ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಕಾಂಗ್ರೆಸ್‌ನ ಕೊಡುಗೆ:ನಳಿನ್‌

ಬಿಜೆಪಿಯಿಂದ ಜನ ಸಂಕಲ್ಪ ಯಾತ್ರೆ, ವಿಧಾನಸಭಾ ಚುನಾವಣೆಗೆ ತಯಾರಿ
Last Updated 28 ಅಕ್ಟೋಬರ್ 2022, 16:27 IST
ಅಕ್ಷರ ಗಾತ್ರ

ಹನೂರು/ಗುಂಡ್ಲುಪೇಟೆ: ದೇಶದಲ್ಲಿ ಭ್ರಷ್ಟಾಚಾರ ಇದೆ ಎಂದರೆ ಅದು ಕಾಂಗ್ರೆಸ್ ಕೊಡುಗೆ. ಸಿದ್ಧರಾಮಯ್ಯ ನೇತೃತ್ವದ ಆಡಳಿತಾವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಅರ್ಕಾವತಿ ಹಗರಣ ಬಯಲಾದರೆ ಅವರು ಜೈಲಿಗೆ ಹೋಗುವುದು ಖಚಿತ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ‌ಕಟೀಲ್ ಶುಕ್ರವಾರ ಹೇಳಿದರು.

ಹನೂರು ಮತ್ತು ಗುಂಡ್ಲುಪೇಟೆಯಲ್ಲಿ ನಡೆದ ಕಾರ್ಯಕರ್ತರ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಹನೂರಿನಲ್ಲಿ ಮಾತನಾಡಿ, ‘60 ವರ್ಷಗಳ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಭ್ರಷ್ಟಾಚಾರ, ಭಯೋತ್ಪಾದನೆ, ವಿಭಜನೆವಾದ, ಪರಿವಾರದ ರಾಜಕಾರಣ ಮಾಡಿಕೊಂಡು ಬಂದಿದೆ. ಗರೀಬ್‌ ಹಠಾವೊ ಹೆಸರಿನಲ್ಲಿ ಗಾಂಧಿ, ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ತಮ್ಮ ಬಡತನವನ್ನು ದೂರ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ನಿಲ್ಲಲು ಕ್ಷೆತ್ರವೇ ಇಲ್ಲ. ಭಾರತ್ ಜೋಡೋ ಮೂಲಕ ಕ್ಷೇತ್ರ ಹುಡುಕುವ ಕೆಲಸ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಬಿಜೆಪಿಯಿಂದ ದೇಶದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡಿದ್ದಾರೆ. ಬೂತ್ ಮಟ್ಟದ ನಾಯಕರ ಜತೆ ಸಂವಾದ ಮಾಡಿ ಸಲಹೆ ಸೂಚನೆಗಳನ್ನು ನೀಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತ’ ಎಂದರು.

ಗುಂಡ್ಲುಪೇಟೆಯಲ್ಲಿ ಮಾತನಾಡಿ, ‘ಚಾಮರಾಜನಗರ ಶಾಪಗ್ರಸ್ತ ಜಿಲ್ಲೆಯಲ್ಲ. ಆ ಶಾಪವನ್ನು ಬಿಜೆಪಿ ವಿಮೋಚನೆ ಮಾಡಿದೆ. ಕಾಂಗ್ರೆಸ್‍ನವರಿಗೆ ಚಾಮರಾಜನಗರ ಶಾಪಗ್ರಸ್ತ ಜಿಲ್ಲೆಯಾಗಿದೆ. ಗುಂಡ್ಲುಪೇಟೆ ಸಮಗ್ರ ಅಭಿವೃದ್ಧಿ ನಮ್ಮ ಸರ್ಕಾರದ ಜವಾಬ್ದಾರಿಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಸುವ ಪಣ ತೊಡಬೇಕು’ ಎಂದು ತಿಳಿಸಿದರು.

ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ‘ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿಯುತವಾಗಿದೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲಾಗಿದೆ. ಮುಂದಿನ ಚುನಾವಣೆಯಲ್ಲಿ ನಾಲ್ಲೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮುಂದಿನ ವಿಧಾನಸಭೆಯ ಚುನಾವಣೆಗೆ ಪೂರ್ವ ತಯಾರಿ ಯಾತ್ರೆ ಇದಾಗಿದೆ’ ಎಂದರು.

‘ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಹಿಳೆಗೆ ಕೆನ್ನೆಗೆ ಹೊಡೆದಿದ್ದರು ಎಂದು ಕಾಂಗ್ರೆಸಿಗರು ಅಫ್ರಚಾರ ಮಾಡಿದರು. ಆದರೂ ಗ್ರಾಮದ ಕೆಂಪಮ್ಮಗೆ ಸ್ಥಳದಲ್ಲೇ ನಿವೇಶನ ಕೊಟ್ಟರು. ಇದರಿಂದ ಸೋಮಣ್ಣ ಕೆಲಸಗಾರ ಎಂಬುದು ಗೊತ್ತಾಗುತ್ತದೆ’ ಎಂದು ಹೇಳಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಸಿದ್ದರಾಜು, ಉಪಾಧ್ಯಕ್ಷ ರಾಜೇಂದ್ರ, ಮುಖಂಡರಾದ ಮೈ.ವಿ.ರವಿಶಂಕರ್, ಎಂಎಲ್ ಮುನಿರಾಜು, ರಾಷ್ಟ್ರೀಯ ಪರಿಷತ್ ಸದಸ್ಯ ಬೂದುಬಾಳು ವೆಂಕಟಸ್ವಾಮಿ, ಕಾಡಾ ಅಧ್ಯಕ್ಷ ನಿಜಗುಣ ರಾಜು, ಜಿಲ್ಲಾ ಘಟಕದ ಅಧ್ಯಕ್ಷ ಸುಂದರ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಮಂಗಲ ಶಿವಕುಮಾರ್, ಪರಿಮಳ ನಾಗಪ್ಪ, ನಂಜುಂಡಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ದತ್ತೇಶ್ ಕುಮಾರ್, ಪ್ರೀತನ್ ನಾಗಪ್ಪ, ಜಿಲ್ಲಾ ಒಬಿಸಿ ಮೋರ್ಚಾದ ಸಂಚಾಲಕ ಬಿ.ವೆಂಕಟೇಶ್, ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮುಖಂಡ ಎಂ.ರಾಮಚಂದ್ರ, ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣಪ್ರಸಾದ್, ನಾಗಶ್ರೀ ಪ್ರತಾಪ್, ಡಾ.ಎ.ಆರ್.ಬಾಬು ಇದ್ದರು.

ರಾಜ್ಯ ಅಧ್ಯಕ್ಷರ ಎದುರೇ ಬಣ ರಾಜಕೀಯ

ಹನೂರು ತಾಲ್ಲೂಕು ಬಿಜೆಪಿಯಲ್ಲಿರುವ ಬಣ ರಾಜಕೀಯ ರಾಜ್ಯ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಮುಂದೆಯೇ ಶುಕ್ರವಾರ ಬಯಲಾಯಿತು.

ಬಿಎಲ್‌ಒ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಯುವ ಸಂದರ್ಭದಲ್ಲಿ ಕಲ್ಯಾಣ ಮಂಟಪದ ಹೊರಭಾಗದಲ್ಲಿ ಕಾರ್ಯಕರ್ತರು ಪರಸ್ಪರ ವಾಗ್ವಾದಕ್ಕಿಳಿದರು.

ಈ ಬಗ್ಗೆ ಮಾತನಾಡಿದ ಕಟೀಲ್‌, ‘ಸ‌ಣ್ಣ ಪುಟ್ಟ ವ್ಯತ್ಯಾಸಗಳು, ಅಭಿಪ್ರಾಯ ಭೇದಗಳು ಇದ್ದೇ ಇರುತ್ತವೆ. ಅದು ಭಿನ್ನಮತ ಅಲ್ಲ. ವ್ಯತ್ಯಾಸ ಇದ್ದರೆ ಪಕ್ಷ ಗಟ್ಟಿ ಇದೆ ಎಂದರ್ಥ ಇದನ್ನೆಲ್ಲ ಪಕ್ಷ ಸರಿದೂಗಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT