ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮನ ಅಮಾವಾಸ್ಯೆ: ಮಾದಪ್ಪನ ಕ್ಷೇತ್ರದಲ್ಲಿ ಭಕ್ತರ ದಂಡು

ಶ್ರಾವಣ ಮಾಸದ ಮೊದಲ ಶುಕ್ರವಾರ; ಇಂದು 108 ಕುಂಭಾಭಿಷೇಕ
Last Updated 28 ಜುಲೈ 2022, 16:06 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ದೇವಾಲಯದಲ್ಲಿ ಗುರುವಾರ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು.

ಜಿಲ್ಲೆ, ಹೊರ ಜಿಲ್ಲೆಗಳು, ನೆರೆ ರಾಜ್ಯಗಳ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದರು.

ಮುಂಜಾನೆಯಿಂದಲೇ ಬೇಡಗಂಪಣ ಸಮುದಾಯದ ಸರದಿ ಅರ್ಚಕರು ವಿಶೇಷಪೂಜೆಗಳಿಗೆ ಚಾಲನೆ ನೀಡಿದರು. ಬೆಳಿಗ್ಗೆ ಬೆಳಗ್ಗೆ6 ಗಂಟೆಯವರೆಗೆರುಧ್ರಾಭಿಷೇಕ, ಬಿಲ್ವಾರ್ಚನೆ, ಗಂಧಾಭಿಷೇಕ, ಕ್ಷೀರಾಭಿಷೇಕವನ್ನು ನೆರವೇರಿಸಿ ನಂತರ ಮಹಾ ಮಂಗಳಾರತಿ ಬೆಳಗಲಾಯಿತು. ಆ ಬಳಿಕ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು.

ಕರ್ನಾಟಕ ಸೇರಿದಂತೆ ತಮಿಳುನಾಡು ರಾಜ್ಯದಿಂದ ಬಂದಿದ್ದ ಅಪಾರ ಸಂಖ್ಯೆ ಭಕ್ತರು ಅಂತರಗಂಗೆಯಲ್ಲಿ ಸ್ನಾನ ಮಾಡಿ ದೇವಾಲಯದ ಸುತ್ತ ಉರುಳು ಸೇವೆ ಹಾಗೂ ಪಂಜಿನ ಸೇವೆ ಮಾಡಿದರು. ಅಲ್ಲದೇ ಹುಲಿವಾಹನ, ಬಸವ ಹಾಗೂ ರುದ್ರಾಕ್ಷಿ ಮಂಟಪ ಇನ್ನಿತರ ಉತ್ಸವಗಳಲ್ಲಿ ಪಾಲ್ಗೊಂಡರು. ರಾತ್ರಿ ಏಳು ಗಂಟೆಯಲ್ಲಿ ಜರುಗಿದ ಚಿನ್ನದ ತೇರಿನ ಉತ್ಸವದಲ್ಲಿ ಭಾಗಿಯಾಗಿದರು.

ಚಿನ್ನದ ತೇರು ಹೊರ ಬರುತ್ತಿದ್ದಂತೆ ನೆರೆದಿದ್ದ ಭಕ್ತರು ಉಘೇ ಮಾದಪ್ಪ, ಉಘೇ ಮಾಯ್ಕಾರ, ಮುದ್ದು ಮಾದೇವನಿಗೆ ಉಘೇ... ಉಘೇ ಎಂದು ಉದ್ಘಾರ ತೆಗೆದರು.

ಹರಕೆ ಹೊತ್ತಿದ್ದ ಭಕ್ತರು ರಾಜಗೋಪುರ, ದೇವಾಲಯ ಮುಂಭಾಗ ಧೂಪ ಸಾಂಬ್ರಾಣಿ ಹಾಕಿ ಇಡುಗಾಯಿ ಹೊಡೆದು, ಕಾಣಿಕೆ ಅರ್ಪಿಸಿದರು.

ವಿಶೇಷ ಅಲಂಕಾರ:ಭೀಮನ ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ದೇವಾಲಯದಲ್ಲಿರುವ ದೇವಾಲಯ ಹಾಗೂ ಮಹದೇಶ್ವರಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ವಿಶೇಷ ಲಾಡು ಕೌಂಟರ್: ಭೀಮನ ಅಮಾವಾಸ್ಯೆ ಕಾರಣಕ್ಕೆ ಪ್ರಾಧಿಕಾರ ವತಿಯಿಂದ ದೇವರ ದರ್ಶನಕ್ಕೆ ತೆರಳುವ ಭಕ್ತರಿಗೆ ಸರತಿ ಸಾಲು, ನೆರಳಿಗೆ ಶಾಮಿಯಾನ ಸೇರಿದಂತೆ ದಾಸೋಹ, ಕುಡಿಯುವ ನೀರು, ಉಚಿತ ಶೌಚಾಲಯ, ಪಾರ್ಕಿಂಗ್ ಹಾಗೂ ಇನ್ನಿತರ ಮೂಲ ಸೌಕರ್ಯ ವ್ಯವಸ್ಥೆ ಮಾಡಲಾಗಿತ್ತು.

ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಹಗಲು ವೇಳೆ ನಾಲ್ಕು, ರಾತ್ರಿ ವೇಳೆ ಒಂದು ಕೌಂಟರ್ ಸೇರಿದಂತೆ ಲಾಡು ಪ್ರಸಾದ ವಿತರಣೆಗೆ ಐದು ಕೌಂಟರ್ ತೆರೆಯಲಾಗಿತ್ತು. ರಾಜಗೋಪುರ ಬಳಿ ವಿಶೇಷ ದರ್ಶನ ಕೌಂಟರ್ ಸಹ ಇತ್ತು.

ವಾಹನ ದಟ್ಟಣೆ: ಭೀಮನ ಅಮಾವಾಸ್ಯೆಯ ದಿನ ಮಹದೇಶ್ವರ ಸ್ವಾಮಿಯ ದರ್ಶನ ಪಡೆಯಲು ಜಿಲ್ಲೆ ಮಾತ್ರವಲ್ಲದೆ, ಬೆಂಗಳೂರು, ಮೈಸೂರು, ಕನಕಪುರ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮಳವಳ್ಳಿ ಹಾಗೂ ಇತರ ಜಿಲ್ಲೆಗಳಿಂದಲೂ ವಾಹನಗಳ ಮೂಲಕ ಹೆಚ್ಚಿನ ಭಕ್ತರು ಬಂದಿದ್ದರು. ಇದರಿಂದ ಆನೆ ತಲೆ ದಿಂಬದಿಂದ ಚೆಕ್ ಪೋಸ್ಟ್ ತನಕ ಕೆಲ ಕಾಲ ವಾಹನಗಳು ಸಾಲು ಗಟ್ಟಿ ನಿಂತು ಸಂಚಾರ ದಟ್ಟಣೆ ಉಂಟಾಯಿತು.

ಕುಂಭಾಭಿಷೇಕ ಪೂಜೆ:ಶ್ರಾವಣ ಮಾಸದ ಮೊದಲ ಶುಕ್ರವಾರದ ಪ್ರಯುಕ್ತ ಶುಕ್ರವಾರಮಹದೇಶ್ವರ ಸ್ವಾಮಿಗೆ 108 ಕಳಶಗಳಿಂದ ಕುಂಭಾಭಿಷೇಕ ನೆರವೇರಲಿದೆ.

ಶ್ರಾವಣ ಮಾಸದ ಪ್ರತಿ ದಿನ ಕುಂಭಾಭಿಷೇಕ ಜರುಗಲಿದೆ. ಶನಿವಾರದಿಂದ ಪ್ರತಿ ದಿನ 12 ಕಳಶಗಳಿಂದ ಅಭಿಷೇಕ ನಡೆಯಲಿದ್ದು, ಕೊನೆಯ ದಿನ ಮತ್ತೆ 108 ಕುಂಭಗಳಿಂದ ಅಭಿಷೇಕ ನೆರವೇರಲಿದೆ.

ಶುಕ್ರವಾರವೂ ಮಾದಪ್ಪನ ದರ್ಶನಕ್ಕಾಗಿ ಭಾರಿ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ.

ಅಂಗವಿಕಲರು, ಹಿರಿಯರ ಸಂಚಾರಕ್ಕೆ ವಾಹನ
ಮಹದೇಶ್ವರಸ್ವಾಮಿ ದರ್ಶನಕ್ಕೆ ಬರುವ ಅಂಗವಿಕರಿಗೆ ಹಾಗೂ ಹಿರಿಯ ನಾಗರಿಕರನ್ನು ಕರೆದುಕೊಂಡು ಹೋಗುವ ಹೊಸ ಬ್ಯಾಟರಿ ಚಾಲಿತ ವಾಹನಕ್ಕೆ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಚಾಲನೆ ನೀಡಿದರು.

ಮಹದೇಶ್ವರಬೆಟ್ಟ ಬಸ್ ನಿಲ್ಧಾಣ, ದೇವಾಲಯದ ಕಚೇರಿ ಗೇಟ್ ಮುಂಭಾಗದಿಂದ ಅಂಗವಿಕಲರು ಹಾಗೂ ಹಿರಿಯ ನಾಗರಿಕರನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಲು ಈ ವಾಹನ ಬಳಸಲಾಗುತ್ತಿದ್ದು, ಈ ಕಾರ್ಯಕ್ಕೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೂ ಮೊದಲು ಒಂದೇ ಬ್ಯಾಟರಿ ಚಾಲಿತ ವಾಹನ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT