ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಿನಿ 2ನೇ ಹಂತಕ್ಕಾಗಿ ಪಾದಯಾತ್ರೆ ಮಾಡಲಿ: ಬಿಜೆಪಿ ಮುಖಂಡ ಮಲ್ಲೇಶ್‌ ಸವಾಲು

ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ನಾಯಕರಿಗೆ ಬಿಜೆಪಿ ಮುಖಂಡ ಮಲ್ಲೇಶ್‌ ಸವಾಲು
Last Updated 20 ಫೆಬ್ರುವರಿ 2022, 16:42 IST
ಅಕ್ಷರ ಗಾತ್ರ

ಚಾಮರಾಜನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್‌ ಮತ್ತೆ ಪಾದಯಾತ್ರೆ ಮುಂದುವರಿಸಲು ನಿರ್ಧರಿಸಿರುವುದನ್ನು ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್‌ ಭಾನುವಾರ ಟೀಕಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ, ಶಾಸಕ ಸಿ.ಪುಟ್ಟರಂಗಶೆಟ್ಟಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡುವ ಬದಲು ಜಿಲ್ಲೆಯ ವಿವಿಧ ಭಾಗಗಳಿಗೆ ನೀರುಣಿಸುವ ಕಬಿನಿ ಎರಡನೇ ಹಂತದ ನೀರಾವರಿ ಯೋಜನೆಗಾಗಿ ಪಾದಯಾತ್ರೆ ನಡೆಸಲಿ’ ಎಂದು ಸವಾಲು ಹಾಕಿದರು.

‘ಸಿದ್ದರಾಮಯ್ಯ ವಕೀಲರು. ಮೇಕೆ ದಾಟು ಯೋಜನೆ ವಿಚಾರ ಇದೀಗ ಸುಪ್ರೀಂಕೋರ್ಟ್‌ನಲ್ಲಿದೆ. ವಿಷಯ ನ್ಯಾಯಾಲಯದಲ್ಲಿರುವಾಗ ಯೋಜನೆ ಅನುಷ್ಠಾನ ಸಾಧ್ಯವೇ ಎಂಬುದು ಸಿದ್ದರಾಮಯ್ಯಗೆ ಗೊತ್ತಿ ಲ್ಲವೇ? ಎಲ್ಲವನ್ನೂ ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ’ ಎಂದು ದೂರಿದರು.

‘ನೀರಿನ ಕೊರತೆಯಿಂದಾಗಿ ಕೃಷಿ ಮಾಡಲು ಸಾಧ್ಯವಾಗದೆ ಜಿಲ್ಲೆಯ ಯುವಕರು ಬೆಂಗಳೂರಿನ ಹೋಟೆಲ್‌ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಬಿನಿ 2ನೇ ಹಂತದ ಯೋಜನೆ ಜಾರಿಗೊಳಿ ಸುವುದರಿಂದ ಕೃಷಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆಗೆ ಸರ್ಕಾರ ₹ 11 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಕಬಿನಿಗೆ ಅಷ್ಟೆಲ್ಲ ದುಡ್ಡು ಬೇಡ. ಸಿದ್ದರಾಮಯ್ಯ ಮುಖ್ಯ ಮಂತ್ರಿ ಯಾಗಿದ್ದಾಗ ಈ ಯೋಜನೆಗೆ ಹಣ ನೀಡಬಹುದಿತ್ತಲ್ಲವೇ? ಸಂಸದರಾಗಿದ್ದ ಧ್ರುವನಾರಾಯಣ, ಶಾಸಕ ಪುಟ್ಟರಂಗ ಶೆಟ್ಟಿ ಅವರಿಗೆ ನೆನಪಾಗಲಿಲ್ಲವೇ? ಈ ಭಾಗದ ಜನರ ಮತ ಪಡೆದ ಈ ಮೂವರೂ ಯೋಜನೆಯನ್ನು ಮರೆತು ಜಿಲ್ಲೆಗೆ ದ್ರೋಹ ಮಾಡಿದ್ದಾರೆ’ ಎಂದರು.

‘ಪಕ್ಷಾತೀತವಾಗಿ ಒಂದೆರಡು ದಿನದಲ್ಲಿ ಬೆಂಗಳೂರಿಗೆ ತೆರಳಿ ಈ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಕೊಡಿ ಎಂದು ಮುಖ್ಯಮಂತ್ರಿ ಬೊಮ್ಮಾಯಿಗೆ ಮನವಿ ಮಾಡ ಲಾಗುವುದು’ ಎಂದು ಮಲ್ಲೇಶ್‌ ಹೇಳಿದರು.

ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲೇಶ್‌, ‘ಪುಟ್ಟರಂಗಶೆಟ್ಟಿ ಜನರ ಕೆಲಸ ಮಾಡು ವುದಕ್ಕೆ ಬದಲಾಗಿ ಗುಂಬಳ್ಳಿ ಬಳಿ ₹ 10 ಕೋಟಿಯ ಕರಿಕಲ್ಲು ಕ್ವಾರಿ ನಡೆಸು ತ್ತಿದ್ದಾರೆ. ಈಗ ತೆರಕಣಾಂಬಿಯ ಬಳಿ ₹ 15 ಕೋಟಿ ನೀಡಿ ಮತ್ತೊಂದು ಕರಿಕಲ್ಲು ಕ್ವಾರಿ ಖರೀದಿಸಿದ್ದಾರೆ. ಹಣ ಲೂಟಿ ಮಾಡುತ್ತಿರುವ ಶಾಸಕರು ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ.ಅಪಘಾತದಲ್ಲಿ ನಿಧನರಾದವರ ಬಡ ಕುಟುಂಬಗಳಿಗೆ ಕನಿಷ್ಠ ಸಾಂತ್ವನ ಹೇಳಲಿಲ್ಲ’ ಎಂದು ದೂರಿದರು.

ಮುಖಂಡರಾದ ರಾಮಸಮುದ್ರದ ಬಸವರಾಜ್, ಪ್ರಸನ್ನ, ನಲ್ಲೂರ ಪರಮೇಶ್ವರ್, ಸತೀಶ್ ಇದ್ದರು.

‘ಪಕ್ಷ ಟಿಕೆಟ್‌ ಕೊಟ್ಟರೆ ಬೇಡ ಎನ್ನಲಾರೆ’

ಮುಂದಿನ ಚುನಾವಣೆಯಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಬಯಸುತ್ತಿದ್ದೀರಾ? ಎಂದು ಕೇಳಿದ್ದಕ್ಕೆ ಉತ್ತರಿಸಿದ ಮಲ್ಲೇಶ್‌, ‘ನಾನು ಟಿಕೆಟ್‌ ಆಕಾಂಕ್ಷಿಯಲ್ಲ. ಆದರೆ, ಪಕ್ಷವು ಗುರುತಿಸಿ ಟಿಕೆಟ್‌ ಕೊಟ್ಟರೆ ಬೇಡ ಎನ್ನುವುದಿಲ್ಲ. ಖ‌ಂಡಿತವಾಗಿಯೂ ಸ್ಪರ್ಧಿಸುವೆ’ ಎಂದರು.

‘ಪಕ್ಷದಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ. ಅವರೆಲ್ಲ ಮುಂದೆ ಇರಲಿ. ನಾನು ಕೊನೆಯವನಾಗಿರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT