ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆಮಹದೇಶ್ವರ ವನ್ಯಧಾಮದಲ್ಲೂ ಕರಿ ಚಿರತೆ ದರ್ಶನ

ಪಿ.ಜಿ.ಪಾಳ್ಯ ಅರಣ್ಯ ವಲಯದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಮೂರು ಕಡೆ ಚಿತ್ರ ಸೆರೆ
Last Updated 18 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಹನೂರು: ಗಡಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯದಲ್ಲಿ ಕರಿ ಚಿರತೆ ಕಂಡು ಬಂದು ಸುದ್ದಿಯಾಗಿದ್ದ ಬೆನ್ನಲ್ಲೇ, ಮಲೆಮಹದೇಶ್ವರ ವನ್ಯಧಾಮದಲ್ಲೂ ಕಪ್ಪು ಚಿರತೆ ಕಾಣಿಸಿಕೊಂಡಿದೆ. ಇದು ಕೂಡ ಅದೇ ಚಿರತೆಯೇ ಎಂಬುದು ಸ್ಪಷ್ಟವಾಗಿಲ್ಲ.

ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವನ್ಯಜೀವಿ ವಲಯದಲ್ಲಿ ಅರಣ್ಯ ಇಲಾಖೆ ಈಚೆಗೆ ಅಳವಡಿಸಿರುವ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಕಪ್ಪು ಚಿರತೆಯ ಚಿತ್ರ ಸೆರೆಯಾಗಿದೆ.

ಹುಲಿ ಗಣತಿಯ ನಾಲ್ಕನೇ ಹಂತದ ಅಧ್ಯಯನಕ್ಕಾಗಿ ವನ್ಯಜೀವಿ ವಲಯದಲ್ಲಿ 30 ಕಡೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಪ್ಪು ಚಿರತೆಯು ಓಡಾಡುತ್ತಿರುವ ಚಿತ್ರ ಮೂರು ಕಡೆ ಸೆರೆಯಾಗಿದೆ. ಚಿರತೆಗೆ ಅಂದಾಜು ಆರರಿಂದ ಏಳು ವರ್ಷ ವಯಸ್ಸಾಗಿರಬಹುದು ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯದ ಕೌಳ್ಳಿಹಳ್ಳಕಟ್ಟೆ ಡ್ಯಾಂ ಬಳಿ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಆಗಸ್ಟ್‌ ತಿಂಗಳ ಆರಂಭದಲ್ಲಿ ಕಪ್ಪು ಚಿರತೆ ಸೆರೆಯಾಗಿತ್ತು.

ಮಲೆಮಹದೇಶ್ವರ ವನ್ಯಧಾಮದ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಮಧ್ಯೆ ಇರುವ ಎಡೆಯಾರಳ್ಳಿ ಕಾರಿಡಾರ್ ಸಮೀಪದಲ್ಲೇ ಇದು ಕಾಣಿಸಿಕೊಂಡಿದ್ದರಿಂದ ಕಾರಿಡಾರ್‌ನಲ್ಲೇ ಇದು ಸುತ್ತಾಡಿರಬಹುದು. ಅಲ್ಲದೇ, ಮಲೆಮಹದೇಶ್ವರ ವನ್ಯಧಾಮದಲ್ಲೂ ಓಡಾಡಬಹುದು ಎಂದು ಅಧಿಕಾರಿಗಳು ಊಹಿಸಿದ್ದರು.

ಈಗ ಕಾಣಿಸಿಕೊಂಡಿರುವ ಚಿರತೆ ಅದೇ ಚಿರತೆಯೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಆ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.ಕ್ಯಾಮೆರಾ ಅಳವಡಿಸಿದ ಎರಡು ದಿನಗಳೊಳಗೆ ಚಿರತೆ ಚಿತ್ರ ಸೆರೆಯಾಗಿದೆ.

ಬಿಆರ್‌ಟಿಯಲ್ಲಿ ಹುಲಿ ಹಾಗೂ ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಹೊಸ ಆವಾಸ ಸ್ಥಾನ ಹುಡುಕಿಕೊಂಡು ಮಲೆಮಹದೇಶ್ವರ ವನ್ಯಧಾಮಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ವನ್ಯಧಾಮದ ಡಿಸಿಎಫ್ ವಿ.ಏಡುಕುಂಡಲು.

‘ಈಗ ಕ್ಯಾಮೆರಾದಲ್ಲಿ ಸೆರೆಯಾಗಿರುವ ಮಾಹಿತಿ ಆಧರಿಸಿ ಹೇಳುವುದಾದರೆ ನಮ್ಮ ಅರಣ್ಯದಲ್ಲಿ ಬಲಿ ಪ್ರಾಣಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿವೆ. ಕಾಟಿ, ಜಿಂಕೆ, ಕಡವೆ ಮುಂತಾದ ಪ್ರಾಣಿಗಳು ಸಾಕಷ್ಟು ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. ಚಿರತೆಗೆ ಇಲ್ಲಿಯೇ ಸಾಕಷ್ಟು ಆಹಾರ ಸಿಗುವುದರಿಂದ ಬೇಟೆ ಪ್ರಾಣಿಗಳ ಆವಾಸ ಸ್ಥಾನ ಇನ್ನಷ್ಟು ವಿಸ್ತಾರವಾಗಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT