ಬಂಡೀಪುರ: ರಸ್ತೆ ಬದಿಯಲ್ಲೇ ವನ್ಯಪ್ರಾಣಿಗಳ ದರ್ಶನ!

ಗುಂಡ್ಲುಪೇಟೆ: ಬಂಡೀಪುರದಲ್ಲಿ ಪ್ರಾಣಿಗಳನ್ನು ನೋಡಲು ಈಗ ಸಫಾರಿಗೆ ಹೋಗಬೇಕೆಂದಿಲ್ಲ. ಊಟಿ ರಸ್ತೆಯಲ್ಲಿ ಒಂದಷ್ಟು ಕಿ.ಮೀ. ಸಾಗಿದರೆ ಸಾಕು. ಆನೆ, ಕಾಡೆಮ್ಮೆಗಳು ಸುಲಭವಾಗಿ ದರ್ಶನ ನೀಡುತ್ತಿವೆ.
ಒಂದು ತಿಂಗಳಿನಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಬೇಸಿಗೆಯಲ್ಲಿ ಒಣಗಿದ್ದ ಕಾಡೆಲ್ಲ ಹಸಿರಾಗಿದ್ದು, ಪ್ರಾಣಿಗಳು ಹೆದ್ದಾರಿ ಬದಿಯಲ್ಲೇ ಮೇಯುತ್ತಿವೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಊಟಿ ಸೇರಿದಂತೆ ಇತರ ಸ್ಥಳಗಳಿಗೆ ಹೋಗುವ ಪ್ರವಾಸಿಗರು ರಸ್ತೆ ಬದಿಯಲ್ಲಿ ಸಿಗುವ ಆನೆ, ಕಾಡೆಮ್ಮೆ, ಜಿಂಕೆ ಮುಂತಾದ ಪ್ರಾಣಿಗಳ ಪೋಟೊ ತೆಗೆಯುವುದಕ್ಕೆ, ನೋಡುವುದಕ್ಕೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ.
ಬೆಳಿಗ್ಗೆ, ಸಂಜೆ ಸಮಯದಲ್ಲಿ ಪ್ರಾಣಿಗಳು ರಸ್ತೆ ಬದಿಯಲ್ಲಿ ಗುಂಪು ಗುಂಪಾಗಿ ನಿಂತಿರುವುದು, ನೆರಳಿನಲ್ಲಿ ಮಲಗಿರುವುದು, ರಸ್ತೆ ದಾಟುತ್ತಿರುವುದು ಈಚೆಗೆ ಸಾಮಾನ್ಯವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವವರು ಸಾಮಾಜಿಕ ತಾಣಗಳಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಮಿಳುನಾಡಿನ ಮಧುಮಲೆ ಅರಣ್ಯ ಪ್ರದೇಶದ ಭಾಗದಲ್ಲೂ ಪ್ರಾಣಿಗಳು ಕಂಡು ಬರುತ್ತಿವೆ.
‘ಬೇಸಿಗೆ ಆರಂಭವಾಗುತ್ತಿದ್ದಂತೆ ಬಂಡೀಪುರದ ಭಾಗದಲ್ಲಿ ನೀರು ಕಡಿಮೆಯಾಗುವುದರಿಂದ ದೊಡ್ಡ ಪ್ರಾಣಿಗಳು ನೀರು ಇರುವ ಕಡೆಗಳಾದ ಮೂಲೆಹೊಳೆ, ಮಧುಮಲೆ ಕಾಡಿನ ಕಡೆಗೆ ವಲಸೆ ಹೋಗುತ್ತವೆ. ಮಳೆ ಸಂದರ್ಭದಲ್ಲಿ ಮತ್ತೆ ಈ ಭಾಗಕ್ಕೆ ಬರುತ್ತವೆ. ಈ ಬಾರಿ ಬೇಗನೇ ಉತ್ತಮ ಮಳೆಯಾಗಿದೆ. ಗಿಡಗಳು ಚಿಗುರಿದ್ದು, ಪ್ರಾಣಿಗಳಿಗೆ ಸಾಕಷ್ಟು ಮೇವು ಸಿಗುತ್ತಿದೆ, ಹೀಗಾಗಿ ಕಾಡಂಚಿನ ಭಾಗದಲ್ಲೇ ಅವು ಓಡಾಡಿಕೊಂಡಿವೆ’ ಎಂದು ಹೇಳುತ್ತಾರೆ ಇಲಾಖೆಯ ಸಿಬ್ಬಂದಿ.
ಸಫಾರಿಯಲ್ಲೂ ದರ್ಶನ: ಸಫಾರಿಗೆ ಹೋದಾಗಲೂ ಪ್ರತಿ ನಿತ್ಯ ಹುಲಿ, ಚಿರತೆ ಕಾಣಸಿಗುತ್ತಿವೆ. ಸಫಾರಿ ವಲಯದಲ್ಲಿ ಹೆಚ್ಚಿನ ಕೆರೆ ಕಟ್ಟೆಗಳು ಇರುವುದರಿಂದ ಅಲ್ಲಿ ಪ್ರಾಣಿಗಳು ಕಂಡು ಬರುವುದು ಸಾಮಾನ್ಯ. ಆದರೆ ಹೆದ್ದಾರಿ ಬದಿಯಲ್ಲಿ ಪ್ರಾಣಿಗಳು ಸಿಗುವುದು ಅಪರೂಪ.
ಎಚ್ಚರ ಅಗತ್ಯ: ಸಲಹೆ
ರಸ್ತೆ ಬದಿಯಲ್ಲೇ ಪ್ರಾಣಿಗಳು ಇರುವುದರಿಂದ ವಾಹನ ಸವಾರರು ಹೆಚ್ಚು ಎಚ್ಚರದಿಂದಿರಬೇಕು. ವಾಹನ ನಿಲ್ಲಿಸುವುದು, ವಾಹನದಿಂದ ಇಳಿಯುವುದು, ಫೋಟೊ ತೆಗೆಯುವ ಸಾಹಸಕ್ಕೆ ಕೈ ಹಾಕಬಾರದು ಎಂದು ಅಧಿಕಾರಿಗಳು ಹಾಗೂ ವನ್ಯಪ್ರೇಮಿಗಳು ಎಚ್ಚರಿಸಿದ್ದಾರೆ.
‘ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್‌ನಿಂದ ಕೆಕ್ಕನಹಳ್ಳ ಗಡಿ ಭಾಗದವರೆಗೆ ಪ್ರಯಾಣ ಮಾಡಿದರೆ ಪ್ರಾಣಿಗಳು ಕಂಡು ಬರುತ್ತಿವೆ. ಪ್ರಾಣಿಗಳನ್ನು ನೋಡಲು ರಸ್ತೆಯಲ್ಲಿ ವಾಹನ ನಿಲ್ಲಿಸುವುದರಿಂದ ಲಾರಿ ಮತ್ತು ಸರಕು ವಾಹನಗಳಿಗೆ ತೊಂದರೆಯಾಗುತ್ತಿದೆ. ಹೆದ್ದಾರಿಯಲ್ಲಿ ಸಿಬ್ಬಂದಿ ಗಸ್ತು ತಿರುಗುವ ಮೂಲಕ ಪ್ರಾಣಿಗಳಿಗೆ ತೊಂದರೆಯಾಗದಂತೆ ನಿಗಾ ವಹಿಸಬೇಕು. ಇಲ್ಲವಾದಲ್ಲಿ ಪ್ರಯಾಣಿಕರಿಂದ ಕಿರಿಕಿರಿಯಾಗಿ ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ’ ಎಂದು ಪರಿಸರ ಪ್ರೇಮಿ ರಾಬಿನ್ಸನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಾಹನಗಳು ಚೆಕ್‌ಪೋಸ್ಟ್‌ನಿಂದ ಕಾಡಿನೊಳಗೆ ಪ್ರವೇಶ ಪಡೆಯುತ್ತಿದ್ದಂತೆ, ಯಾವುದೇ ಕಾರಣಕ್ಕೂ ವಾಹನ ನಿಲ್ಲಿಸದಂತೆ ಸವಾರರಿಗೆ ಸೂಚಿಸಲಾಗುತ್ತಿದೆ’ ಎಂದು ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ತಿಳಿಸಿದರು.
*
ಉತ್ತಮ ಮಳೆಯಾಗುತ್ತಿರುವುದರಿಂದ ಪ್ರಾಣಿಗಳಿಗೆ ಸಮಸ್ಯೆ ಆಗುವುದಿಲ್ಲ. ಇನ್ನೂ ಮಳೆಯಾಗಲಿರುವುದರಿಂದ ಕಾಡಿನಲ್ಲಿರುವ ಎಲ್ಲ ದೊಡ್ಡ ಕೆರೆಗಳೂ ತುಂಬಲಿವೆ.
-ಡಾ.ರಮೇಶ್ ಕುಮಾರ್, ಹುಲಿ ಯೋಜನೆ ನಿರ್ದೇಶಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.