ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬೀನ್ಸ್‌, ಟೊಮೆಟೊ ಬೆಲೆ ದಿಢೀರ್ ಏರಿಕೆ

ಹಣ್ಣುಗಳ ಧಾರಣೆ ಯಥಾಸ್ಥಿತಿ, ಹೂವಿನ ಬೆಲೆಯಲ್ಲಿ ಸ್ವಲ್ಪ ಇಳಿಕೆ
Last Updated 24 ಆಗಸ್ಟ್ 2020, 16:48 IST
ಅಕ್ಷರ ಗಾತ್ರ

ಚಾಮರಾಜನಗರ: ಗಣೇಶ ಹಬ್ಬ ಕಳೆಯುತ್ತಿದ್ದಂತೆಯೇ ಕೆಲವು ತರಕಾರಿಗಳು ದುಬಾರಿಯಾಗಿವೆ. ಹಬ್ಬದ ಸಂದರ್ಭಕ್ಕೆ ಹೋಲಿಸಿದರೆ ಹೂವಿನ ದರದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಮಾಂಸ ಮಾರುಕಟ್ಟೆಯಲ್ಲಿ ಮೊಟ್ಟೆಯ ಧಾರಣೆಯೂ ಹೆಚ್ಚಿದೆ.

ತರಕಾರಿಗಳ ಪೈಕಿ ಬೀನ್ಸ್‌, ಕ್ಯಾರೆಟ್‌ ಹಾಗೂ ಟೊಮೆಟೊ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

ಕಳೆದ ವಾರ ಕೆಜಿಗೆ ₹50 ಇದ್ದ ಬೀನ್ಸ್‌ ಈ ವಾರ ₹80ಕ್ಕೆ ಏರಿದೆ. ಹಾಪ್‌ಕಾಮ್ಸ್‌ನಲ್ಲಿ ₹25 ಇದ್ದ ಟೊಮೆಟೊ ಈ ವಾರ ₹30–₹35ರವರೆಗೆ ಇದೆ. ಹೊರ ಮಾರುಕಟ್ಟೆಯಲ್ಲಿ ತಳ್ಳುಗಾಡಿಗಳಲ್ಲಿ ₹40ವರೆಗೆ ಇದೆ.

ಕಳೆದ ವಾರ ಕೆಜಿಗೆ ₹20 ಇದ್ದ ಕ್ಯಾರೆಟ್‌ ಈ ವಾರ ₹30 ಆಗಿದೆ. ಈರುಳ್ಳಿ ಬೆಲೆಯೂ ₹5ನಷ್ಟು ಹೆಚ್ಚಾಗಿದೆ.

‘ಸಾಮಾನ್ಯವಾಗಿ ಈ ಮೂರು ತರಕಾರಿಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಎರಡು ಮೂರು ದಿನಗಳಿಂದ ಬೆಲೆಯಲ್ಲಿ ದಿಢೀರ್‌ ಏರಿಕೆಯಾಗಿದೆ. ಗುಣಮಟ್ಟದ ಟೊಮೆಟೊ ಬರುತ್ತಿಲ್ಲ. ಬೀನ್ಸ್‌ ನ ಆವಕ ಕಡಿಮೆಯಾಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ’ ಎಂದು ಅವರು ಹೇಳಿದರು.

ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಹಣ್ಣುಗಳ ಬೆಲೆಯಲ್ಲೂ ಯಥಾಸ್ಥಿತಿ ಮುಂದುವರಿದಿದೆ. ಹಬ್ಬದ ಸಂದರ್ಭದಲ್ಲಿ ಸ್ವಲ್ಪ ಏರಿಕೆ ಕಂಡಿದ್ದ ಏಲಕ್ಕಿ ಬಾಳೆ ಬೆಲೆ ಈಗ ಕಡಿಮೆಯಾಗಿದೆ. ಸೋಮವಾರ ಹಾಪ್‌ಕಾಮ್ಸ್‌ನಲ್ಲಿ ₹50 ಇತ್ತು. ಹೊರಗಡೆ ₹60ರವರೆಗೂ ಮಾರಾಟವಾಗುತ್ತಿದೆ.

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕಳೆದ ವಾರದ ಆರಂಭದಲ್ಲಿದ್ದ ಬೆಲೆಯೇ ಮುಂದುವರಿದಿದೆ. ಗೌರಿ–ಗಣೇಶ ಹಬ್ಬದ ದಿನಗಳಲ್ಲಿ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಭಾನುವಾರದಿಂದ ಮತ್ತೆ ಹಳೆಯ ದರವೇ ಮುಂದುವರಿದಿದೆ.

ಕನಕಾಂಬರ ಕೆಜಿಗೆ ₹1000, ಮಲ್ಲಿಗೆ ₹240–280, ಸುಗಂಧರಾಜ ಕೆಜಿಗೆ ₹120–160 ವರೆಗೆ ಇದೆ.

ಮಾಂಸ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆಯಲ್ಲಿ ಹೆಚ್ಚಳವಾಗಿದೆ. 100 ಮೊಟ್ಟೆಗಳ ಸಗಟು ಬೆಲೆ ಕಳೆದ ವಾರ ₹370 ಇತ್ತು. ಈ ವಾರ ₹385 ಇದೆ.

‘ಬೇಡಿಕೆಗೆ ಅನುಸಾರವಾಗಿ ದಿನಂಪ್ರತಿ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ’ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಚಿಕನ್‌ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಮಾರುಕಟ್ಟೆಗೆ ದಾಂಗುಡಿ ಇಟ್ಟ ಸೀಬೆ

ಎರಡು ವಾರಗಳಿಂದೀಚೆಗೆ ಮಾರುಕಟ್ಟೆಗೆ ಸೀಬೆಕಾಯಿ ಹೆಚ್ಚು ಆವಕವಾಗುತ್ತಿದ್ದು, ಹಣ್ಣಿನ ಅಂಗಡಿಗಳು, ತಳ್ಳುಗಾಡಿಗಳಲ್ಲಿ ವ್ಯಾಪಾರ ಜೋರಾಗಿದೆ.

ಸೀಬೆಯಲ್ಲಿ ಬಿಳಿ ತಿರುಳು ಹಾಗೂ ಕೆಂಪು ತಿರುಳಿನ ಎರಡು ತಳಿ ಲಭ್ಯವಿದ್ದು, ಸದ್ಯ ಬಿಳಿ ತಿರುಳಿನ ಸೀಬೆ ಮಾತ್ರ ಬರುತ್ತಿದೆ.

ಕೆಜಿಗೆ ₹40ರಿಂದ ₹60ರವರೆಗೂ ಬೆಲೆ ಇದೆ. ಹಣ್ಣಿನ ಅಂಗಡಿಗಳಲ್ಲಿ ₹40–₹50ಗೆ ಮಾರಾಟ ಮಾಡಿದರೆ, ಕೆಲವು ತಳ್ಳುಗಾಡಿ ವ್ಯಾಪಾರಿಗಳು ಕೆಜಿಗೆ ₹60 ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT