ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ರಸ್ತೆ ಕೆಸರುಮಯ, ಸಂಚಾರ ಅಯೋಮಯ!

ಬಿಳಿಗಿರಿ ರಂಗನಾಥ ಸ್ವಾಮಿಯ ದರ್ಶನ ಕಷ್ಟ: ಕೆಸರಿಗೆ ಸಿಲುಕಿ ವಾಹನ ಸವಾರರು ಹೈರಾಣ
Last Updated 18 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಅಬ್ಬರದ ಮಳೆಗೆಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ಗುಂಡಿಗಳು ನಿರ್ಮಾಣವಾಗಿ, ವಾಹನ ಸಂಚಾರ ದುಸ್ತರವಾಗಿದೆ.

ರಸ್ತೆಗಳು ರಾಡಿಯಾಗಿ, ತಗ್ಗು, ದಿಣ್ಣೆಗಳ ಕೆಸರು ಮಣ್ಣಿನಲ್ಲಿ ಪ್ರವಾಸಿಗರ ವಾಹನಗಳು ಸಿಕ್ಕಿಕೊಳ್ಳುತ್ತಿವೆ. ಮಂಗಳವಾರ ಹಲವು ವಾಹನಗಳ ಚಕ್ರ ಕೆಸರಿನಲ್ಲಿ ಹೂತು ಹೋಗಿ, ವಾಹನ ಸವಾರರು ದಿನ ಪೂರ್ತಿ ಪರಿತಪಿಸಬೇಕಾಯಿತು.

ಯಳಂದೂರು ಪಟ್ಟಣದಿಂದ ಬಿಳಿಗಿರಿರಿಬೆಟ್ಟ 24 ಕಿ.ಮೀ. ದೂರ ಇದೆ. ಇಲ್ಲಿಂದ ಹಾದು ಹೋಗುವ ಡಾಂಬರ್ ರಸ್ತೆಯಲ್ಲಿ ಗುಂಬಳ್ಳಿ ಗ್ರಾಮದಿಂದಲೇ ಹೊಂಡಗಳು ಸವಾರರನ್ನು ಸ್ವಾಗತಿಸುತ್ತವೆ. ಮಾರ್ಗದ ಉದ್ದಕ್ಕೂ ರಸ್ತೆಯ ಜಲ್ಲಿ ಕಲ್ಲುಗಳು ಮೇಲೆದ್ದು, ಹಲವು ಗುಂಡಿಗಳು ನಿರ್ಮಾಣವಾಗಿವೆ. ಬನದ ಸುತ್ತಮುತ್ತಲ ಗಿರಿ ಶಿಖರಗಳಿಂದ ಧುಮ್ಮಿಕ್ಕುವ ನೀರು ಬೆಟ್ಟದ ರಸ್ತೆಗೆ ನುಗ್ಗಿದ ಪರಿಣಾಮ ರಸ್ತೆಯಲ್ಲಿ ಹಳ್ಳ ಬಿದ್ದು, ಕೆಸರುಮಯವಾಗಿದೆ. ರಸ್ತೆಯ ಅಂಚಿನಲ್ಲಿ ಕೊರಕಲು ಉಂಟಾಗಿದೆ.

ವಾರದಿಂದೀಚೆಗೆ ಬೆಟ್ಟದ ಸುತ್ತಮುತ್ತ ಪ್ರತಿ ದಿನವೂ ಮಳೆ ಹನಿಯುತ್ತಿದೆ. ಮಳೆ ನೀರು ವೇಗವಾಗಿ ಕೆಳಪಾತ್ರಕ್ಕೆ ಹರಿಯುವಾಗ ಬೆಟ್ಟದ ಎರಡು ಬದಿಗಳಿಂದ ಮಣ್ಣು ಮತ್ತು ಮರಳನ್ನು ರಸ್ತೆ ಮೇಲೆ ಹರಡುತ್ತಿದೆ. ಅತಿಯಾದ ಮಣ್ಣಿನ ಸವೆತದಿಂದ ರಸ್ತೆ ನಡುವಿನ ಗುಂಡಿಗಳಲ್ಲಿ ಕೆಸರು ಸಂಗ್ರಹವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಸಣ್ಣ ವಾಹನಗಳ ಚಕ್ರಗಳು ಕೆಸರಿನಲ್ಲಿ ಹೂತು ಹೋಗುತ್ತಿವೆ.

‘ಮಂಗಳವಾರ ಮುಂಜಾನೆಯಿಂದ ಸಂಜೆಯವರೆಗೂ ತುಂತುರು ಮಳೆಯಾಗಿದೆ. ಜಾರುತ್ತಿರುವ ರಸ್ತೆ ನಡುವಿನ ಸಣ್ಣಪುಟ್ಟ ಗುಂಡಿಗಳನ್ನು ತಪ್ಪಿಸಿ ಕಾರು ಚಾಲನೆ ಮಾಡುವಾಗ ವಾಹನ ಹಳ್ಳದಲ್ಲಿ ಸಿಲುಕಿತು. ಎರಡು ಗಂಟೆ ಪ್ರಯಾಸಪಟ್ಟು ಇತರೆ ವಾಹನ ಸವಾರರ ನೆರವಿನಿಂದ ಕಾರನ್ನು ಮೇಲೆ ತೆಗೆಯಬೇಕಾಯಿತು’ ಎಂದು ಕೊಳ್ಳೇಗಾಲದ ರೇವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಳಿಗಿರಿ ರಂಗನಾಥ ಸ್ವಾಮಿಯ ರಥೋತ್ಸವದ ಸಂದರ್ಭದಲ್ಲಿ ರಸ್ತೆ ದುರಸ್ತಿ ಮಾಡಲಾಗಿತ್ತು. ರಸ್ತೆ ನಿರ್ಮಾಣ ಮಾಡುವಾಗ ಹಾದಿಯ ಎರಡೂ ಬದಿ ಮಣ್ಣನ್ನು ಸುರಿಯಲಾಗಿದೆ. ಆದರೆ, ರಸ್ತೆ ಬದಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಿಲ್ಲ. ಇದರಿಂದ ಸಣ್ಣಪುಟ್ಟ ಮಳೆಯಾದರೂ ವಾಹನಗಳು ಮಣ್ಣಿನಲ್ಲಿ ಸಿಲುಕುತ್ತವೆ. ಕೆಲವೊಮ್ಮೆ ಅಪಘಾತ ಸಂಭವಿಸುತ್ತವೆ. ಯಳಂದೂರಿನಿಂದ ಬೆಟ್ಟದ ತನಕ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು’ ಎಂದು ವೈ.ಕೆ.ಮೋಳೆ ಗ್ರಾಮದ ನಾಗರಾಜು ಆಗ್ರಹಿಸಿದರು.

ಪರಿತಪಿಸಿದ ಸವಾರರು: ‘ಮಂಗಳವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಕಾರು, ಸ್ಕೂಟರ್, ಟೆಂಪೊ ಸವಾರರು ರಸ್ತೆಯಲ್ಲಿ ಸಾಗಲು ಪರಿತಪಿಸಬೇಕಾಯಿತು. ಕೆಲವು ವಾಹನಗಳ ಚಕ್ರಗಳು ಗುಂಡಿಗೆ ಸಿಲುಕಿದ ಕಾರಣ, ಇತರ ವಾಹನಗಳಿಗೆ ಚೈನ್ ಕಟ್ಟಿ ಟೆಂಪೊವನ್ನು ಮೇಲಕ್ಕೆ ಎಳೆಯಬೇಕಾಯಿತು. ಇದರಿಂದ ನೂರಾರು ವಾಹನಗಳು ಒಂದು ಗಂಟೆಗೂ ಹೆಚ್ಚು ಕಾಲ ಸಿಲುಕಬೇಕಾಯತು. ಅರಣ್ಯ ಇಲಾಖೆ ಮತ್ತು ಲೋಕೋಪ‍ಯೋಗಿ ಇಲಾಖೆಗಳು ಒಟ್ಟಾಗಿ ಉತ್ತಮ ರಸ್ತೆ ನಿರ್ಮಾಣ ಮಾಡಲು ಯೋಜನೆ ರೂಪಿಸಬೇಕು’ ಎಂದು ಪ್ರವಾಸಿಗರಾದ ನಂಜಪ್ಪ, ಶಾಂತು ಒತ್ತಾಯಿಸಿದರು.

ಕೃಷ್ಯಯ್ಯನಕಟ್ಟೆ: ರಸ್ತೆ ಬದಿ ಕುಸಿತ
ಯಳಂದೂರು ತಾಲ್ಲೂಕಿನ ಗುಂಬಳ್ಳಿ ಸಮೀಪದ ಕೃಷ್ಣಯ್ಯನಕಟ್ಟೆ ಜಲಾಶಯದ ರಸ್ತೆ ಸೋಮವಾರ ಕುಸಿದು ಕಂದಕ ನಿರ್ಮಾಣವಾಗಿದೆ.

ಸೆಪ್ಟೆಂಬರ್‌ನಲ್ಲಿ ಅಣೆಕಟ್ಟೆ ಕೋಡಿ ಬಿದ್ದಿತ್ತು. ಈ ವೇಳೆ ಹೆಚ್ಚಾದ ನೀರು ರಸ್ತೆ ಮಾರ್ಗವನ್ನು ಆವರಿಸಿತ್ತು. ನಂತರದ ದಿನಗಳಲ್ಲಿ ಸುರಿದ ನಿರಂತರ ವರ್ಷಧಾರೆಗೆ ಜಲಾಶಯದ ಸುತ್ತಮುತ್ತಲಿನ ಭೂಮಿ ಮುಳುಗಿತ್ತು. ಈಚಿನ ದಿನಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ನೀರು ನುಗ್ಗಿದ ಪರಿಣಾಮ ಭೂಮಿ ಕುಸಿತ ಸಂಭವಿಸಿದೆ.

ಎರಡು ದಶಕದ ನಂತರ ಹೆಚ್ಚು ನೀರು ಈ ಭಾಗದಲ್ಲಿ ಸಂಗ್ರಹವಾಗಿದೆ. ಅಂತರ್ಜಲ ಮಟ್ಟವೂ ಏರಿಕೆ ಕಂಡಿದೆ. ಪ್ರತಿ ದಿನ ರಸ್ತೆಯ ಎರಡೂ ಬದಿಯ ಕಾಲುವೆಗಳಲ್ಲಿ ಬೆಟ್ಟ ಗುಡ್ಡಗಳ ನೀರು ಹರಿಯುತ್ತಲೇ ಇದೆ. ಇದರಿಂದ ಭೂಮಿಯ ತೇವಾಂಶ ಹೆಚ್ಚಾಗಿ ಭೂಕುಸಿತ ಉಂಟಾಗಿದೆ.

‘ರಸ್ತೆ ಬದಿ ಕುಸಿದಿದ್ದು, ನಡುವೆ ನೀರು ಹರಿಯುತ್ತಿದೆ. ದೊಡ್ಡ ಕಂದಕ ನಿರ್ಮಾಣ ಆಗಿರುವುದರಿಂದ ಸವಾರರಿಗೆ ಅಪಾಯವೂ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆ ಸಮೀಪ ಕಲ್ಲುಗಳನ್ನು ಇಡಲಾಗಿದೆ. ಪ್ಲಾಸ್ಟಿಕ್ ಟೇಪ್ ಕಟ್ಟಿ ಸಂಭಾವ್ಯ ಅಪಾಯ ತಪ್ಪಿಸಲಾಗಿದೆ’ ಎಂದು ಎಆರ್‌ಎಫ್‌ಒ ರಮೇಶ್ ಹೇಳಿದರು.

ಶೀಘ್ರ ದುರಸ್ತಿಗೆ ಸೂಚನೆ: ತಹಶೀಲ್ದಾರ್‌
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಕೆ.ಬಿ.ಆನಂದಪ್ಪ ನಾಯಕ, ‘ಬಿಳಿಗಿರಿರಂಗನ ಬೆಟ್ಟದ ಬೋರೆಗವಿ ಮತ್ತು ನವಿಲು ಹಳ್ಳದ ಬಳಿ ಎರಡು ಕಡೆ ರಸ್ತೆ ಕುಸಿದಿದೆ. ಎರಡು ದಿನದ ಹಿಂದೆಯೇ ಗುಂಡಿ ಬಿದ್ದ ಸ್ಥಳಗಳನ್ನು ದುರಸ್ತಿ ಮಾಡುವಂತೆ ಸಂಬಂಧಪಟ್ಟ ಎಂಜಿನಿಯರ್‌ಗೆ ತಿಳಿಸಿದ್ದೇನೆ. ಕೃಷ್ಣಯ್ಯನ ಕಟ್ಟೆ ಸಮೀಪವು ರಸ್ತೆ ಕುಸಿದಿದ್ದು, ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT