ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದಲ್ಲಿ ಸೊರಗಿದ 'ಕಪ್ಪು ಬಂಗಾರ': ಬೆಳೆಗಾರರಿಗೆ ನಿರಾಶೆ

ಕರಿಮೆಣಸಿನ ಫಸಲು ನಾಶ: ಬೆಳೆಗಾರರಿಗೆ ನಿರಾಶೆ
Last Updated 27 ಫೆಬ್ರುವರಿ 2022, 4:13 IST
ಅಕ್ಷರ ಗಾತ್ರ

ಯಳಂದೂರು:ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಗುಡ್ಡಗಾಡು ಪ್ರದೇಶದಲ್ಲಿ ಈ ಬಾರಿ ಕರಿ ಮೆಣಸಿನ ಇಳುವರಿ ಕುಂಠಿತವಾಗಿದೆ.

ಈ ಭಾಗದಲ್ಲಿಕಾಫಿ, ಏಲಕ್ಕಿ ತೋಟಕ್ಕೆ ನೆರಳು ಒದಗಿಸಲು ಮರಗಳಿಗೆ ಕರಿಮೆಣಸಿನ ಬಳ್ಳಿಯನ್ನು ಹಬ್ಬಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಹೂ ಬಿಟ್ಟು, ಏಳೆಂಟು ತಿಂಗಳಲ್ಲಿ ಮೆಣಸು ಕೊಯ್ಲಿಗೆ ಬರುತ್ತದೆ. ಆದರೆ, ಕಳೆದ ವರ್ಷ ಹವಾಮಾನದಲ್ಲಿ ಉಂಟಾದ ವ್ಯತ್ಯಯ ಮತ್ತು ಮಳೆಯ ಸಂದರ್ಭದಲ್ಲಿ ಹೆಚ್ಚಾದ ಮಂಜುಮಯ ವಾತಾವರಣದಿಂದ ಈ ಬಾರಿ ಇಳುವರಿ ಕುಸಿತ ಕಂಡಿದೆ.

ಕರಿಮೆಣಸು ಬಹು ವಾರ್ಷಿಕ ಹಬ್ಬುವ ಬಳ್ಳಿ. ಗುಡ್ಡಗಾಡಿನಲ್ಲಿ ಬೆಳೆಗಾರರು ಬಿಳಿಮಲ್ಲಿಗೆ ಸರ, ದೊಡ್ಡಿಗ, ಉದ್ದಕರೆ, ಕರಿಮುಂಡ ಮೆಣಸು ತಳಿಗಳನ್ನು ಬೆಳೆದಿದ್ದಾರೆ. ಸಾಂಬಾರ ಮತ್ತು ಔಷಧಕ್ಕೂ ಬಳಕೆ ಮಾಡಲಾಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಧಾರಣೆ ಇದೆ. ಬಿಆರ್‌ಟಿಯಲ್ಲಿ ಸಣ್ಣ ಹಿಡುವಳಿಗಳಲ್ಲಿ, ನೆರಳಿನ ಉದ್ದೇಶಕ್ಕಾಗಿ ಮರಗಳಿಗೆ ಮೆಣಸು ಹಬ್ಬಿಸಿ ಕೃಷಿ ಮಾಡುವ ಪದ್ಧತಿ ಇದೆ.

ಉತ್ತಮ ಧಾರಣೆ: ಈ ಬಾರಿ ಮೆಣಸಿಗೆ ಉತ್ತಮ ಬೆಲೆ ಇದೆ. ಕೆಜಿಗೆ ₹550ರವರೆಗೂ ಮಾರಾಟವಾಗುತ್ತಿದೆ. ಆದರೆ, ಬಳ್ಳಿಗಳಲ್ಲಿನ ಶಕ್ತಿ ಮತ್ತು ಉತ್ಪಾದಕತೆ ಕುಸಿದಿದೆ. ಕಪ್ಪುಕೊಳೆ ಮತ್ತು ನಿಧಾನ ಸೊರಗು ರೋಗ ಹಾವಳಿಯಿಂದ ಬಳ್ಳಿಗಳು ಚೇತರಿಕೆ ಕಂಡಿಲ್ಲ. ಎಲೆಗಳ ಮೇಲೆ ಹಳದಿ ಕಪ್ಪು ಚುಕ್ಕೆಗಳು ಕಾಣಿಸಿಕೊಂಡು ಹಣ್ಣಾಗಿ ಉದುರಿವೆ. ಹರಿಗಳು, ಮೃದುಕಾಂಡ, ಕುಡಿ ಕಾಯಿಗಳು ಕಪ್ಪು ಬಣ್ಣಕ್ಕೆ ತಿರುಗಿ, ಬಳ್ಳಿಗಳು ನಾಶವಾಗುವ ಹಂತ ಮುಟ್ಟಿವೆ. ಮೂರ್ನಾಲ್ಕು ವರ್ಷಗಳಿಂದ ತೋಟಗಳಲ್ಲಿ ಮೆಣಸುಬಳ್ಳಿ ಅಭಿವೃದ್ಧಿಪಡಿಸಿ, ಲಕ್ಷಾಂತರ ವ್ಯಯಿಸಿದ್ದ ರೈತರು ಒಣಗಿದ ಬಳ್ಳಿಗಳನ್ನು ಕಂಡು ಪರಿತಪಿಸುವಂತೆ ಆಗಿದೆ.

ವಹಿವಾಟು ಇಳಿಕೆ: ಬಿಆರ್‌ಟಿಯಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ಕರಿಮೆಣಸು ಕೃಷಿ ಮಾಡಲಾಗುತ್ತಿದೆ. 350ಕ್ಕೂ ಹೆಚ್ಚಿನ ಕುಟುಂಬಗಳು ಇದನ್ನು ನಂಬಿವೆ.

ವಾರ್ಷಿಕ 500 ಕ್ವಿಂಟಾಲ್ ವಹಿವಾಟು ನಡೆಯುತ್ತಿದ್ದು, ಈ ಬಾರಿ 200 ಕ್ವಿಂಟಲ್‌ಗೆ ಇಳಿದಿದೆ. ಕಳೆದ ವರ್ಷ ಕೆಜಿಗೆ ₹320 ಇದ್ದ ಧಾರಣೆ, ಈ ಬಾರಿ ₹550ಕ್ಕೆ ಏರಿಕೆ ಕಂಡಿದೆ. ಆದರೆ, ಉತ್ಪಾದನೆ ರೈತರ ನಿರೀಕ್ಷೆ ಮುಟ್ಟಿಲ್ಲ. 100ಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿ ಗಿಡಗಳು ಒಣಗಿದ್ದು, ಖರ್ಚುವೆಚ್ಚದ ಏರಿಕೆಗೆ ಕಾರಣವಾಗಿದೆ ಎಂದು ಬಂಗ್ಲೇಪೋಡು ದಾಯಿತಮ್ಮ ಅಳಲು ತೋಡಿಕೊಂಡರು.

100ಕ್ಕೂ ಹೆಚ್ಚು ಎಕರೆ ಲುಕ್ಸಾನು:ಕರಿಮೆಣಸು ಬೆಳೆಗಾರರು 1 ಕೆಜಿಯಿಂದ 10 ಕೆಜಿ ತನಕ ಕಾಳು ಸಂಗ್ರಹಿಸುತ್ತಿದ್ದರು. ಈ ಬಾರಿ ಇಳುವರಿ 100 ಗ್ರಾಂನಿಂದ 1 ಕೆಜಿಯಷ್ಟೇ ಸಿಕ್ಕಿದೆ. 100ಕ್ಕೂ ಹೆಚ್ಚು ಎಕರೆ ಪ್ರದೇಶ ರೋಗಕ್ಕೆ ತುತ್ತಾಗಿದೆ. ಹಾಗಾಗಿ, ಹೊಸದಾಗಿ ಕರಿಮೆಣಸು ನಾಟಿ ಮಾಡಬೇಕಾದ ಸ್ಥಿತಿ ತಂದಿತ್ತಿದೆ ಎನ್ನುತ್ತಾರೆ ಮುತ್ತುಗದಗದ್ದೆ ಪೋಡಿನ ಕಾರನಕೇತೇಗೌಡ ಮತ್ತು ಮಸಣಮ್ಮ.

ನೆರವಿನ ನಿರೀಕ್ಷೆಯಲ್ಲಿ ಬೆಳೆಗಾರರು

ಕರಿ ಮೆಣಸು ತಂಪು– ಉಷ್ಣತೆ ಬಯಸುವ ಬೆಳೆ. ಸಾಕಷ್ಟು ಮಳೆ ಬೇಡುತ್ತದೆ. ಮೇ-ಜೂನ್‌ನಲ್ಲಿ ಹೂ ಬಿಡುತ್ತದೆ. ಗುಡ್ಡಗಾಡು ಪ್ರದೇಶದಲ್ಲಿ ಕರಿಮೆಣಸಿನ ಕೊಯ್ಲು ಫೆಬ್ರುವರಿಯಿಂದ ಮಾರ್ಚ್‌ವರೆಗೆ ಮುಂದುವರಿಯುತ್ತದೆ. ಬಲಿತ ಕಾಳುಗಳನ್ನು ಕೊಯ್ಲು ಮಾಡಿ, 7 ರಿಂದ 10 ದಿನ ಒಣಗಿಸಬೇಕು. ಆದರೆ, ಈ ಬಾರಿ ಅತಿಯಾದ ಶೀತ ಮಾರುತದಿಂದ ಸೊರಗು ರೋಗಕ್ಕೆ ಬಳ್ಳಿಗಳು ಸಿಲುಕಿವೆ. ಹಾಗಾಗಿ, ಅಗತ್ಯ ಔಷಧ, ಕಟಾವಿಗೆ ನೆರವಾಗಲು ಕಬ್ಬಿಣದ ಏಣಿ ಮತ್ತು ಸ್ಪ್ರಿಂಕ್ಲರ್‌ಗಳ ಪೂರೈಸಲು ಸರ್ಕಾರ ನೆರವು ನೀಡಬೇಕು ಎಂದು ಜಿಲ್ಲಾ ಬುಡಕಟ್ಟು ಸಂಘದ ಕಾರ್ಯದರ್ಶಿ ಮಾದೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT