ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಆಲೆಮನೆಗಳಲ್ಲಿ ಪ್ಲಾಸ್ಟಿಕ್ ಬೆಂಕಿ!

ಕೇರಳದ ರಬ್ಬರ್ ತ್ಯಾಜ್ಯ: ಕಾರ್ಮಿಕರ ಶ್ವಾಸಕೋಶಕ್ಕೆ ವಿಷ
Last Updated 11 ಜನವರಿ 2023, 23:30 IST
ಅಕ್ಷರ ಗಾತ್ರ

ಚಾಮರಾಜನಗರ/ಯಳಂದೂರು: ಜಿಲ್ಲೆಯ ಕೆಲವು ಕಡೆಗಳಲ್ಲಿ ಆಲೆಮನೆಗಳಲ್ಲಿ ಉರುವಲಿಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಲಾಗುತ್ತಿದೆ.

ಜಿಲ್ಲೆಯಲ್ಲಿ 240ರಷ್ಟು ಆಲೆಮನೆಗಳಿವೆ. ಯಳಂದೂರು ತಾಲ್ಲೂಕಿನ ಕೆಲವು ಆಲೆಮನೆ ಆವರಣದಲ್ಲಿ ದೊಡ್ಡ ಪ‍್ರಮಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯಗಳ ರಾಶಿ ಕಂಡು ಬಂದಿದ್ದು, ಗಾಢ ಕಪ್ಪುಬಣ್ಣದ ವಿಷಯುಕ್ತ ಹೊಗೆ ಹೊರ ಬರುತ್ತಿದೆ. ಸುತ್ತಮುತ್ತಲ ಗ್ರಾಮ ಪರಿಸರ ಹಾಗೂ ಆಲೆಮನೆ ನಂಬಿದ ಕಾರ್ಮಿಕರ ಉಸಿರಿಗೂ ವಿಷಕಾರಿ ವಾಯು ಸೇರುವ ಆತಂಕ ಎದುರಾಗಿದೆ.

ಕೇರಳ, ತಮಿಳುನಾಡಿನ ಕೈಗಾರಿಕೆಗಳಲ್ಲಿ ಅನುಪಯುಕ್ತವಾದ ರಬ್ಬರ್, ಇತರೆ ಪ್ಲಾಸ್ಟಿಕ್‌ ತ್ಯಾಜ್ಯಗಳು ನೇರವಾಗಿ ಆಲೆಮನೆಗೆ ಮಾರಾಟವಾಗುತ್ತಿದೆ. ಕಬ್ಬಿನ ರಸವನ್ನು ಕಾಯಿಸುವಾಗ ಕಬ್ಬಿನ ಸಿಪ್ಪೆಯ ಜೊತೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಒಲೆಗೆ ಸೇರಿಸಿ ಉರಿಸಲಾಗುತ್ತಿದೆ.

ನವೆಂಬರ್-ಫೆಬ್ರುವರಿ ನಡುವೆ ಮಳೆ, ಮೋಡ ಹಾಗೂ ಮಂಜು ಮುಸುಕಿದಾಗ, ಕಬ್ಬಿನ ಜಲ್ಲೆ ಬೇಗ ಒಣಗುವುದಿಲ್ಲ. ಬೆಲ್ಲದ ಉತ್ಪಾದನಾ ಸಾಮರ್ಥವೂ ಕುಗ್ಗುತ್ತದೆ. ಹಾಗಾಗಿ, ಬೆಲ್ಲದ ಉತ್ಪಾದಕರು ಉರುವಲಿನ ಜೊತೆ ಹೆಚ್ಚುವರಿಯಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸೇರಿಸುತ್ತಾರೆ. ಪ್ಲಾಸ್ಟಿಕ್ ವೇಗವಾಗಿ ಸುಡುವುದರಿಂದ ಕಬ್ಬಿನ ಹಾಲು ಬೇಗ ಬಿಸಿಯಾಗಿ, ಕಡಿಮೆ ಸಮಯದಲ್ಲಿ ಬೆಲ್ಲದ ಪಾಕ ಹದಗೊಳ್ಳುತ್ತದೆ.

ಪ್ರಾಣಿ ಪಕ್ಷಿ, ಜಲಚರಕ್ಕೂ ಹಾನಿ: ಪ್ಲಾಸ್ಟಿಕ್ ದಪ್ಪನೆ ಹಾಳೆ, ಚೀಲಗಳು, ಪಾದರಕ್ಷೆಯ ಅನುಪಯುಕ್ತ ಶೀಟ್, ಕೋಲ್ ಹಾಳೆಗಳು ಪ್ರತಿ ಟನ್‌ಗೆ ₹ 800ರಂತೆ ಆಲೆಮನೆ ಅಂಗಳಕ್ಕೆ ತಲುಪುತ್ತಿದೆ.

‘ಕಬ್ಬಿನ ಜಲ್ಲೆ ಜತೆ ಸೇರಿಸಿ ಉರಿಸಿದಾಗ ದೊಡ್ಡ ಪ್ರಮಾಣದಲ್ಲಿ ಕಾರ್ಬನ್ ಮಾನಾಕ್ಸೈಡ್, ಕ್ಲೋರಿನ್, ಸಲ್ಫರ್‌ ಡೈ ಆಕ್ಸೈಡ್ ಹಾಗೂ ಡಯಾಕ್ಸಿನ್ ವಿಷಾನಿಲಗಳು ವಾತಾವರಣಕ್ಕೆ ಸೇರುತ್ತವೆ. ಗಾಳಿ ಮೂಲಕ ದುಡಿಯುವವರ ದೇಹ ಸೇರಿ ಶ್ವಾಸಕೋಶವನ್ನು ಬಾಧಿಸುತ್ತದೆ. ಉಸಿರಾಟದ ತೊಂದರೆಗಳಿಗೂ ಕಾರಣವಾಗುತ್ತದೆ. ಮಳೆ, ನೆರೆಯ ಸಂದರ್ಭದಲ್ಲಿ ನದಿ, ಕೊಳ್ಳ, ಕೆರೆಗಳಲ್ಲಿ ಸೇರಿ ಜಲಚರ ಜೀವಿಗಳ ಬದುಕಿಗೆ ಕಂಟಕವಾಗುತ್ತದೆ. ಭೂ ಮಾಲಿನ್ಯಕ್ಕೂ ಕಾರಣವಾಗುತ್ತದೆ’ ಎಂದು ಎಚ್ಚರಿಸುತ್ತಾರೆ ಪರಿಸರ ತಜ್ಞರು.

ಟೈರ್ ಬಳಕೆಗೆ ಪರ್ಯಾಯ: ಗುಜರಿಗಳಲ್ಲಿ ಬಿಸಾಡುವ ಲಾರಿ, ಬಸ್, ಕಾರಿನ ಟೈರ್‌ಗಳನ್ನು ಕೊಂಡು, ಕತ್ತರಿಸಿ ಆಲೆಮನೆಯಲ್ಲಿ ಬಳಕೆ ಮಾಡಲಾಗುತ್ತಿತ್ತು. ಈಗ ಟೈರ್ ಒಂದಕ್ಕೆ ₹ 800ಕ್ಕೂ ಹೆಚ್ಚಿನ ಬೆಲೆ ಇದೆ. ಅವುಗಳ ಬಳಕೆ ಮೇಲೂ ನಿಷೇಧ ಹೇರಲಾಗಿದೆ.

‘ಕೇರಳ, ತಮಿಳುನಾಡಿನಿಂದ ಸಾಗಣೆಯಾಗುವ ರಬ್ಬರ್ ಮತ್ತು ಪಾಲಿಮರ್‌ಗಳು ಕಡಿಮೆ ಬೆಲೆಗೆ, ನಿಗದಿತ ಸ್ಥಳಕ್ಕೆ ರಾತ್ರಿ ಸಮಯದಲ್ಲಿ ಪೂರೈಕೆಯಾಗುತ್ತದೆ’ ಎಂದು ಕಾರ್ಮಿಕರೊಬ್ಬರು ಹೇಳಿದರು.

ನಿಷೇಧಿತ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಳಸುವುದಕ್ಕೆ ಅವಕಾಶ ಇಲ್ಲ. ತಕ್ಷಣವೇ ಪರಿಶೀಲಿಸಿ ಕ್ರಮ ವಹಿಸಲಾಗುವುದು
ಡಿ.ಎಸ್‌.ರಮೇಶ್‌, ಜಿಲ್ಲಾಧಿಕಾರಿ

ನಿಷೇಧಿತ ಪ್ಲಾಸ್ಟಿಕ್‌ ಅನ್ನು ಉರುವಲಾಗಿ ಬಳಸುವ ಆಲೆಮನೆಗಳ ವಿರುದ್ಧ ಗ್ರಾಮ ಪಂಚಾಯಿತಿಗಳೇ ಕ್ರಮ ಕೈಗೊಳ್ಳಬೇಕು
ಉಮಾಶಂಕರ್‌, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT