ಚಾಮರಾಜನಗರ/ಯಳಂದೂರು: ಮಕ್ಕಳಲ್ಲಿರುವ ಕಲಿಕಾ ಸಾಮರ್ಥ್ಯವನ್ನು ಅಳೆಯುವುದಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಮಾದರಿಯಲ್ಲಿ ಇದೇ 27ರಿಂದ ಏಪ್ರಿಲ್ 1ರವರೆಗೆ ಮೌಲ್ಯಾಂಕನ ಹಮ್ಮಿಕೊಂಡಿದೆ.
ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಈ ಎರಡು ತರಗತಿ ಮಕ್ಕಳು ಈ ಮೌಲ್ಯಾಂಕನ ಎದುರಿಸಲಿದ್ದು, ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಪರೀಕ್ಷೆ ಹಮ್ಮಿ ಕೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ.
5, 8ನೇ ತರಗತಿಯ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾದರಿಯಲ್ಲಿ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಕಳೆದ ವರ್ಷವೇ ತೀರ್ಮಾನಿಸಿತ್ತು. ಆದರೆ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದವು. ಆರಂಭದಲ್ಲಿ ಸರ್ಕಾರದ ಸುತ್ತೋಲೆ ರದ್ದು ಪಡಿಸಿದ್ದ ಹೈಕೋರ್ಟ್, ನಂತರ ಇದೇ 27ರಿಂದ ಪರೀಕ್ಷೆ ನಡೆಸುವಂತೆ ಸೂಚಿಸಿತ್ತು.
ಪರೀಕ್ಷಾ ಸ್ವರೂಪ: ಜಿಲ್ಲೆಯಲ್ಲಿ 5ನೇ ತರಗತಿಯ 12,478 ಮಕ್ಕಳಿದ್ದಾರೆ. 8ನೇ ತರಗತಿಯ 12,413 ವಿದ್ಯಾರ್ಥಿಗಳಿದ್ದಾರೆ. 5ನೇ ತರಗತಿಯವರಿಗೆ ನಾಲ್ಕು ದಿನ ಪರೀಕ್ಷೆ ನಡೆದರೆ, 8ನೇ ತರಗತಿಯವರು ಆರು ವಿಷಯಗಳ ಪರೀಕ್ಷೆ ಬರೆಯಬೇಕು.
50 ಅಂಕಗಳಿಗೆ ಮೌಲ್ಯಾಂಕನ: ಒಟ್ಟು 50 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಈ ಪೈಕಿ 40 ಅಂಕ ಲಿಖಿತ ಮೌಲ್ಯಾಂಕನವಾಗಿದ್ದರೆ, ಮೌಖಿಕ ಮೌಲ್ಯಾಂಕನಕ್ಕೆ 10 ಅಂಕ ಮೀಸಲಾಗಿವೆ. ಪ್ರಶ್ನೆ ಪತ್ರಿಕೆಯಲ್ಲಿ ಬಹು ಆಯ್ಕೆ, ಕಿರು ಉತ್ತರ ಹಾಗೂ ವಿವರಣಾತ್ಮಕ ಮಾದರಿ ಪ್ರಶ್ನೆಗಳು ಇರಲಿವೆ.
‘ರಾಜ್ಯ ಮಟ್ಟದಿಂದಲೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುತ್ತದೆ. ಈಗಾಗಲೇ ಬಂದಿವೆ. ನಾವು ಇದನ್ನು ಪಬ್ಲಿಕ್ ಪರೀಕ್ಷೆ ಎಂದು ಕರೆಯುವುದಿಲ್ಲ. ಇದು ಆ ಮಾದರಿಯ ಪರೀಕ್ಷೆಯೂ ಅಲ್ಲ. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ, ಕಲಿಕಾ ನ್ಯೂನತೆ ಪತ್ತೆ ಹಚ್ಚುವುದಷ್ಟೇ ಇದರ ಉದ್ದೇಶ. ಇಲ್ಲಿ ಅನುತ್ತೀರ್ಣ ಎಂಬುದಿಲ್ಲ. ಫಲಿತಾಂಶವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿ ಸಲ್ಲ’ ಎಂದು ಮೌಲ್ಯಾಂಕನದ ಜಿಲ್ಲಾ ನೋಡೆಲ್ ಅಧಿಕಾರಿ ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಶಿಕ್ಷಕರು, ವಿದ್ಯಾರ್ಥಿಗಳ ಸಿದ್ಧತೆ: ಹೊಸ ಮಾದರಿಯ ಪರೀಕ್ಷೆ ಎದುರಿಸಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಿದ್ಧರಾಗಿದ್ದಾರೆ. ಬೋಧಕರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಸಂಪರ್ಕಿಸಿ ಮೌಲ್ಯಾಂಕ ನದ ಬಗ್ಗೆ ತಿಳಿಸುತ್ತಾ, ಮಕ್ಕಳಿಗೆ ಓದಲು ಪ್ರೋತ್ಸಾಹ ನೀಡುವಂತೆ ಸೂಚಿಸಿದ್ದಾರೆ.
‘ಸ್ಪರ್ಧಾತ್ಮಕ ಪರೀಕ್ಷಾ ಮಾದರಿಯಲ್ಲಿ ಪ್ರಶ್ನೆ ಇರಲಿದೆ. ಪೋಷ ಕರ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಅಭ್ಯಾ ಸದ ಮೇಲ್ವಿಚಾರಣೆ ಮಾಡಿ, ಪರೀಕ್ಷೆಯ ಭಯ ಹೋಗ ಲಾಡಿಸಲಾಗುತ್ತಿದೆ’ ಎಂದು ಯಳಂದೂರಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಇಂಗ್ಲಿಷ್ ಭಾಷಾ ಶಿಕ್ಷಕ ಜಿ.ಆರ್.ಸಿದ್ದಲಿಂಗ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಏಪ್ರಿಲ್ ಮೊದಲ ವಾರದಲ್ಲಿ ಮೌಲ್ಯಮಾಪನ: 5ನೇ ತರಗತಿ ಮಕ್ಕಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಏಪ್ರಿಲ್ 1ರಿಂದ 5ರೊಳಗೆ ನಡೆಯಲಿದೆ. 8ನೇ ತರಗತಿ ಮಕ್ಕಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಏ.7ರಿಂದ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.