ಚಾಮರಾಜನಗರ: ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸೇರಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರ ಹಾಗೂ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದೇವಸ್ಥಾನದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ರಸ್ತೆ ತಡೆ ನಡೆಸಿ, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡ ಎನ್.ಮಹೇಶ್ ಮಾತನಾಡಿ, 'ವಿಧಾನ ಸಭೆಯಲ್ಲಿ ಸರ್ಕಾರ ಹಾಗೂ ಸಭಾಧ್ಯಕ್ಷರು ಸಂವಿಧಾನ ವಿರೋಧಿ ನಿಲುವು ತಾಳಿದ್ದಾರೆ. ಸದನದಲ್ಲಿ ಪ್ರತಿಭಟನೆ ಮಾಡಿದ ಬಿಜೆಪಿ ಸದಸ್ಯರನ್ನು ಅಮಾನತು ಮಾಡಿರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ತೊಡೆ ತಟ್ಟಿ ಪ್ರತಿಭಟಿಸಲಿಲ್ಲವೇ? ಸಂಗಮೇಶ್ ಬಟ್ಟೆ ಬಿಚ್ಚಿ ಪ್ರತಿಭಟನೆ ನಡಸಿರಲಿಲ್ಲವೇ' ಎಂದು ಪ್ರಶ್ನಿಸಿದರು.
'ಕೇಂದ್ರ ಸರ್ಕಾರದ ಏಕರೂಪ ನಾಗರಿಕ ಸಂಹಿತೆ ಕುರಿತು ಕೇಳಿದ್ದೇ ತಪ್ಪಾ? ಚರ್ಚೆ ಮಾಡದೇ ಮಸೂದೆಗಳನ್ನು ಅಂಗೀಕರಿಸುತ್ತಿದ್ದುದನ್ನು ಕೇಳಿದ್ದು ತಪ್ಪಾ? ಇದನ್ನು ಕೇಳಿದರೇ, ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಕೃಷ್ಣ ಬೈರೇಗೌಡ ಅವರು, 'ದಲಿತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ' ಎಂದು ಹೇಳಿ ದಲಿತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತಿರುವುದನ್ನು ಲೇವಡಿ ಮಾಡಿರುವ ಸಿ.ಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಮಹೇಶ್, 'ಗಾಂಧಿ ಪ್ರತಿಮೆ ಮುಂದೆ ಅಲ್ಲ, ಗೋಡ್ಸೆ ಪ್ರತಿಮೆ ಮುಂದೆ ಪ್ರತಿಭಟಿಸಿ' ಎಂದು ಹೇಳಲು ನಾಚಿಕೆ ಆಗುವುದಿಲ್ಲವೇ' ಎಂದರು.
ಮುಖಂಡ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, 'ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿನಂತೆ ಜಾರಿಗೆ ತರುವುದರ ಬದಲು ಈಗ ಷರತ್ತು ಹಾಕುತ್ತಿದೆ. ಇನ್ನೂ ಯೋಜನೆ ಜಾರಿಗೊಳಿಸಿಲ್ಲ. ಇಂದು, ನಾಳೆ ಎಂದು ಹೇಳುತ್ತಾ ಲೋಕಸಭಾ ಚುನಾವಣೆಯವರೆಗೆ ಮುಂದೂಡಲಿದೆ' ಎಂದು ವ್ಯಂಗ್ಯವಾಡಿದರು.
ಮುಖಂಡರಾದ ಎಂ. ರಾಮಚಂದ್ರ, ಆರ್. ಸುಂದರ್, ನಿಜಗುಣರಾಜು, ಡಾ. ಎ. ಆರ್. ಬಾಬು, ನೂರೊಂದು ಶೆಟ್ಟಿ, ನಟರಾಜು, ಸೂರ್ಯಕುಮಾರ್, ಆನಂದ್ ಭಗೀರಥ, ಶಿವು ವಿರಾಟ್, ಕಿಲಗೆರೆ ಬಸವರಾಜು, ಪ್ರಸಾದ್, ಪರಶಿವ, ಮಂಜುನಾಥ್, ಶಿವಕುಮಾರ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.