ಶನಿವಾರ, ಜುಲೈ 31, 2021
27 °C
ಬಂಡೀಪುರ: ಕಾಣದ ಕಾಳ್ಗಿಚ್ಚು; ಕಾಡಂಚಿನ ಜನರ ವಿಶ್ವಾಸ ಗಳಿಸಿದ ಅಧಿಕಾರಿಗಳು

ಬಂಡೀಪುರದಲ್ಲಿ ಕಾಳ್ಗಿಚ್ಚು ನಿಯಂತ್ರಣ: ಫಲ ನೀಡಿದ ಅರಣ್ಯ ಇಲಾಖೆ ಪ್ರಯತ್ನ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ವರ್ಷ ಸಂಭವಿಸಿದ್ದ ಕಾಳ್ಗಿಚ್ಚಿನಿಂದ ಪಾಠ ಕಲಿತ ಅರಣ್ಯ ಇಲಾಖೆಯು, ಕಾಡಂಚಿನ ಪ್ರದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕಾಗಿ ಈ ವರ್ಷ ರೂಪಿಸಿದ್ದ ವಿವಿಧ ಕಾರ್ಯಕ್ರಮಗಳು ಯಶಸ್ಸು ಕಂಡಿವೆ.

ಪರಿಣಾಮವಾಗಿ, ಬಂಡೀಪುರ ಅರಣ್ಯದಲ್ಲಿ ಈ ವರ್ಷ ಕಾಳ್ಗಿಚ್ಚಿನ ಒಂದೂ ಪ್ರಕರಣ ವರದಿಯಾಗಿಲ್ಲ. ಬೆಂಕಿಯಿಂದ ಮುಕ್ತವಾಗಿ ಹಸಿರಾಗಿಯೇ ಉಳಿದಿದೆ. ಸದ್ಯ, ಮಳೆಯಾಗುತ್ತಿರುವುದರಿಂದ ಗಿಡಮರಗಳೆಲ್ಲ ನಳನಳಿಸುತ್ತಿವೆ. 

ಕಳೆದ ವರ್ಷ ಬಂಡೀಪುರ, ಕುಂದುಕೆರೆ, ಗೋ‍ಪಾಲಸ್ವಾಮಿ ಬೆಟ್ಟ ವಲಯಗಳಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ 11,400 ಎಕರೆಗಳಷ್ಟು ಕಾಡು ಸುಟ್ಟು ಕರಕಲಾಗಿತ್ತು. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟ ಕಾಳ್ಗಿಚ್ಚಿಗೆ ಕಾರಣವಾಗಿತ್ತು. ಹುಲಿ, ಚಿರತೆಯಂತಹ ಪ್ರಾಣಿಗಳು ಗ್ರಾಮ ಅಥವಾ ಜಮೀನಿಗೆ ಬರುವುದನ್ನು ತಪ್ಪಿಸುವುದಕ್ಕಾಗಿ ಸ್ಥಳೀಯರೇ ಬೆಂಕಿ ಹಾಕುತ್ತಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿತ್ತು.

ಕಾಡಂಚಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಳ್ಗಿಚ್ಚನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಇಲಾಖೆ, ಹಲವು ಕಾರ್ಯಕ್ರಮ ರೂಪಿಸಿತ್ತು.  

ಏನೇನು ಕಾರ್ಯಕ್ರಮಗಳು?: ಬಂಡೀಪುರ ಕ್ಯಾಂಪಸ್‌ನಲ್ಲಿದ್ದ ಕ್ಯಾಂಟೀನ್‌ ನಿರ್ವಹಣೆ ಹೊಣೆಯನ್ನು ಸ್ಥಳೀಯ ಬುಡಕಟ್ಟು ಜನರಿಗೆ ನೀಡಿತು. ಕಾಡಂಚಿನ ಗ್ರಾಮಗಳ ಮಕ್ಕಳಿಗಾಗಿ ‘ಚಿಣ್ಣರ ದರ್ಶನ’ ಎಂಬ ಕಾರ್ಯಕ್ರಮ ರೂಪಿಸಿ ಉಚಿತ ಸಫಾರಿ ವ್ಯವಸ್ಥೆ ಮಾಡಲಾಗಿತ್ತು. ಈ ವರ್ಷ 52 ಚಿಣ್ಣರ ದರ್ಶನ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕಾಡು, ಪ್ರಾಣಿಗಳು, ಕಾಳ್ಗಿಚ್ಚು ತಡೆ ಅಗತ್ಯದ ಬಗ್ಗೆ ಮಕ್ಕಳಿಗೆ ತಿಳಿಹೇಳುವುದು ಇದರ ಉದ್ದೇಶವಾಗಿತ್ತು. ಕಾಡಂಚಿನ ರೈತರಿಗೂ ಉಚಿತ ಸಫಾರಿ ವ್ಯವಸ್ಥೆ ಮಾಡಲಾಗಿತ್ತು. ಬುಡಕಟ್ಟು ಜನರನ್ನೇ ಬಳಸಿಕೊಂಡು ಹಾಡಿಗಳಲ್ಲಿ ಕಾಳ್ಗಿಚ್ಚಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. 

‘ಅರಣ್ಯ ಸಂರಕ್ಷಣೆಗೆ ಜನರ ಸಹಕಾರವೂ ಬೇಕು. ನಾವು ಅವರ ಜೊತೆಗೇ ಕೆಲಸ ಮಾಡಬೇಕು. ಅವರ ಕಷ್ಟಕ್ಕೆ ಬೇಗ ಧಾವಿಸಬೇಕು. ಸಮಸ್ಯೆಗಳಿಗೆ ಸ್ಪಂದಿಸಬೇಕು. ಆಗ ಅವರ ಸಹಕಾರ ನಮಗೆ ಸಿಗುತ್ತದೆ. ಹೀಗಾಗಿ, ಸ್ಥಳೀಯರಿಗೆ ಆದ್ಯತೆ ನೀಡುವಂತಹ ಹಲವು ಕಾರ್ಯಕ್ರಮಗಳನ್ನು ಈ ಬಾರಿ ರೂಪಿಸಿದ್ದೆವು’ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘‍ಪ್ರಜಾವಾಣಿ’ಗೆ ತಿಳಿಸಿದರು. 

₹1.82 ಕೋಟಿ ಪರಿಹಾರ ವಿತರಣೆ

ವನ್ಯಪ್ರಾಣಿಗಳ ದಾಳಿಯಿಂದಾದ ಬೆಳೆ ನಷ್ಟ ಹಾಗೂ ಜಾನುವಾರು ನಷ್ಟಕ್ಕೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ಈ ವರ್ಷ ಅಧಿಕಾರಿಗಳು ತ್ವರಿತಗೊಳಿಸಿದ್ದರು.

‘ಹಿಂದಿನ ವರ್ಷದ ಬಾಕಿಯೂ ಸೇರಿದಂತೆ ಒಟ್ಟು 3,557 ಪ್ರಕರಣಗಳಲ್ಲಿ ₹1.82 ಕೋಟಿ ಮೊತ್ತವನ್ನು ನಷ್ಟ ಪರಿಹಾರವಾಗಿ ಸ್ಥಳೀಯ ರೈತರಿಗೆ ವಿತರಿಸಲಾಗಿದೆ. ಇನ್ನು ₹9 ಲಕ್ಷ ಮೊತ್ತ ಮಾತ್ರ ಪಾವತಿಗೆ ಬಾಕಿ ಇದೆ’ ಎಂದು ಬಾಲಚಂದ್ರ ಹೇಳಿದರು. 

ನಾಗರಹೊಳೆಯಲ್ಲೂ ಕಾಳ್ಗಿಚ್ಚು ಇಲ್ಲ

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲೂ ಈ ಬೇಸಿಗೆಯಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿಲ್ಲ. ಈ ಬಾರಿ ಅರಣ್ಯ ಇಲಾಖೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ, ಶೂನ್ಯ ಬೆಂಕಿ ತಾಣ ಎಂಬ ಶ್ರೇಯಸ್ಸಿಗೆ ಪಾತ್ರವಾಗಿದೆ.

‘ಜನವರಿಯಿಂದ ಏಪ್ರಿಲ್‌ವರೆಗೆ ಸುಮಾರು 400 ಬೆಂಕಿ ಕಾವಲುಗಾರರನ್ನು ನೇಮಿಸಿಕೊಂಡಿದ್ದೆವು. ಎಂಟು ವಲಯಗಳಲ್ಲಿ ಅಗ್ನಿಶಾಮಕ ದಳದ ಕ್ವಿಕ್‌ ರೆಸ್ಪಾನ್ಸ್‌ ವಾಹನ ಇಟ್ಟುಕೊಂಡಿದ್ದೆವು. ಹೆಚ್ಚಿದ ರಾತ್ರಿ ಗಸ್ತು, ಕಾಡಂಚಿನ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ, 22 ವಾಚ್‌ ಟವರ್‌ಗಳ ಮೂಲಕ ಇಟ್ಟ ನಿಗಾ ನೆರವಾಯಿತು’ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿಸಿಎಫ್‌ ಡಿ.ಮಹೇಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.