ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಕೊರತೆ; ಜನರ ಪರದಾಟ

ಬೇಗೂರು: ಚರಂಡಿ ಸರಿ ಇಲ್ಲದೆ ಅನೈರ್ಮಲ್ಯ, ನಾಯಿ, ಹಂದಿಗಳ ಹಾವಳಿ
Last Updated 28 ಫೆಬ್ರುವರಿ 2022, 2:54 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಬೇಗೂರಿನಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಜನರು ಸಮಸ್ಯೆಗಳ ನಡುವೆಯೇ ಜೀವನ ಸಾಗಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದಲ್ಲಿ ಸುಮಾರು 5,000 ಜನಸಂಖ್ಯೆ ಇದ್ದು, ಮೈಸೂರು, ಎಚ್‌.ಡಿ.ಕೋಟೆ, ಸರಗೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕೊಂಡಿಯಾಗಿದ್ದು ಹೆಚ್ಚಿನ ವಾಹಿವಾಟು ನಡೆಯುವ ಸ್ಥಳವಾದರೂ ಸೌಕರ್ಯಗಳು ಮರೀಚಿಕೆಯಾಗಿವೆ.

ಚರಂಡಿ ವ್ಯವಸ್ಥೆ ಇಲ್ಲ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಂಗಡಿ ಬೀದಿಗಳ ಮುಂಭಾಗದ ಚರಂಡಿಗಳು ನೆಲಮಟ್ಟಕ್ಕಿದ್ದು ಕಸ ಕಡ್ಡಿಗಳು ಚರಂಡಿ ಸೇರುತ್ತಿವೆ. ಕೂಳಚೆ ನೀರು ಸರಿಯಾಗಿ ಹರಿಯದೆ ಇರುವುದರಿಂದ ಎರಡಿಯ ಎರಡೂ ಭಾಗಗಳಲ್ಲಿರುವ ಕಲ್ಲುಗಳು ಕುಸಿದಿವೆ. ಮಳೆ ಬಂದಾಗ ಕಸಕಡ್ಡಿಗಳ ಸಮೇತ ಕೊಳಚೆ ನೀರು ಅಂಗಡಿಗಳ ಒಳನುಗ್ಗುತ್ತದೆ. ಗಬ್ಬುವಾಸನೆಯಿಂದಾಗಿ ಈ ಭಾಗದಲ್ಲಿ ವ್ಯಾಪಾರ ವಹಿವಾಟು ಕೂಡ ಕಡಿಮೆಯಾಗಿದೆ. ಚರಂಡಿಯನ್ನು ಶೀಘ್ರ ದುರಸ್ತಿ ಮಾಡಿ, ಸ್ವಚಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

’ಚರಂಡಿಯಿಂದಾಗಿ ನೊಣ ಸೊಳ್ಳೆಗಳ ಹಾರಾಟ ಹೆಚ್ಚಾಗಿದ್ದು, ಮನೆಯಲ್ಲಿ ಇರಲು ಆಗುತ್ತಿಲ್ಲ. ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ರಸ್ತೆ ಬದಿಯಲ್ಲಿ ನಿಂತು ವ್ಯಾಪಾರವನ್ನೂ ಮಾಡಲು ಆಗುತ್ತಿಲ್ಲ‘ ಎಂದು ವ್ಯಾಪಾರಿ ರಾಮು ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ಗ್ರಾಮ ಪ‍ಂಚಾಯಿತಿ ಅಭಿವವೃದ್ಧಿ ಅಧಿಕಾರಿ ಗುರುಪ್ರಸಾದ್‌ ಅವರು ಪ್ರತಿಕ್ರಿಯಿಸಿ, ’ಗ್ರಾಮದಲ್ಲಿರುವ ಚರಂಡಿಗಳ ಹೂಳೆತ್ತಲು ಕ್ರಮ ವಹಿಸಲಾಗಿದೆ. ಹಂದಿ ಮಾಲೀಕರ ಸಭೆ ಕರೆದು, ಅದರ ಹಾವಳಿ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು.ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗುವುದು ಮತ್ತು ಕೋತಿಗಳನ್ನು ಹಿಡಿದು ಬೇರೆಕಡೆಗೆ ಸ್ಥಳಾಂತರಿಸಲಾಗುವುದು‘ ಎಂದರು.

ಹಂದಿ, ನಾಯಿಗಳ ಹಾವಳಿ

ಗ್ರಾಮದಲ್ಲಿ ಹಂದಿ ಮತ್ತು ನಾಯಿಗಳ ಹಾವಳಿ ಹೆಚ್ಚಾಗಿದ್ದು, ದಚಾರಿಗಳು ನಡೆದಾಡಲು ಆಗುತ್ತಿಲ್ಲ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ.

’ಜನರು ನಡೆದು ಕೊಂಡು ಹೋಗುತ್ತಿದ್ದರೆ ನಾಯಿಗಳು ಕಚ್ವಲು ಬರುತ್ತವೆ. ಹಂದಿಗಳು ಚರಂಡಿಯ ಬದಿಯಲ್ಲಿ ಬಿದ್ದು ಹೊರಳಾಡಿ ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರ ಮಾಡುತ್ತದೆ. ಇದರಿಂದ ಜನರಿಗೆ ಕಿರಿಕಿರಿಯಾಗುತ್ತದೆ‘ ಎಂದು ಗ್ರಾಮದ ಶೇಖರ್ ಅವರು ಆರೋಪಿಸಿದರು.

’ಗ್ರಾಮದ ಒಳಭಾಗದಲ್ಲಿ ಸಂಚರಿಸುವ ಹಂದಿಗಳು ಅನೈರ್ಮಲ್ಯವನ್ನು ಉಂಟುಮಾಡುತ್ತಿವೆ. ರಸ್ತೆ ಬದಿಯಲ್ಲಿರುವ ಅಂಗಡಿಗಳಿಗೆ ರಾತ್ರಿವೇಳೆ ನುಗ್ಗಿ ತರಕಾರಿ ಮತ್ತು ಹಣ್ಣುಹಂಪಲುಗಳನ್ನು ತಿಂದು ನಷ್ಟ ಉಂಟುಮಾಡುತ್ತಿವೆ. ಶೀಘ್ರವಾಗಿ ಹಂದಿ ಮತ್ತು ನಾಯಿಗಳನ್ನು ಸೆರೆ ಹಿಡಿದು ಸಾರ್ವಜನಿಕರಿಗೆ ಅನುಕೂಲ ಮಾಡಬೇಕು‘ ಎಂದು ಚಂದ್ರು ಒತ್ತಾಯಿಸಿದರು.

’ಕೋತಿಗಳ ಹಾವಳಿಯೂ ಇದ್ದು, ಅಂಗಡಿಗಳ ಮುಂದೆ ಯಾವುದೇ ವಸ್ತುಗಳನ್ನು ಇಡಲು ಆಗುತ್ತಿಲ್ಲ. ಮನೆಯ ಹೆಂಚು ತೆಗೆದು ಉಪದ್ರವ ನೀಡುತ್ತಿವೆ. ಒಬ್ಬರು ಮನೆಯಲ್ಲಿ ಇರಲೇಬೇಕು. ಕೂಲಿಗೂ ಹೋಗಲು ಆಗುತ್ತಿಲ್ಲ‘ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT