ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಪಂಚಾಯಿತಿ ಸೂಪರ್‌ಸೀಡ್‌ಗೆ ಆಗ್ರಹ

ಅಧ್ಯಕ್ಷೆ ಕಾಂಗ್ರೆಸ್‌ ಸದಸ್ಯರ ನಡುವಿನ ಬೈದಾಟಕ್ಕೆ ಖಂಡನೆ
Last Updated 17 ಫೆಬ್ರುವರಿ 2020, 4:46 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಹಾಗೂ ಕಾಂಗ್ರೆಸ್‌ ಸದಸ್ಯರು ಪರಸ್ಪರ ಬೈದಾಡಿಕೊಂಡಿರುವುದನ್ನು ಖಂಡಿಸಿರುವ ಬಿಜೆಪಿ ಎಸ್‌ಟಿ ಮೋರ್ಚಾದ ಕಾರ್ಯದರ್ಶಿ ಕೆಲ್ಲಂಬಳ್ಳಿ ಸೋಮನಾಯಕ ಅವರು, ಜಿಲ್ಲಾ ಪಂಚಾಯಿತಿಯನ್ನು ಸೂಪರ್‌ ಸೀಡ್‌ ಮಾಡಬೇಕು ಎಂದು ಒತ್ತಾಯಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧ್ಯಕ್ಷರು ಹಾಗೂ ಸದಸ್ಯರು ಸಾರ್ವಜನಿಕ ಪರಸ್ಪರ ಬೈದಾಡಿಕೊಂಡು ಜಿಲ್ಲಾಡಳಿತ ಭವನದ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ. ಜಿಲ್ಲಾಧಿಕಾರಿ ಅವರು ತಕ್ಷಣವೇ ಈ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿ, ಜಿಲ್ಲಾ ಪಂಚಾಯಿತಿಯನ್ನು ಸೂಪರ್‌ ಸೀಡ್‌ ಮಾಡುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ಅಧ್ಯಕ್ಷೆ ಶಿವಮ್ಮ ಹಾಗೂ ತೆರಕಣಾಂಬಿ ಕ್ಷೇತ್ರದ ಸದಸ್ಯೆ ಅಶ್ವಿನಿ ಅವರು ಪರಸ್ಪರ ಸಾರ್ವಜನಿಕವಾಗಿ ಹೊಡೆದಾಡಿಕೊಂಡಿರುವುದು ದುರ್ದೈವ. ನಾಯಕ ಸಮುದಾಯಕ್ಕೆ ಸೇರಿರುವ ಹೆಣ್ಣುಮಕ್ಕಳು ಸಾರ್ವಜನಿಕವಾಗಿ ಈ ರೀತಿ ವರ್ತಿಸಿರುವುದು ನಾಚಿಕೆಗೇಡಿನ ಸಂಗತಿ’ ಎಂದರು.

ಜಿಲ್ಲೆಯ ಕಾಂಗ್ರೆಸ್‌ ಮುಖಂಡರ ವಿರುದ್ಧ ಹರಿಹಾಯ್ದ ಸೋಮನಾಯಕ ಅವರು, ‘ಪಕ್ಷದಿಂದ ಆಯ್ಕೆಯಾಗಿರುವ ಅಧ್ಯಕ್ಷರ ರಾಜೀನಾಮೆ ಪಡೆಯಲು ಸಾಧ್ಯವಾಗದಿರುವ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಸದಸ್ಯರ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡಿದ್ದಾರೆ. ಹಿಂದೆ ಮಂತ್ರಿಯಾಗಿದ್ದ ಸಿ.ಪುಟ್ಟರಂಗಶೆಟ್ಟಿ ಅವರು ಹಾಗೂ ಶಿವಮ್ಮ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದ ಆರ್‌.ನರೇಂದ್ರ ಅವರಿಗೆ ರಾಜೀನಾಮೆ ಕೊಡಿಸಲು ಸಾಧ್ಯವಾಗಿಲ್ಲ’ ಎಂದು ಟೀಕಿಸಿದರು.

‘ಪಕ್ಷದಲ್ಲಿ ನಡೆದಿರುವ ಆಂತರಿಕ ಒಪ್ಪಂದಕ್ಕೆ ಶಿವಮ್ಮ ಗೌರವ ಕೊಟ್ಟು ರಾಜೀನಾಮೆ ನೀಡಬೇಕಿತ್ತು. ಅವರು ಪಕ್ಷದ ಸೂಚನೆ ಪಾಲಿಸದೇ ಇದ್ದಾಗ ಅವರನ್ನು ಪಕ್ಷದಿಂದ ಉಚ್ಚಾಟಿಸುವ ತೀರ್ಮಾನವನ್ನು ಮುಖಂಡರು ಕೈಗೊಳ್ಳಬಹುದಿತ್ತು. ಆದರೆ, ಇವರು ಏನೂ ಮಾಡಿಲ್ಲ. ಪಕ್ಷ ಹಾಗೂ ಸದಸ್ಯರ ಮೇಲಿನ ಹಿಡಿತವನ್ನು ಅವರು ಕಳೆದುಕೊಂಡಿದ್ದಾರೆ’ ಎಂದರು.

ಮುಖಂಡ ರಾಜುನಾಯಕ, ನಗರಸಭಾ ಸದಸ್ಯ ಶಿವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT