧ ಭಾಗಗಳಿಂದ ಪಕ್ಷಿಗಳು ತಾಲ್ಲೂಕಿಗೆ ಬರುತ್ತಿದ್ದವು. ಆದರೆ ಈ ಬಾರಿ ವಲಸೆ ಬಂದಿರುವ ಹಕ್ಕಿಗಳ ಸಂಖ್ಯೆ ಕಡಿಮೆ ಇದೆ. ಇದು ಪಕ್ಷಿ ವೀಕ್ಷಕರಲ್ಲಿ ನಿರಾಸೆಯ ಜೊತೆಗೆ ಆತಂಕವನ್ನೂ ಮೂಡಿಸಿದೆ.

ಆಹಾರ ಅರಸಿಕೊಂಡು ಹಾಗೂ ಸಂತಾನೋತ್ಪತ್ತಿಗಾಗಿ ಹಕ್ಕಿಗಳು ವಲಸೆ ಹೋಗುತ್ತವೆ. ದೇಶದ ಉತ್ತರ ಭಾಗ ಸೇರಿದಂತೆ ಜಗತ್ತಿನ ವಿವಿಧ ದೇಶಗಳಿಂದ ಚಳಿಗಾಲದಲ್ಲಿ ಭಾರಿ ಸಂಖ್ಯೆಯಲ್ಲಿ ಹಕ್ಕಿಗಳು ದಕ್ಷಿಣ ಭಾರತದತ್ತ ವಲಸೆ ಬರುತ್ತವೆ. ಚಳಿಗಾಲ ಮುಗಿದ ನಂತರ ಮತ್ತೆ ಅವುಗಳ ಮೂಲ ನೆಲೆಗೆ ಮರಳುತ್ತವೆ.

ಚೀನಾದಿಂದ ಬಂದ ಬೂಟಗಾಲಿನ ಉಯಿಲಕ್ಕಿ
ಚೀನಾದಿಂದ ಬಂದ ಬೂಟಗಾಲಿನ ಉಯಿಲಕ್ಕಿ

ಸೈಬೀರಿಯ, ಮಂಗೋಲಿಯ, ಅಂಟಾರ್ಕ್ಟಿಕಾಗಳಿಂದ ನೀರ ಹಕ್ಕಿಗಳೂ ಸೇರಿದಂತೆ ವಿವಿಧ ಜಾತಿಯ ಹಕ್ಕಿಗಳು ವಲಸೆ ಬರುತ್ತವೆ. ಹಕ್ಕಿಗಳು ಆಹಾರ ಹಾಗೂ ಸಂತಾನೋತ್ಪತ್ತಿಗಾಗಿ ವಲಸೆ ಬರುವುದರಿಂದ, ಅವುಗಳು ವಲಸೆಗೆ ಆಯ್ಕೆ ಮಾಡುವ ಜಾಗದ ಪರಿಸರದ ಆರೋಗ್ಯ ಉತ್ತಮವಾಗಿದೆ ಎಂದರ್ಥ ಎಂಬುದು ಪರಿಸರ ಪ್ರೇಮಿಗಳು ಅಭಿಪ್ರಾಯಪಡುತ್ತಾರೆ.

ತಾಲ್ಲೂಕಿನ ಕಾಡಂಚಿನಲ್ಲಿರುವ ಹಂಗಳ ಕೆಲರೆ, ಗೋಪಾಲಸ್ವಾಮಿ ಬೆಟ್ಟ ತಪ್ಪಲಿನ ಹಿರಿಕೆರೆ, ಕಣ್ಣೇಗಾಲ ಮತ್ತು ಬೇರಂಬಾಡಿ ಕೆರೆಗಳಿಗೆ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹಕ್ಕಿಗಳು ಬರುತ್ತಿದ್ದವು. ಈ ಬಾರಿ ಅವುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳುತ್ತಾರೆ ಸ್ಥಳೀಯ ಪಕ್ಷಿ ವೀಕ್ಷಕರು.

’ಬಾನಾಡಿ ಹಕ್ಕಿಗಳು, ಕಬ್ಬಕ್ಕಿಗಳು (ಸ್ಟಾರ್ ಲಿಂಗ್ಸ್), ಬೆಳ್ಳಕ್ಕಿಗಳು (ಈಗ್ರೇಟ್ಸ್), ಉಯಿಲಕ್ಕಿಗಳು, ವ್ಯಾಗ್ ಟೇಲ್, ಕೆಸ್ಟ್ರಾಲ್, ಹ್ಯಾರಿಯರ್, ಫಾಲ್ಕನ್, ರೋಸ್ ಫಿಂಚಸ್ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈ ಬಾರಿ ಕಡಿಮೆ ಸಂಖ್ಯೆಯಲ್ಲಿವೆ. ಕೆಲವೊಂದು ಹಕ್ಕಿಗಳು ಇನ್ನೂ ಕಾಣಿಸಿಕೊಂಡಿಲ್ಲ‘ ಎಂದು ಪಕ್ಷಿಪ್ರೇಮಿ ಶ್ರೀಕಂಠ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

’ನಮ್ಮ ಸ್ಥಳೀಯ ಕೆರೆ ಕಟ್ಟೆಗಳ ದಡದಲ್ಲಿ ಕಾಣಿಸುತ್ತಿದ್ದ ಹಕ್ಕಿಗಳು ಈ ಚಳಿಗಾಲದಲ್ಲಿ ಬೆರಳೆಣಿಕೆಯಲ್ಲಿ ಕಂಡು ಬಂದಿವೆ. ಪಟ್ಟೆತಲೆ ಹೆಬ್ಬಾತು, ಪಿನ್ ಟೇಲ್, ಗಾರ್ಗೆನಿ, ಶೋವೆಲರ್, ಪ್ಲೋವರ್, ಸ್ಟಿಲ್ಟ್ ಹೀಗೆ ಹಲವಾರು ವಲಸೆ ಹಕ್ಕಿಗಳು ನಮ್ಮ ಪ್ರದೇಶದಲ್ಲಿ ಈ ವರ್ಷ ಕಾಣಿಸಿಕೊಂಡಿಲ್ಲ. ಇದಕ್ಕೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ‘ ಎಂದರು.

ವಲಸೆ ಬಾರದ ಹಲವು ಹಕ್ಕಿಗಳು

ಪಕ್ಷಿ ವೀಕ್ಷಣೆಯನ್ನು ಹವ್ಯಾಸವಾಗಿಸಿಕೊಂಡಿರುವ ಮಂಗಲ, ಜಕ್ಕಹಳ್ಳಿ ಗ್ರಾಮಗಳ ಯುವಕರು ಬಂಡೀಪುರದ ಸುತ್ತಮುತ್ತ ಚಳಿಗಾಲದ ಅವಧಿಯಲ್ಲಿ ವಲಸೆ ಬರುವ ಹಕ್ಕಿಗಳನ್ನು ಪ್ರತಿ ವರ್ಷ ಹುಡುಕುತ್ತಾ, ವಿಶಿಷ್ಟ ಹಕ್ಕಿಗಳನ್ನು ದಾಖಲಿಸುತ್ತ ಬಂದಿದ್ದಾರೆ.

’ಈ ವರ್ಷದಲ್ಲಿ ಬೆರಳೆಣಿಕೆಯಷ್ಟು ಕಾಣಿಸಿಕೊಂಡಿವೆ. ಬಂಡೀಪುರದ ಮಂಗಲ ಪ್ರಾಂತ್ಯದ ಬಹುಪಾಲು ಕೆರೆಗಳಲ್ಲಿ ನೀರಿಲ್ಲದೆ ಖಾಲಿಯಾಗಿದ್ದು, ಹಂಗಳದ ದೊಡ್ಡಕೆರೆ, ಗೋಪಾಲಸ್ವಾಮಿ ಬೆಟ್ಟದ ಹಿರಿಕೆರೆಯಲ್ಲಷ್ಟೆ ನೀರಿದೆ. ಈ ಕೆರೆಗಳಲ್ಲಷ್ಟೆ ಕೆಲವು ದಿನಗಳ ಕಾಲ ಪಟ್ಟೆತಲೆ ಹೆಬ್ಬಾತು ಹಕ್ಕಿಗಳು, ಮೆಟುಗಾಲಿನ ಹಕ್ಕಿ, ನೀಲಿ ಬಾಲದ ನೊಣ ಹಿಡುಕ ಹಕ್ಕಿಗಳು ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡಿವೆ‘ ಎಂದು ಯುವಕರು ತಿಳಿಸಿದರು.

’ನಾವು ಪಕ್ಷಿ ವೀಕ್ಷಣೆಗೆ ಹೋದಾಗಲೆಲ್ಲ, ರೋಸಿ ಸ್ಟಾರ್ಲಿಂಗ್ಸ್ (ಗುಲಾಬಿ ಬಣ್ಣದ ಕಬ್ಬಕ್ಕಿ), ಬೂಟೆಡ್ ವಾಬ್ಲಾರ್ (ಉಯಿಲಕ್ಕಿ), ಗ್ರೀನಿಸ್ ವಾಬ್ಲಾರ್, ಆರ್ಫಾನ್ ವಾಬ್ಲಾರ್, ಫಿಪಿಟ್ಸ್, ರಿನೇಕ್, ಕೆಸ್ಟ್ರಾಲ್ ಮೊದಲಾದ ಜಾತಿಯ ಹಕ್ಕಿಗಳು ಬಹು ಸಂಖ್ಯೆಯಲ್ಲಿ ಕಾಣಿಸುತ್ತಿದ್ದವು. ಈ ವರ್ಷ ನಮ್ಮ ಕಣ್ಣಿಗೆ ಬಿದ್ದಿಲ್ಲ‘ ಎಂದು ಮಾಹಿತಿ ನೀಡಿದರು.

ಸಣ್ಣ ಹಕ್ಕಿಗಳು ಬಂದಿವೆ. ದೊಡ್ಡ ಹಕ್ಕಿಗಳು ಕಡಿಮೆಯಾಗಿವೆ. ಜಾಗತಿಕ ತಾಪಮಾನದಲ್ಲಿ ಆಗಿರುವ ಏರಿಳಿತ ಇದಕ್ಕೆ ಕಾರಣವಿರಬಹುದು
- ಆರ್.ಕೆ.ಮಧು, ಎಂದು ವನ್ಯಜೀವಿ ಛಾಯಾಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT