ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನಾಭಿಪ್ರಾಯ ಬದಿಗಿರಿಸಿ ಪಕ್ಷ ಸಂಘಟಿಸಿ: ಸೋಮಣ್ಣ

ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲ್ಲಲು ಅವಕಾಶ: ಪಕ್ಷದ ಕಾರ್ಯಕಾರಿಣಿಯಲ್ಲಿ ಉಸ್ತುವಾರಿ ಸಚಿವ ಹೇಳಿಕೆ
Last Updated 15 ನವೆಂಬರ್ 2022, 15:40 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲು ಅವಕಾಶ ಇದ್ದು, ಮುಖಂಡರು ಹಾಗೂ ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗಿರಿಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಂಗಳವಾರ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣೆಯ ಹೊಸ್ತಿಲಿನಲ್ಲಿ ಗೊಂದಲಗಳಿದ್ದರೆ ಪಕ್ಷ ಸಂಘಟನೆ ಕಷ್ಟ.ಕಾರ್ಯಕರ್ತರು ಹಾಗೂ ಮುಖಂಡರು ತಮ್ಮಲ್ಲಿರುವ ಭಿನ್ನಾಭಿಪ್ರಾಯ, ಗೊಂದಲ ನಿವಾರಣೆಗೆ ಮುಂದಾಗಬೇಕು. ಪಕ್ಷದ ಹಿರಿಯರ ಮಾರ್ಗದರ್ಶನ ಪಡೆದು, ಮುಂಬರುವ ಚುನಾವಣೆಗೆ ಸಜ್ಜುಗೊಳ್ಳಬೇಕು’ ಎಂದರು.

‘ಸಂಸದ ಶ್ರೀನಿವಾಸಪ್ರಸಾದ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಚುನಾವಣೆಯನ್ನು ಎದುರಿಸೋಣ. ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಬಿಜೆಪಿಯನ್ನು ಸಂಘಟನೆ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಯನ್ನು ತಿಳಿಸಿ. ಮತದಾರದಲ್ಲಿ ಬಿಜೆಪಿ ಪರವಾದ ಒಲವು ಹೊಂದುವಂತೆ ಮಾಡಬೇಕು’ ಎಂದರು.

ಸಂಸದ ಶ್ರೀನಿವಾಸ ಪ್ರಸಾದ್‌ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವನ್ನು ಡಬಲ್ ಎಂಜಿನ್ ಸರ್ಕಾರದ ಸಾಧನೆ ಶೂನ್ಯ ಎಂದು ಹೇಳುತ್ತಿದ್ದ ಕಾಂಗ್ರೆಸ್‌ಗೆ ಈಗಾಗಲೇ ಜನತೆ ಪಾಠ ಕಲಿಸಿದ್ದು, ಮತದಾರರು ಬದಲಾವಣೆ ಕೇಳುತ್ತಿದ್ದಾರೆ. ಅವರು ಬುದ್ಧಿವಂತರಾಗಿದ್ದು, ಸೂಕ್ಷ್ಮ ಮತಿಗಳಾಗಿ ಮತ ಚಲಾವಣೆ ಮಾಡುತ್ತಿದ್ದಾರೆ’ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಸಂಸದರು, ‘ಅವರು ಅವಕಾಶವಾದಿ. ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವಂತಹ ವ್ಯಕ್ತಿಯಾಗಿದ್ದು, ಅಧಿಕಾರಕ್ಕಾಗಿ ಈಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರ ಸಾಧನೆ, ಹೋರಾಟಗಳು ಶೂನ್ಯವಾಗಿದ್ದು, ಗೆದ್ದೆತ್ತಿನ ಬಾಲ ಹಿಡಿಯುವಂತಹ ರಾಜಕಾರಣಿ.ನಾನು ಕಾಂಗ್ರೆಸ್ ತೊರೆಯಲು ಪಿತೂರಿ ನಡೆಸಿದವರಲ್ಲಿ ಇವರೂ ಒಬ್ಬರು. ಹಾಳು ಬಿದ್ದ ಊರಿಗೆ ಉಳಿದವನೇ ಗೌಡ ಎಂಬಂತೆ ಕಾಂಗ್ರೆಸ್‌ ನಾಮಕಾವಸ್ಥೆಗಾಗಿ ಇವರನ್ನು ಅಧ್ಯಕ್ಷರನ್ನಾಗಿ ಮಾಡಿದೆ’ ಎಂದು ಟೀಕಿಸಿದರು.

‘ಮುಂಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ, ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷದ ಸಂಘಟನೆಗೆ ದುಡಿಯಬೇಕು. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು’ ಎಂದು ಹೇಳಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ,ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಶಾಸಕ ಎನ್.ಮಹೇಶ್, ಕಾಡಾ ಅಧ್ಯಕ್ಷ ನಿಜಗುಣರಾಜು, ನಗರಸಭಾ ಅಧ್ಯಕ್ಷೆ ಆಶಾ, ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ ಗಿರೀಶ್, ಮುಖಂಡರಾದ ಜಿ.ಎನ್.ನಂಜುಂಡಸ್ವಾಮಿ, ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಎಂ.ರಾಮಚಂದ್ರ, ಮೈ.ವಿ.ರವಿಶಂಕರ್, ನೂರೊಂದುಶೆಟ್ಟಿ ಇತರರು ಇದ್ದರು.

ಎರಡು ನಿರ್ಣಯ: ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷವು ರಾಜ್ಯ ಸರ್ಕಾರವನ್ನು ಒತ್ತಾಯಿಸುವ ಎರಡು ನಿರ್ಣಯಗಳನ್ನು ಕೈಗೊಂಡಿದೆ.

1. ಬಿಜೆಪಿ ಸರ್ಕಾರ ಆರಂಭಿಸಿದ್ದ ಕೆರೆ ತುಂಬಿಸುವ ಯೋಜನೆಯಿಂದ ಇಡೀ ರೈತಾಪಿ ವರ್ಗಕ್ಕೆ ಆಗಿರುವ ಅನುಕೂಲಗಳು ಮತ್ತು ಆರ್ಥಿಕ ಬೆಳವಣಿಗೆಯನ್ನು ಮನಗಂಡು ಜಿಲ್ಲೆಯ ಉಳಿದ ಎಲ್ಲ ಕೆರೆಗಳಿಗೂ ನದಿ ಮೂಲದಿಂದ ನೀರು ತುಂಬಿಸುವ ಕಾರ್ಯವನ್ನು 2ನೇ ಹಂತದಲ್ಲಿ ಅತ್ಯಂತ ಜರೂರಾಗಿ ಕೈಗೆತ್ತುಕೊಂಡು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು.

2. ಚಾಮರಾಜನಗರದಲ್ಲಿ ವಾಸವಿರುವ ಉಪ್ಪಾರ, ನಾಯಕ ಮತ್ತು ದಲಿತರು, ಇತರ ಹಿಂದುಳಿದ ವರ್ಗಗಳ ಸಮುದಾಯದವರಿಗೆ ಇದುವರೆವಿಗೂ ವಸತಿಯನ್ನು ಕಲ್ಪಸಿಲ್ಲ. ಅತಿಸಣ್ಣ ಮನೆಯಲ್ಲಿ 4 ರಿಂದ 5 ಕುಟುಂಬಗಳು ಕನಿಷ್ಠ ಗೂಡಿನಂತಹ ಮನೆಗಳಲ್ಲಿ ವಾಸಿಸುತ್ತಿದ್ದು, ಅತ್ಯಂತ ಕನಿಷ್ಠ ಬದುಕನ್ನು ನಡೆಸುತ್ತಿರುವ ಈ ಜನಾಂಗಗಳಿಗೆ ಪಟ್ಟಣ ಸುತ್ತ ಮುತ್ತಲಿರುವ ಭೂಮಿಯಲ್ಲಿ ವಸತಿಗಳನ್ನು ನಿರ್ಮಿಸಿ ಅವರಿಗೆ ಹಂಚಿಕೆ ಮಾಡಬೇಕು.

‘ಡಿ.1 ಅಥವಾ 2ರಂದು ಸಿ.ಎಂ ಜಿಲ್ಲೆಗೆ’

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿ.1 ಅಥವಾ 2ರಂದು ಅವರು ಬರಲಿದ್ದಾರೆ’ ಎಂದು ಸಚಿವ ಸೋಮಣ್ಣ ಹೇಳಿದರು.

‘ಮಹದೇಶ್ವರ ಬೆಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಲೆ ಮಹದೇಶ್ವರ ಸ್ವಾಮಿ ಪ್ರತಿಮೆಯನ್ನು ಉದ್ಘಾಟಿಸಿ, ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮಾಡಲು ಬರಲಿದ್ದಾರೆ. ಚಾಮರಾಜನಗರಕ್ಕೂ ಬರಲಿದ್ದಾರೆ’ ಎಂದರು.

‘ಪಕ್ಷ ಸಂಘಟಕರಿಗೆ ಟಿಕೆಟ್‌ ನೀಡಬೇಕು’

ಚಾಮರಾಜನಗರ ಜಿಲ್ಲೆಯಲ್ಲಿ ಹೊರಗಿನಿಂದ ಬಂದವರಿಗೆ ಚುನಾವಣಾ ಟಿಕೆಟ್‌ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಸಂಸದ ವಿ.ಶ್ರೀನಿವಾಸ ‌ಪ್ರಸಾದ್‌, ಪಕ್ಷ ಸಂಘಟನೆ ಮಾಡಿದವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಹಗಲು ರಾತ್ರಿಯಾಗಿ ಯಾರು ಕೆಲಸ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ. ಹೋರಾಟ ಮಾಡಿರುವವರು, ಸಂಘಟನೆ ಮಾಡಿರುವವರನ್ನು ಆಯ್ಕೆ ಮಾಡಬೇಕು. ನಮ್ಮ ಅಭಿಪ್ರಾಯ ಪರಿಗಣಿಸದಿದ್ದರೆ ಅವರು ಅನುಭವಿಸುತ್ತಾರೆ. ಕಾರ್ಯಕರ್ತರೆಲ್ಲ ಒಂದಾಗಿ ಹೈಕಮಾಂಡ್‌ಗೆ ತಿಳಿಸಿ ಎಂದು ಹೇಳಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT