ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಪರಿಷತ್‌ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನಗಳಲ್ಲಿ ಗೆಲುವು: ಈಶ್ವರಪ್ಪ

ಬಿಜೆಪಿ ಜನಸ್ವರಾಜ್‌ ಸಮಾವೇಶ, ಸಿದ್ದರಾಮಯ್ಯ ವಿರುದ್ಧ ಶೋಭಾ ಕರಂದ್ಲಾಜೆ, ಅಶೋಕ ವಾಗ್ದಾಳಿ
Last Updated 20 ನವೆಂಬರ್ 2021, 14:11 IST
ಅಕ್ಷರ ಗಾತ್ರ

ಚಾಮರಾಜನಗರ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ 25 ಕ್ಷೇತ್ರಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯು ಕನಿಷ್ಠ 15 ಸ್ಥಾನಗಳನ್ನು ಗೆಲ್ಲಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಶನಿವಾರ ಹೇಳಿದರು.

ನಗರದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಜನಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕರ್ನಾಟಕದ ಮುಂದಿನ ರಾಜಕೀಯ, ಚುನಾವಣೆ ಹೇಗಿರಲಿದೆ ಎಂಬುದನ್ನು ವಿಧಾನಪರಿಷತ್‌ ಚುನಾವಣೆ ತೀರ್ಮಾನಿಸಲಿದೆ. ನಮಗೆ ವಿಧಾನಸಭೆಯಲ್ಲಿ ಬಹುಮತ ಇದೆ. ಆದರೆ, ವಿಧಾನಪರಿಷತ್ತಿನಲ್ಲಿ ಬಹುಮತ ಇಲ್ಲ. ಇದೇ ಕಾರಣಕ್ಕೆ ಜಾನುವಾರು ಹತ್ಯೆ ಪ್ರತಿಬಂಧಕ ಮಸೂದೆಗೆ ವಿಧಾನಪರಿಷತ್ತಿನಲ್ಲಿ ಅಡಚಣೆಯಾಯಿತು’ ಎಂದರು.

‘ಚಾಮರಾಜನಗರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಇಲ್ಲಿ 2,159 ಗ್ರಾಮ ಪಂಚಾಯಿತಿ ಸದಸ್ಯರಿದ್ದು, ಕಾಂಗ್ರೆಸ್‌ ಬೆಂಬಲಿತರು 985 ಮಂದಿ ಮಾತ್ರ ಗೆದ್ದಿದ್ದಾರೆ. ಪಕ್ಷ ಬೆಂಬಲಿತರು 1,926 ಮಂದಿ ಜಯಗಳಿಸಿದ್ದಾರೆ. ಎಲ್ಲ ಪ್ರತಿನಿಧಿಗಳು ಪಕ್ಷದ ಅಭ್ಯರ್ಥಿ ರಘು ಕೌಟಿಲ್ಯ ಅವರಿಗೆ ಮತ ಹಾಕಿ, ಮೇಲ್ಮನೆಗೆ ಆರಿಸಿ ಕಳುಹಿಸಬೇಕು. ಕಳೆದ ಬಾರಿಯೇ ಅವರು ಗೆಲ್ಲಬೇಕಿತ್ತು. ಆದರೆ, ಕಾಂಗ್ರೆಸ್‌ ಜೆಡಿಎಸ್‌ ಒಳ ಒಪ್ಪಂದದಿಂದ ಸೋಲಾಯಿತು’ ಎಂದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ ಅವರು, ‘ಮೈಸೂರಿನಲ್ಲಿ ವಿಧಾನಪರಿಷತ್‌ ಚುನಾವಣೆಗೆ ತಮಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತರು ಮನವಿ ಮಾಡಿದಾಗ, ಚಾಮುಂಡೇಶ್ವರಿಯಲ್ಲಿ ತನ್ನನ್ನು ಸೋಲಿಸಿ, ಈಗ ಟಿಕೆಟ್‌ ಕೊಡಿ ಎಂದು ಕೇಳಲು ನಾಕಿಕೆ ಆಗುವುದಿಲ್ಲವೇ ಎಂದು ಸಿದ್ದರಾಮಯ್ಯ ಅವರು ಕಾರ್ಯಕರ್ತರಿಗೆ ಬೈದಿದ್ದು ಮಾಧ್ಯಮದಲ್ಲಿ ವರದಿಯಾಗಿದೆ. ಚಾಮುಂಡೇಶ್ವರಿಯಲ್ಲಿ ಸೋತು ಅವರು ಬಾದಾಮಿಗೆ ಹೋಗಿದ್ದರು. ಈಗ ಅಲ್ಲಿನ ಜನರು ಕೂಡ ಅವರನ್ನು ಸೋಲಿಸಲು ಸಿದ್ಧರಾಗಿದ್ದಾರೆ’ ಎಂದರು.

‘ಕಾಂಗ್ರೆಸ್‌ನಲ್ಲಿದ್ದ ಎಸ್‌.ಟಿ.ಸೋಮಶೇಖರ್‌ ಸೇರಿದಂತೆ 17 ಮಂದಿ ಅಲ್ಲಿಗೆ ರಾಜೀನಾಮೆ ಕೊಟ್ಟು ಪಕ್ಷ ಸೇರಿದ್ದರಿಂದ ಈ ಸರ್ಕಾರ ರಚನೆಯಾಗಿದೆ. ನಮ್ಮ ಋಣ ಸೋಮಶೇಖರ್ ಹಾಗೂ ತಂಡದ ಮೇಲೆ ಇದೆ. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ನಡೆದ ಸಂದರ್ಭದಲ್ಲಿ ಎಲ್ಲರೂ ಸೋಲುತ್ತಾರೆ ಎಂದು ಸಿದ್ದರಾಮಯ್ಯ ಅವರು ಶಾಪ ಹಾಕಿ ಭವಿಷ್ಯ ನುಡಿದಿದ್ದರು. ಆದರೆ ಎಲ್ಲರೂ ಗೆದ್ದು ಅವರೇ ಸೋತರು’ ಎಂದರು.

ಅಭಿವೃದ್ದಿಯೇ ಪರ್ವ:ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ‘ಕೇಂದ್ರದಲ್ಲಿ ಹಿಂದೆ ಪ್ರಧಾನಿಯಾಗಿದ್ದ ವಾಜಪೇಯಿ, ಈಗ ಪ್ರಧಾನಿಯಾಗಿರುವ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ, ಈಗ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಎಲ್ಲರೂ ಅಭಿವೃದ್ಧಿ ಪರವಾಗಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ಗ್ರಾಮ ಪಂಚಾಯಿತಿಗಳಿಗೆ ಏನೂ ಅನುದಾನ ಬರುತ್ತಿರಲಿಲ್ಲ. ವಾಜಪೇಯಿ ಅವರಿದ್ದಾಗ ಗ್ರಾಮ ಸಡಕ್‌ ಯೋಜನೆ, ಸರ್ವ ಶಿಕ್ಷ ಅಭಿಯಾನದ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಕೊಟ್ಟರು. ಪ್ರಧಾನಿ ಮೋದಿ ಅವರು 13ನೇ ಹಣಕಾಸು ಆಯೋಗ ಅನುದಾನವನ್ನು ದೆಹಲಿಯಿಂದ ನೇರವಾಗಿ ಪಂಚಾಯಿತಿಗಳಿಗೆ ತಲುಪಿಸಿದ್ದಾರೆ. ಇನ್ನು ಮುಂದೆಯೂ ಹೆಚ್ಚು ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದೆ’ ಎಂದರು.

‘ರಾಜ್ಯದಲ್ಲಿ ನಡೆಯಲಿರುವ ವಿಧಾನಪರಿಷತ್‌ ಚುನಾವಣೆ, ಮಿನಿ ಚುನಾವಣಾ ಸಮರ. ನಮಗೆ ವಿಧಾನಸಭೆಯಲ್ಲಿ ಬಹುಮತ ಇದೆ. ವಿಧಾನಪರಿಷತ್ತಿನಲ್ಲಿ ಇಲ್ಲ. ಹೀಗಾಗಿ, ವಿವಿಧ ಕಾನೂನುಗಳನ್ನು ಜಾರಿಗೆ ತರಲು ತೊಂದರೆಯಾಗುತ್ತಿದೆ. ಅಲ್ಲಿಯೂ ನಮಗೆ ಬಹುಮತ ಸಿಗಬೇಕಾಗಿದೆ. ಇದಕ್ಕಾಗಿ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿರುವ ಪಕ್ಷದ ಕಾರ್ಯಕರ್ತರು ರಘು ಕೌಟಿಲ್ಯ ಅವರನ್ನು ಬೆಂಬಲಿಸಬೇಕು’ ಎಂದರು.

ಕಂದಾಯ ಸಚಿವ ಆರ್‌.ಅಶೋಕ ಅವರು ಮಾತನಾಡಿ,‘ಕಾಂಗ್ರೆಸ್ ರಾಜ್ಯದಲ್ಲಿ ಜಾತಿ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಅವರು ಟೋಪಿ ಹಾಕಿಕೊಂಡು ಟಿಪ್ಪು ಜಯಂತಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದರು. ದಲಿತರು, ಹಿಂದುಳಿದ ಜನಾಂಗದಲ್ಲಿ ಬಡವರಿಲ್ಲವೇ? ಸಿದ್ದರಾಮಯ್ಯ ಅವರು ಎಲ್ಲ ಭಾಗ್ಯಗಳನ್ನು ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಆದರೆ, 124 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್‌ ಅನ್ನು ಕಳೆದ ಚುನಾವಣೆಯಲ್ಲಿ 78 ಸೀಟುಗಳಿಗೆ ಜನರು ಯಾಕೆ ಇಳಿಸಿದರು’ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್,ಅಭ್ಯರ್ಥಿ ರಘುಕೌಟಿಲ್ಯ,ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ, ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಆರ್.ಸುಂದರ್ ಮಾತನಾಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಶಂಕರಪ್ಪ, ರಾಜ್ಯ ಕಾರ್ಯದರ್ಶಿ ವಿನಯ್ ಬಿದರಿ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಮುಖಂಡರಾದ ಜಿ.ಎನ್.ನಂಜುಂಡಸ್ವಾಮಿ, ಪ್ರೊ.ಕೆ.ಆರ್.ಮಲ್ಲಿಕಾರ್ಜನಪ್ಪ, ನಿಜಗುಣರಾಜು, ರಾಜ್ಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಚುಡಾ ಅಧ್ಯಕ್ಷ ಶಾಂತಮೂರ್ತಿ, ಡಾ.ಎ.ಆರ್.ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಗಲಶಿವಕುಮಾರ್, ನಾಗಶ್ರೀ, ನಾರಾಯಣಪ್ರಸಾದ್, ತಾಲ್ಲೂಕು ಅಧ್ಯಕ್ಷ ಬೇಡರಪುರ ಬಸವಣ್ಣ, ನಗರ ಅಧ್ಯಕ್ಷ ರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT