ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಬಂಧನಕ್ಕೂ, ಬಿಜೆಪಿಗೂ ಸಂಬಂಧವಿಲ್ಲ

ಪ್ರತಿಭಟನೆ ಮೂಲಕ ಜನರಲ್ಲಿ ತಪ್ಪು ಭಾವನೆ ಹುಟ್ಟಿಸುತ್ತಿರುವ ಕಾಂಗ್ರೆಸ್‌– ಮಲ್ಲಿಕಾರ್ಜುನಪ್ಪ
Last Updated 6 ಸೆಪ್ಟೆಂಬರ್ 2019, 14:54 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವುದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಬಂಧನದಲ್ಲಿ ಬಿಜೆಪಿಯ ಹಸ್ತಕ್ಷೇಪ ಇದೆ ಎಂದು ಆರೋಪಿಸುವ ಮೂಲಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿವೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿ.ಕೆ.ಶಿವಕುಮಾರ್‌ ಅವರಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ 2017ರಲ್ಲೇ ತಪಾಸಣೆ ನಡೆಸಿ ತನಿಖೆ ಆರಂಭಿಸಿತ್ತು. ಎರಡು ವರ್ಷಗಳ ತನಿಖೆಯ ನಂತರ ಅವರ ಬಂಧನವಾಗಿದೆ. ಇದರಲ್ಲಿ ಬಿಜೆಪಿ ಪಾತ್ರ ಏನೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಸ್ವಾಯತ್ವ ಸಂಸ್ಥೆಗಳಾಗಿದ್ದು, ಯಾವುದೇ ಸರ್ಕಾರ ಇವುಗಳ ಕಾರ್ಯನಿರ್ವಹಣೆ ಮೇಲೆ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಬಂಧನದ ವಿರುದ್ಧ ಪ್ರತಿಭಟನೆ ಮಾಡುತ್ತಾ, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡುತ್ತಾ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅವಿವೇಕಿತನ ಪ್ರದರ್ಶಿಸುತ್ತಿವೆ. ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದರು.

‘ಶಿವಕುಮಾರ್‌ ಅವರನ್ನು ಅಧಿಕಾರಿಗಳು ಏಕಾಏಕಿ ಬಂಧಿಸಿಲ್ಲ. ಅವರ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿದ್ದಾರೆ. ಅವರು ನೀಡಿರುವ ಹೇಳಿಕೆ ಹಾಗೂ ಸಹಚರರ ಹೇಳಿಕೆ ತಾಳೆಯಾಗುತ್ತಿಲ್ಲ. ಅವರು ತನಿಖೆಗೆ ಸಹಕರಿಸದೆ ಇರುವುದರಿಂದ ಬಂಧಿಸಲಾಗಿದೆ ಎಂದು ಅಧಿಕಾರಿಗಳೇ ಹೇಳಿದ್ದಾರೆ’ ಎಂದರು.

ಭಯದ ವಾತಾವರಣ ಸೃಷ್ಟಿಸಲು ಯತ್ನ: ‘ಇಡೀ ರಾಜ್ಯದಲ್ಲಿ ಎರಡು ಜಿಲ್ಲೆಗಳಲ್ಲಿ ಮಾತ್ರ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಲಾಗಿದೆ. ಪ್ರತಿಭಟನೆಯ ಮೂಲಕ ರಾಜ್ಯದಲ್ಲಿ ಭಯದ ವಾತಾವರಣ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ. ಪ್ರತಿಭಟನೆ ನಡೆಸುವುದರಿಂದ ಬಂಧನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾನೂನು ಪ್ರಕ್ರಿಯೆ ಸಹಜವಾಗಿ ನಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT