ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಅಧ್ಯಕ್ಷ ಬದಲು: ಬಿಜೆಪಿಯಲ್ಲಿ ಅಚ್ಚರಿ

ಅನಿರೀಕ್ಷಿತ ಬೆಳವಣಿಗೆ; ಮುಖಂಡರ ಹೇಳಿಕೆ, ಕಾರ್ಯಕರ್ತರಲ್ಲಿ ಗೊಂದಲ
Last Updated 7 ಫೆಬ್ರುವರಿ 2023, 5:36 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಆರ್‌.ಸುಂದರ್‌ ಅವರ ಜಾಗಕ್ಕೆ ದಿಢೀರ್‌ ಆಗಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಜಿ.ನಾರಾಯಣ ಪ್ರಸಾದ್‌ ಅವರನ್ನು ನೇಮಕ ಮಾಡಿರುವುದು ಬಿಜೆಪಿ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

ಈ ಬದಲಾವಣೆಗೆ ಏನು ಕಾರಣ ಎಂಬುದು ಯಾರಿಗೂ ಗೊತ್ತಿಲ್ಲ. ಭಾನುವಾರ ರಾತ್ರಿ 8 ಗಂಟೆಯವರೆಗೂ ಇದರ ಬಗ್ಗೆ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಮಾಹಿತಿ ಇರಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆರ್‌.ಸುಂದರ್‌ ಅಧ್ಯಕ್ಷರಾಗಿ ಮೂರು ವರ್ಷಗಳಾಗಿವೆ. ಹಾಗಾಗಿ, ವರಿಷ್ಠರು ಬದಲಾಯಿಸಿದ್ದಾರೆ ಎಂದು ಪದಾಧಿಕಾರಿಗಳು, ಮುಖಂಡರು, ಶಾಸಕರು ಸಮಜಾಯಿಷಿ ನೀಡುತ್ತಿದ್ದಾರೆ.

‘ಚುನಾವಣೆಗೆ ಇನ್ನು ಒಂದೆರಡು ತಿಂಗಳು ಇರುವಾಗ ಜಿಲ್ಲಾಮಟ್ಟದಲ್ಲಿ ನಾಯಕತ್ವ ಬದಲಾವಣೆ ಮಾಡುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದೆಯೇ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ. ‘ಪಕ್ಷದ ವರಿಷ್ಠರು ಈ ನಿರ್ಧಾರ ಕೈಗೊಂಡಿದ್ದಾರೆ. ಅದನ್ನು ಎಲ್ಲರೂ ಒಪ್ಪಲೇ ಬೇಕು’ ಎಂದು ಹೇಳುತ್ತಿದ್ದಾರೆ.

ಕಾರ್ಯಕರ್ತರಲ್ಲಿ ಗೊಂದಲ: 2020ರ ಜನವರಿ 28ರಂದು ಆರ್‌.ಸುಂದರ್‌ ಅವರು ಎರಡನೇ ಬಾರಿಗೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಜಿಲ್ಲೆಯಲ್ಲಿ ಆರಂಭದಿಂದಲೂ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಅವರನ್ನು ಚುನಾವಣೆ ಹೊತ್ತಿನಲ್ಲಿ ಏಕಾಏಕಿ ಹುದ್ದೆಯಿಂದ ಇಳಿಸಿರುವುದು ಬಹುತೇಕ ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡಿದೆ.

‘ಸುಂದರ್‌ ನಾಯಕ ಸಮುದಾಯಕ್ಕೆ ಸೇರಿದವರು. ಚಾಮರಾಜನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ನಾಯಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಲವು ಸಮಯದಿಂದ ಅವರು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಪಕ್ಷದ ಈ ನಿರ್ಧಾರ ಸಹಜವಾಗಿಯೇ ಅವರಲ್ಲಿ ಅಸಮಾಧಾನ ಉಂಟುಮಾಡಿದೆ. ಟಿಕೆಟ್‌ ಹಂಚಿಕೆ ಮಾಡುವಾಗ ಸಮುದಾಯದವರಿಗೆ ನೀಡದಿದ್ದರೆ ಅವರ ಅತೃಪ್ತಿ ಪಕ್ಷಕ್ಕೆ ಮುಳುವಾಗಬಹುದು’ ಎಂಬ ಆತಂಕವನ್ನು ಮುಖಂಡರು ಹಾಗೂ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.

‘ಅಧ್ಯಕ್ಷರ ಬದಲಾವಣೆಗೆ ಕಾರಣ ಗೊತ್ತಿಲ್ಲ. ಜಿಲ್ಲಾಮಟ್ಟದಲ್ಲಿ ಅಂತಹ ಯಾವುದೇ ಚರ್ಚೆಗಳು ನಡೆದಿರಲಿಲ್ಲ. ಚುನಾವಣೆಯ ಹೊಸ್ತಿಲಲ್ಲಿ ಇದು ಅಗತ್ಯವಿರಲಿಲ್ಲ. ಇದು ಕಾರ್ಯಕರ್ತರಲ್ಲಿ ಅನಗತ್ಯ ಗೊಂದಲ ಉಂಟುಮಾಡಲಿದೆ’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾರಾಯಣ ಪ್ರಸಾದ್‌ ಅವರು ಹಲವು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ಇದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅವರು ಸೂಕ್ತ ವ್ಯಕ್ತಿಯೇ ಆದರೆ, ಚುನಾವಣೆ ಹೊಸ್ತಿಲಲ್ಲಿ ಹೊಸ ಅಧ್ಯಕ್ಷರ ನೇಮಕಾತಿ ರಾಜಕೀಯ ವಲಯದಲ್ಲಿ ಬೇರೆಯದೇ ಸಂದೇಶ ಕೊಡುತ್ತದೆ’ ಎಂದು ಮತ್ತೊಬ್ಬ ಮುಖಂಡರು ಹೇಳಿದ್ದಾರೆ.

‘ವಸತಿ ಯೋಜನೆಯಲ್ಲಿ ಸಬ್ಸಿಡಿ ಪಡೆದು ಮನೆ ನಿರ್ಮಿಸಿದ್ದಾರೆ ಎಂಬ ಆರೋಪ ಬಿಟ್ಟರೆ ಸುಂದರ್‌ ವಿರುದ್ಧ ಪಕ್ಷದ ಒಳಗಡೆಯಾಗಲಿ, ಹೊರಗಡೆಯಾಗಲಿ ಗುರುತರವಾದ ಆರೋಪಗಳು ಕೇಳಿ ಬಂದಿಲ್ಲ. ಹೀಗಿರುವಾಗ ಅವರನ್ನು ಬದಲಿಸಿದ್ದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಆದರೆ, ಪಕ್ಷದ ವರಿಷ್ಠರು ಎಲ್ಲದನ್ನೂ ಗಮನಿಸುತ್ತಿರುತ್ತಾರೆ. ಪಕ್ಷದ ಸ್ಥಿತಿಗತಿ, ವ್ಯವಹಾರಗಳ ಬಗ್ಗೆ ವರದಿಗಳನ್ನು ಪಡೆಯುತ್ತಿರುತ್ತಾರೆ. ವರಿಷ್ಠರೇ ಅಧ್ಯಕ್ಷರ ಬದಲಾವಣೆಗೆ ತೀರ್ಮಾನ ಕೈಗೊಂಡಿದ್ದಾರೆ. ಸುಂದರ್‌ ಅವರಿಗೆ ಬೇರೆ ಅವಕಾಶಗಳನ್ನು ಪಕ್ಷ ನೀಡಬಹುದು’ ಎಂದು ಮತ್ತೊಬ್ಬ ಮುಖಂಡ ಹೇಳಿದರು.

ಗುರುತರ ಜವಾಬ್ದಾರಿ: ನಾರಾಯಣ ಪ್ರಸಾದ್‌

ಎರಡು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಹೊಸ ಜಿಲ್ಲಾ ಅಧ್ಯಕ್ಷ ಜಿ.ನಾರಾಯಣ ಪ್ರಸಾದ್‌ ಅವರು, ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಎರಡು ಬಾರಿ ಜಿಲ್ಲಾ ಖಜಾಂಚಿ ಹಾಗೂ ಎರಡು ಬಾರಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲಾ ಸಂಚಾಲಕರಾಗಿದ್ದರು.

ತಮ್ಮ ನೇಮಕಾತಿ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ನನಗೂ ಇದು ಅನಿರೀಕ್ಷಿತ. ಚುನಾವಣೆ ಹತ್ತಿರದಲ್ಲಿರುವಾಗಲೇ ನನಗೆ ನೀಡಿರುವ ದೊಡ್ಡ ಜವಾಬ್ದಾರಿ. ನಾನು ಈಗಾಗಲೇ ಪಕ್ಷದ ವಿವಿಧ ಹುದ್ದೆಯಲ್ಲಿ ಇದ್ದುದರಿಂದ ಹಾಗೂ ಸಂಘಟನೆಯಲ್ಲಿ ತೊಡಗಿರುವುದರಿಂದ ಜಿಲ್ಲೆಯ ಪಕ್ಷದ ಚಿತ್ರಣ, ಸ್ಥಿತಿಗತಿಗಳು ಎಲ್ಲ ಗೊತ್ತಿವೆ. ಹುದ್ದೆಯಷ್ಟೇ ಬದಲಾಗಿದೆ. ಎಲ್ಲ ಮುಖಂಡರ ಸಹಕಾರ ಪಡೆದು ಜಿಲ್ಲೆಯಲ್ಲಿ ಪಕ್ಷವನ್ನು ಮುನ್ನಡೆಸುವೆ’ ಎಂದರು.

‘ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುವುದು ನಮ್ಮ ಗುರಿ. ಟಿಕೆಟ್‌ ಅಕಾಂಕ್ಷಿಗಳನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು, ಅವರಿಗೆ ಎಲ್ಲವನ್ನೂ ಮನವರಿಕೆ ಮಾಡಿಕೊಡುವೆ. ಪಕ್ಷದ ಮುಖಂಡರು ಕಾರ್ಯಕರ್ತರ ಸಹಕಾರ ಪಡೆದು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವೆ’ ಎಂದು ನಾರಾಯಣ ಪ್ರಸಾದ್‌ ಹೇಳಿದರು.

ಕೆಲಸ ತೃಪ್ತಿ ತಂದಿದೆ: ಸುಂದರ್‌

‘ನಾನು ಅಧ್ಯಕ್ಷನಾಗಿ ಮೂರು ವರ್ಷಗಳಾಗಿವೆ. ಮೂರು ವರ್ಷಗಳ ನಂತರ ಪಕ್ಷ ಹೊಸಬರಿಗೆ ಅವಕಾಶ ನೀಡುತ್ತದೆ. ವರಿಷ್ಠರು ಹೊಸಬರನ್ನು ನೇಮಕ ಮಾಡಿದ್ದಾರೆ. ನಾನು ಮೂರು ವರ್ಷಗಳಲ್ಲಿ ಮಾಡಿದ ಕೆಲಸ ತೃಪ್ತಿ ನೀಡಿದೆ. ರಾಜ್ಯ ಪದಾಧಿಕಾರಿಗಳು, ರಾಷ್ಟ್ರೀಯ ಪದಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮುಖಂಡರು ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ’ ಎಂದು ನಿಕಟಪೂರ್ವ ಅಧ್ಯಕ್ಷ ಆರ್‌.ಸುಂದರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಚುನಾವಣೆ ಹೊಸ್ತಿಲಿನಲ್ಲಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಿದ್ದು ಸರಿಯೇ ಎಂದು ಕೇಳಿದ್ದಕ್ಕೆ, ‘ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಎರಡು ಬಾರಿ ಜಿಲ್ಲಾ ಘಟಕದ ಅಧ್ಯಕ್ಷನನ್ನಾಗಿ ಮಾಡಿದೆ. ಎಲ್ಲರ ಸಹಕಾರದಿಂದ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಮುಂದೆಯೂ ಬೇರೆ ರೀತಿಯಲ್ಲಿ ಅವಕಾಶ ಕೊಡಬಹುದು’ ಎಂದು ಹೇಳಿದರು.

--

ಹೊಸ ಅಧ್ಯಕ್ಷರ ನೇಮಕದ ಬಗ್ಗೆ ನಮಗೂ ನಿರೀಕ್ಷೆ ಇರಲಿಲ್ಲ. ಸುಂದರ್‌ ಅವರು ಅಧ್ಯಕ್ಷರಾಗಿ ಮೂರು ವರ್ಷಗಳಾಗಿತ್ತು. ಇದು ಪಕ್ಷದ ನಿರ್ಧಾರ. ಅದನ್ನು ಎಲ್ಲರೂ ಒಪ್ಪಬೇಕು
ಎನ್‌.ಮಹೇಶ್‌, ಕೊಳ್ಳೇಗಾಲ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT