ಬುಧವಾರ, ನವೆಂಬರ್ 25, 2020
18 °C
ಎನ್‌ಟಿಸಿಎ ಅನುಮತಿ ಪಡೆಯುವ ವಿಚಾರದಲ್ಲಿ ಗೊಂದಲ, ವನ್ಯಜೀವಿ ಪ್ರೇಮಿಗಳ ವಿರೋಧ

ಬಂಡೀಪುರ: ನುಗು ಸಫಾರಿ ಆರಂಭ ಹಠಾತ್‌ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ನುಗು ವನ್ಯಜೀವಿ ವಲಯದಲ್ಲಿ ಇದೇ 30ರಿಂದ ಸಫಾರಿ ಆರಂಭಿಸುವ ನಿರ್ಧಾರವನ್ನು ಅರಣ್ಯ ಇಲಾಖೆ ಕೊನೆ ಕ್ಷಣದಲ್ಲಿ ರದ್ದುಗೊಳಿಸಿದೆ.   

ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ನುಗು ವಲಯದಲ್ಲಿ ಸಫಾರಿ ಆರಂಭಿಸುವ ಬಗ್ಗೆ ಬಂಡೀಪುರದ ಅಧಿಕಾರಿಗಳು ಕೆಲವು ತಿಂಗಳ ಹಿಂದೆ ಇಲಾಖೆಗೆ ಪ್ರಸ್ತಾವ ಕಳುಹಿಸಿದ್ದರು.  

ಇದೇ 30ರಿಂದ ನುಗು ವಲಯದಲ್ಲಿ ಸಫಾರಿ ಆರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದರು. ಸಫಾರಿ ವೇಳಾಪಟ್ಟಿ, ಸಫಾರಿ ಶುಲ್ಕವನ್ನೂ ನಿಗದಿ ಪಡಿಸಲಾಗಿತ್ತು. ಆದರೆ, ಸಫಾರಿ ಆರಂಭಕ್ಕೆ ಮೂರು ದಿನಗಳು ಇರುವಾಗ ದಿಢೀರ್‌ ಆಗಿ ಕಾರ್ಯಕ್ರಮ ರದ್ದುಪಡಿಸಲಾಗಿದೆ.

ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು, ‘ಸಫಾರಿ ಆರಂಭಿಸುವುದನ್ನು ಮುಂದೂಡಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಅನುಮತಿ ಪಡೆದಿಲ್ಲ: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ಪರಿಸರ ಸ್ನೇಹಿ ಚಟುವಟಿಕೆಗಳನ್ನು ನಡೆಸಬೇಕಾದರೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅನುಮತಿ ಬೇಕು. ನುಗುವಿನಲ್ಲಿ ಸಫಾರಿ ಆರಂಭಿಸಲು ಪ್ರಾಧಿಕಾರದ ಅನುಮತಿ ಪಡಿದಿಲ್ಲ. ಅನುಮತಿ ಬೇಕೇ ಬೇಡವೇ ಎಂಬ ವಿಷಯದಲ್ಲಿ ಅಧಿಕಾರಿಗಳಲ್ಲೇ ಗೊಂದಲ ಉಂಟಾಗಿದೆ. ಸ್ಥಳೀಯ ಅಧಿಕಾರಿಗಳು ಅಗತ್ಯವಿಲ್ಲ ಎಂದು ವಾದಿಸಿದರೆ ಇಲಾಖೆಯ ಉನ್ನತ ಅಧಿಕಾರಿಗಳು ಅನುಮತಿ ಪಡೆಯಲೇ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. 

ಹಿಂದೆಯೂ ಸಫಾರಿ: ‘ನುಗು ವಲಯದಲ್ಲಿ ಈ ಹಿಂದೆಯೇ ಸಫಾರಿ ಇತ್ತು. 1994ರ ನಂತರ ಅದು ಸ್ಥಗಿತಗೊಂಡಿತು. ನುಗು ವಲಯದಲ್ಲಿ ಸಫಾರಿ ನಡೆಸುವ ಪ್ರಸ್ತಾವ ಬಂಡೀಪುರ ನಿರ್ವಹಣಾ ಯೋಜನೆಯಲ್ಲೇ ಸೇರಿದೆ. ಸಫಾರಿ ಆರಂಭವಾದರೆ, ಬಂಡೀಪುರದ ಸಫಾರಿ ಮೇಲಿನ ಒತ್ತಡ ಕಡಿಮೆಯಾಗಲಿದೆ’ ಎಂದು ಸ್ಥಳೀಯ ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು, ‘ಸುಪ್ರೀಂಕೋರ್ಟ್‌ನ ನಿರ್ದೇಶನದ ಪ್ರಕಾರ, ಹುಲಿ ಸಂರಕ್ಷಿತ ಪ್ರದೇಶದ ಒಟ್ಟು ವ್ಯಾಪ್ತಿಯ ಶೇ 10ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸುವಂತಿಲ್ಲ. ಇದರಂತೆ, ನಮ್ಮಲ್ಲಿ 102 ಚ.ಕಿ.ಮೀ ವ್ಯಾಪ್ತಿಯಲ್ಲಿ ಸಫಾರಿ ನಡೆಸಬಹುದು. ನಾವೀಗ 80 ಚ.ಕಿ.ಮೀ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸುತ್ತಿದ್ದೇವೆ. ಇನ್ನೂ 20 ಚ.ಕಿ.ಮೀ ನಡೆಸುವುದಕ್ಕೆ ಅವಕಾಶ ಇದೆ’ ಎಂದು ಹೇಳಿದರು. 

‘ಸಫಾರಿ ಆರಂಭಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಉನ್ನತ ಅಧಿಕಾರಿಗಳು, ಆರಂಭಿಸುವುದಕ್ಕೂ ಮುನ್ನ ಪ್ರಾಧಿಕಾರದ ಅನುಮತಿ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಹೇಳುತ್ತಿದ್ದಾರೆ. ಅದಕ್ಕಾಗಿ ಪತ್ರ ಬರೆಯುವಂತೆಯೂ ಸೂಚಿಸಿದ್ದಾರೆ. ಹಾಗಾಗಿ, ಸಫಾರಿ ಆರಂಭವನ್ನು ಸದ್ಯಕ್ಕೆ ಮುಂದೂಡಲಾಗಿದೆ’ ಎಂದು ಅವರು ಹೇಳಿದರು.

ವನ್ಯಜೀವಿ ಪ್ರೇಮಿಗಳ ವಿರೋಧ

ಈ ಮಧ್ಯೆ, ನುಗು ವಲಯದಲ್ಲಿ ಸಫಾರಿ ಆರಂಭವಾಗುತ್ತದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಪರಿಸರ ಹಾಗೂ ವನ್ಯಜೀವಿ ಪ್ರೇಮಿಗಳು ಇದಕ್ಕೆ ವಿರೋಧ ವ್ಯಕ್ಗಪಡಿಸಿದ್ದಾರೆ. ಎನ್‌ಟಿಸಿಎ ಅನುಮತಿ ಇಲ್ಲದೇ ಸಫಾರಿ ಆರಂಭಿಸಲು ಸಾಧ್ಯವಿಲ್ಲ, ಜೊತೆಗೆ ಸೂಕ್ಷ್ಮ ಪರಿಸರ ವಲಯದಲ್ಲಿರುವ ನುಗು ವಲಯದಲ್ಲಿ ಸಫಾರಿ ಆರಂಭಿಸುವುದು ಕಾನೂನಿನ ಉಲ್ಲಂಘನೆ ಹಾಗೂ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳಿಗೆ ವಿರುದ್ಧವಾದುದು ಎಂದು ಅವರು ವಾದಿಸಿದ್ದಾರೆ.

‘ಸಫಾರಿ ಆರಂಭಿಸುವುದರಿಂದ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುತ್ತವೆ. ಸುತ್ತಮುತ್ತಲು ಹೋಟೆಲ್‌, ಅಂಗಡಿಗಳು ಹೋಂ ಸ್ಟೇ, ರೆಸಾರ್ಟ್‌ಗಳು ಹೆಚ್ಚಾಗಿ ಅರಣ್ಯ ಸಂರಕ್ಷಣೆಯ ಮೂಲ ಆಶಯಕ್ಕೆ ತೊಂದರೆಯಾಗುತ್ತದೆ’ ಎಂಬುದು ಅವರ ವಿರೋಧಕ್ಕೆ ಕಾರಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು