ಗುರುವಾರ , ನವೆಂಬರ್ 26, 2020
20 °C

ಬಿಳಿಗಿರಿರಂಗನ ದೇವಳ ಕಾಮಗಾರಿಗೆ ಚುರುಕು: ದೇವ– ದೇವತೆಯರಿಗೆ ಅಂತಿಮ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದೆ. ದೇವಾಲಯದ ರಾಜ ಗೋಪುರ ತಳಭಾಗದ ಸುತ್ತುಗೋಡೆ ಮತ್ತು ದೇವ–ದೇವತೆಯರನ್ನು ಚಾವಣಿಯ ಎತ್ತರಕ್ಕೆ ಏರಿಸುವ ಕಾಯಕ ನಡೆಯುತ್ತಿದೆ.

ಸುಮಾರು ₹2.4 ಕೋಟಿ ವೆಚ್ಚದಲ್ಲಿ ದೇಗುಲವನ್ನು ನಾಲ್ಕು ವರ್ಷಗಳಿಂದ ದುರಸ್ತಿ ಮಾಡಲಾಗುತ್ತಿದೆ. ಎರಡು ವರ್ಷಗಳಿಗೆ ಮುಗಿಯಬೇಕಿದ್ದ ಕೆಲಸ ಇನ್ನೂ ಪೂರೈಸಿಲ್ಲ. ಮಳೆ, ಕಳಪೆ ಕಾಮಗಾರಿ ಮತ್ತು ಮರಳಿನ ಕೊರತೆ ಇವೇ ಮೊದಲಾದ ಕಾರಣಗಳಿಂದ ನಿರ್ಮಾಣ ಕಾರ್ಯ ವಿಳಂಬವಾಗಿ ಸಾಗಿತ್ತು.

ದೊಡ್ಡಜಾತ್ರೆ ಮತ್ತು ಸಂಕ್ರಾಂತಿ ಜಾತ್ರೆಗಳು ನಡೆಯದೇ ಕೆಲವು ವರ್ಷಗಳು ಉರುಳಿವೆ. ಇದರಿಂದ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಇಳಿದಿದೆ. ಸೋಲಿಗರ ಆಚರಣೆ ಮತ್ತು ಸಂಪ್ರದಾಯ ಪಾಲನೆಯೂ ಸ್ಥಗಿತವಾಗಿದೆ. ಆದಷ್ಟು ಬೇಗ ದೇವಾಲಯವನ್ನು ಭಕ್ತರ ಹಾಗೂ ಪ್ರವಾಸಿಗರ ದರ್ಶನಕ್ಕೆ ಮುಕ್ತಗೊಳಿಸಬೇಕು ಎಂದು ದೇವಸ್ಥಾನದ ಮಾಜಿ ಧರ್ಮದರ್ಶಿ ದೊರೆಸ್ವಾಮಿ ಆಗ್ರಹಿಸಿದರು.

ಶೀಘ್ರದಲ್ಲೇ ಭಕ್ತರಿಗೆ ಮುಕ್ತ: ದೇವಾಲಯದ ಚಾವಣಿ ಸುತ್ತಲೂ ದೇವ–ದೇವತೆಯರನ್ನು ಅಲಂಕರಿಸುವ ಕೆಲಸ ಮುಗಿದಿದೆ. ಎಲೆಕ್ಟ್ರಿಕಲ್, ಸುತ್ತುಗೋಡೆ ಕೆಲಸಗಳು ವೇಗವಾಗಿ ಸಾಗುತ್ತಿವೆ. ಪ್ರವೇಶ ದ್ವಾರದ ಶಿಲ್ಪಗಳು ಮತ್ತು ನೆಲಕ್ಕೆ ನುಣುಪು ಕೊಡುವ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. 2021ರ ದೊಡ್ಡಜಾತ್ರೆ ಮತ್ತು ಸಂಕ್ರಾಂತಿ ಉತ್ಸವಗಳನ್ನು ಆಚರಿಸಲು ಅಗತ್ಯ ಸಿದ್ಧತೆ ನಡೆಸಲಾಗಿದೆ. ಹಾಗಾಗಿ, ಕಾಮಗಾರಿಗೆ ವೇಗ ದೊರೆತಿದೆ. ಜನವರಿ ಮಾಸದಲ್ಲಿ ಭಕ್ತರ ದರ್ಶನಕ್ಕೆ ದೇಗುಲ ಮುಕ್ತಗೊಳ್ಳಲಿದೆ ಎಂದು ಶಾಸಕ ಎನ್. ಮಹೇಶ್ ಹೇಳಿದರು.

ಉತ್ತರಾಯಣದಲ್ಲಿ ಉದ್ಘಾಟನೆ?

ಗರ್ಭಗುಡಿ ಮತ್ತು ಪ್ರವೇಶದ್ವಾರದ ಬಾಗಿಲಿನಲ್ಲಿ ವಿಷ್ಣು ಮತ್ತಿತರ ದೈವಗಳನ್ನು ಚಿತ್ರಿಸುವ ಕೆಲಸ 25 ದಿನಗಳಲ್ಲಿ ಮುಗಿಯಲಿದೆ. ಕಲಾವಿದರು ಮಾದರಿಗಳನ್ನು ರಚಿಸಿ, ಗುಡಿಯನ್ನು ಅಲಂಕರಿಸಲಿದ್ದಾರೆ. ಗಾರೆ ಶಿಲ್ಪ ಮತ್ತು ಮರದ ಕೆತ್ತನೆ ಚಿತ್ರಾವಳಿಗಳ ಸಾಂಪ್ರದಾಯಿಕ ಚಿತ್ರಗಳು ಆಕರ್ಷಣೆ ಆಗಲಿವೆ. ಉತ್ತರಾಯಣದಲ್ಲಿ ದೇಗುಲ ಉದ್ಘಾಟಿಸಲು ಸಲಹೆ ನೀಡುವಂತೆ ಆಗಮಿಕರಿಗೆ ಪತ್ರ ಬರೆಯಲಾಗಿದೆ’ ಎಂದು ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ಡಿ.ಸತೀಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.