ಸೋಮವಾರ, ಮಾರ್ಚ್ 8, 2021
19 °C

ಬಂಡೀಪುರ: ರಾತ್ರಿ ವಾಹನ ಸಂಚಾರ ನಿರ್ಬಂಧ, ಪ್ರಾಣಿ ಪ್ರಿಯರಲ್ಲಿ ಹೆಚ್ಚಿದ ವಿಶ್ವಾಸ

ಸೂರ್ಯನಾರಾಯಣ ವಿ‌. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವುದನ್ನು ಸಮರ್ಥಿಸಿಕೊಂಡು ಸುಪ್ರೀಂ ಕೋರ್ಟ್‌ ಬುಧವಾರ ನೀಡಿರುವ ಆದೇಶವನ್ನು ವನ್ಯ ಜೀವಿ ತಜ್ಞರು, ಪರಿಸರ ಪ್ರಿಯರು ಸ್ವಾಗತಿಸಿದ್ದಾರೆ. 

ಸಂರಕ್ಷಿತ ಪ್ರದೇಶದಲ್ಲಿ ವಾಹನಗಳ ಸಂಚಾರಕ್ಕೆ ಶಾಶ್ವತವಾಗಿ ನಿರ್ಬಂಧ ಹೇರಲು ಕ್ರಮ ಕೈಗೊಳ್ಳುವ ಬಗ್ಗೆ ನಾಲ್ಕು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ರಸ್ತೆ ಸಾರಿಗೆ ಇಲಾಖೆಗೆ ನಿರ್ದೇಶಿಸಿರುವುದು ಮತ್ತು ಸಂರಕ್ಷಿತ ಅರಣ್ಯ ಪ್ರದೇಶದ ಬಫರ್‌ ಜೋನ್‌ನಲ್ಲೂ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ತಾತ್ವಿಕ ಒಪ್ಪಿಗೆ ನೀಡಿರುವುದು ಪರಿಸರವಾದಿಗಳ ಹಾಗೂ ಪ್ರಾಣಿಪ್ರಿಯರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. 

‘ಸುಪ್ರೀಂ ಕೋರ್ಟ್‌ ಸ್ಪಷ್ಟವಾದ ಆದೇಶ ಇನ್ನೂ ನೀಡಿಲ್ಲ. ಈ ವಿಚಾರವನ್ನು ನಾಲ್ಕು ವಾರ ಮುಂದೂಡಿದೆ. ಆದರೆ, ಅದು ವನ್ಯಜೀವಿಗಳ ಪರವಾಗಿ ಅಂತಿಮ ತೀರ್ಪು ನೀಡಲಿದೆ ಎಂಬ ವಿಶ್ವಾಸ ಇದೆ. ಹಾಗಾದರೆ, ನಮ್ಮ ಹತ್ತು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಂತಾಗುತ್ತದೆ’ ಎಂದು ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಿರ್ಬಂಧ ಹೇರಿದಾಗಿನಿಂದ ಇಲ್ಲಿವರೆಗೆ ರಾತ್ರಿ ವೇಳೆ ವಾಹನಗಳು ಹಾಗೂ ವನ್ಯಜೀವಿಗಳ ನಡುವೆ ಅಪಘಾತ ಆಗುತ್ತಿದ್ದ ಪ್ರಮಾಣ ಶೇ 90ರಷ್ಟು ಕಡಿಮೆಯಾಗಿದೆ. ಎಂಬುದನ್ನು ಎಲ್ಲರೂ ಗಮನಿಸಬೇಕು. ಬಂಡೀಪುರದಂತಹ ಪ್ರದೇಶಗಳು ದೇಶದ ಭೂಪ್ರದೇಶದ ಶೇ 5ರಷ್ಟು ಭಾಗದಲ್ಲಿ ಮಾತ್ರ ಇವೆ. ನಮ್ಮ ದೇಶದ ನೈಸರ್ಗಿಕ ಪರಂಪರೆಯಾದ ಇವುಗಳನ್ನು ಉಳಿಸಿಕೊಳ್ಳುವುದು ನಮ್ಮೆಲರ ಕರ್ತವ್ಯ’ ಎಂದು ಅವರು ಹೇಳುತ್ತಾರೆ. 

‘ಸುಪ್ರೀಂ ಕೋರ್ಟ್‌ ಆದೇಶ ಅಭಿನಂದನೆಗೆ ಅರ್ಹ. ಅಂತಿಮ ತೀರ್ಪಿನಲ್ಲೂ ಅದು ವನ್ಯಜೀವಿಗಳ ಹಿತವನ್ನು ಕಾಪಾಡಲಿದೆ ಎಂಬ ವಿಶ್ವಾಸವಿದೆ’ ಎಂದು ಚಾಮರಾಜನಗರದ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್‌ ಹೇಳಿದರು. 

‘ಮನುಷ್ಯ ತನ್ನ ಸ್ವಾರ್ಥಕ್ಕಾಗಿ, ಲಾಭಕ್ಕಾಗಿ ಪರಿಸರವನ್ನು ನಾಶ ಮಾಡುತ್ತಾ ಬಂದಿದ್ದಾನೆ. ವನ್ಯಪ್ರಾಣಿಗಳಿಗೆ, ಪಕ್ಷಿಗಳಿಗೆ ತಮ್ಮ ಆವಾಸ ಸ್ಥಾನದಲ್ಲಿ ಸ್ವಚ್ಛಂದವಾಗಿ ವಿಹರಿಸಲು ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿರುವುದು ಖುಷಿಯ ವಿಚಾರ’ ಎಂದು ಅವರು ಹೇಳಿದರು. 

ಬಂಡೀಪುರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 212 ಮತ್ತು  67ರಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6 ಗಂಟೆವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. 2009ರಿಂದ ಈ ನಿಯಮ ಜಾರಿಯಲ್ಲಿದೆ. ತಮಿಳುನಾಡು ಸಂಚಾರ ನಿಷೇಧವನ್ನು ಬೆಂಬಲಿಸಿದ್ದರೆ, ಕೇರಳ ವಿರೋಧಿಸುತ್ತಿದೆ. ಪ್ರವಾಸೋದ್ಯಮ, ವ್ಯಾಪಾರಕ್ಕೆ ಧಕ್ಕೆಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ಮೆಟ್ಟಿಲನ್ನೂ ಅದು ಹತ್ತಿದೆ. 

‘ಪರ್ಯಾಯ ಮಾರ್ಗವನ್ನೇ ಬಳಸಲಿ’
ಸಂರಕ್ಷಿತ ‍ಪ್ರದೇಶದಲ್ಲಿ ಹಾದುಹೋಗಿರುವ ಹೆದ್ದಾರಿಯನ್ನು ಬಂದ್‌ ಮಾಡಿ ಪರ್ಯಾಯ ಮಾರ್ಗದ ಬಗ್ಗೆಯೂ ಯೋಚನೆ ಮಾಡುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯಕ್ಕೆ ಸೂಚಿಸಿದೆ. 

ಬಂಡೀಪುರ ಮಾರ್ಗವಲ್ಲದೇ ಕೇರಳಕ್ಕೆ ಹೋಗಲು ಪರ್ಯಾಯ ಮಾರ್ಗವೊಂದು ಈಗಾಗಲೇ ಕಾರ್ಯಾಚರಿಸುತ್ತಿದೆ. ಹುಣಸೂರು–ಗೋಣಿಕೊಪ್ಪ–ಕುಟ್ಟ–ಮಾನಂದಾಡಿ ರಸ್ತೆಯನ್ನು ರಾಜ್ಯ ಸರ್ಕಾರ ₹75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದೆ. ಒಂಬತ್ತು ವರ್ಷಗಳಿಂದ ಜನರು ಈ ಮಾರ್ಗವನ್ನು ಬಳಸುತ್ತಿದ್ದಾರೆ. 

‘ಪರ್ಯಾಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡುವುದಾದರೆ, ರಾಜ್ಯ ಹೆದ್ದಾರಿ 90ರ 9.8 ಕಿ.ಮೀಗಳಷ್ಟು ಉದ್ದದ ಭಾಗ (ಅಳ್ಳೂರು ಗೇಟಿನಿಂದ ತಿತಿಮತ್ತಿಯವರೆಗೆ) ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿದೆ. ಇಲ್ಲಿ ಮೇಲು ರಸ್ತೆ (ಎಲಿವೇಟೆಡ್‌ ಹೈವೈ) ನಿರ್ಮಾಣ ಮಾಡಬಹುದಾಗಿದೆ’ ಎಂದು ಸಲಹೆ ನೀಡುತ್ತಾರೆ ಸಂಜಯ್‌ ಗುಬ್ಬಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು