ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಥೋತ್ಸವ ನಾಳೆ: ಗರುಡಾಗಮನ ಕಾತರ

ಬಿಳಿಗಿರಿರಂಗನಬೆಟ್ಟ ದೊಡ್ಡ ಜಾತ್ರೆಗೆ ಭಕ್ತರ ಆಗಮನ: ಮಿನಿ ಬಸ್ ಸಂಚಾರ
Last Updated 14 ಏಪ್ರಿಲ್ 2022, 15:46 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದಲ್ಲಿ ಆರು ವರ್ಷಗಳ ಬಳಿಕ ಸ್ವಾಮಿಯ ರಥೋತ್ಸವಕ್ಕೆ ಇನ್ನು ಒಂದು ದಿನವಷ್ಟೇ ಬಾಕಿದ್ದು, ಜಿಲ್ಲಾಡಳಿತ, ದೇವಾಲಯದ ಆಡಳಿತ ಅಂತಿಮ ಸಿದ್ಧತೆ ನಡೆಸಿದೆ.

ಶನಿವಾರ (ಏ.16) ಮಧ್ಯಾಹ್ನ ರಥೋತ್ಸವ ನಡೆಯಲಿದೆ.ಇದಕ್ಕಾಗಿ ದೇವಳದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ನೂತನ ದೇಗುಲ ಮತ್ತು ಹೊಸ ರಥ ಈ ಬಾರಿಯ ಪಧಾನ ಆಕರ್ಷಣೆ.

ಗುರುವಾರ ಶುದ್ಧ ಕುಡಿಯುವ ನೀರು ವ್ಯವಸ್ಥೆ, ಶೌಚಾಲಯ, ಆರೋಗ್ಯ ಮತ್ತು ತಾತ್ಕಾಲಿಕ ಪೊಲೀಸ್ ಠಾಣೆಗಳ ಆರಂಭಕ್ಕೆ ಚಾಲನೆ ನೀಡಲಾಗಿದೆ. ರಥದ ಬೀದಿ ತಳಿರು ತೋರಣಗಳಿಂದ ಕಂಗೊಳಿಸುತ್ತಿದೆ. ದೇವಳ ಬಣ್ಣಬಣ್ಣದ ಬೆಳಕಿನಲ್ಲಿ ಜಗಮಗಿಸುತ್ತಿದೆ. ತೇರಿನ ಆರಂಭ ಆಗುತ್ತಿದ್ದಂತೆ ಆಗಸದಲ್ಲಿ ಗರುಡ ದರ್ಶನ ತೋರುವುದು ಇಲ್ಲಿನ ವಾಡಿಕೆ. ಜನರ ಗದ್ದಲದ ನಡುವೆ ರಥಕ್ಕೆ ಪ್ರದಕ್ಷಿಣೆ ಹಾಕುವ ವಾಡಿಕೆ ಇದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತಗಣ ಸೇರಲಿದೆ. ರಥವು ಪೂರ್ವ ಮತ್ತು ಪಶ್ಚಿಮಾಭಿಮುಖವಾಗಿ ಸಂಚರಿಸುವುದು ಇಲ್ಲಿನ ವಿಶೇಷ.

'6 ವರ್ಷಗಳ ನಂತರ ಹೊಸ ತೇರಿನ ಉತ್ಸವ ಜರುಗುತ್ತಿದೆ. ಹಾಗಾಗಿ, ಭಕ್ತರ ಸಂಖ್ಯೆಯಲ್ಲೂ ಏರಿಕೆ ಆಗಲಿದೆ. ಹಾಗಾಗಿ, ರಂಗನಾಥನ ದರ್ಶನಕ್ಕೆ ಸಕಲರಿಗೂ ಅವಕಾಶ ಕಲ್ಪಿಸುವ ದೆಸೆಯಲ್ಲಿ ಕೆಲಸ ಆರಂಭಿಸಲಾಗಿದೆ. ದೇವಾಲಯಕ್ಕೆ ರಸ್ತೆ ಮತ್ತು ಮೆಟ್ಟಿಲಿನ ಮೂಲಕ ತೆರಳಲು ಅವಕಾಶ ಇದ್ದು, ಸರದಿ ಸಾಲಿನಲ್ಲಿ ಬರಲು ವ್ಯವಸ್ಥೆ ಮಾಡಲಾಗಿದೆ. ರಥ ಸಂಚರಿಸುವ ಹಾದಿ ಸುಸಜ್ಜಿತವಾಗಿದೆ' ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಮೋಹನ್ ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಥೋತ್ಸವದ ದಿನ ಸೋಲಿಗರು ತೇರನ್ನು ಸಿಂಗರಿಸುವ ಕಾಯಕ ಮಾಡಿದರೆ, ಸ್ಥಳೀಯ ನಾಯಕ ಜನಾಂಗದವರು ರಥದ ಸುಗಮ ಸಂಚಾರದ ನೇತೃತ್ವ ವಹಿಸಲಿದಾರೆ. ಅದೇ ರೀತಿ ವಿವಿಧ ಇಲಾಖೆಗಳು ರಥೋತ್ಸವಕ್ಕೆ ಬೇಕಾದ ವ್ಯವಸ್ಥೆಯನ್ನು ಪೂರೈಸಿದ್ದು, ಜಾತ್ರೆಯ ಸಡಗರವನ್ನು ಮತ್ತಷ್ಟು ಹೆಚ್ಚಿಸಿದೆ.

ನಾಳಿನ ಉತ್ಸವ: ‘ಗುರುವಾರ ಹಗಲು ಪಲ್ಲಕ್ಕಿ ಉತ್ಸವ, ರಾತ್ರಿ ಗರುಡೋತ್ಸವ ಹಾಗೂ ಮಂಗಳಾರತಿ ನಡೆಯಿತು. ಚೈತ್ರ ಶುಕ್ಲ ಶುಕ್ರವಾರ ಸಂಜೆ ಸಿಂಹ ವಾಹನ ಗಜೇಂದ್ರ ಮೋಕ್ಷ ಹಾಗೂ ಆನೆ ವಾಹನ ಮೆರವಣಿಗೆ ಸಾಗಲಿದೆ. ಶನಿವಾರ ಮಧ್ಯಾಹ್ನ ಜಾತ್ರೆಗೆ ಚಾಲನೆ ಸಿಗಲಿದ್ದು, ಅರವಟ್ಟಿಗೆ ಮತ್ತು ಪ್ರಸಾದ ವಿತರಣೆ ಹಾಗೂ ಅಮ್ಮನವರ ದರ್ಶನಕ್ಕೂ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಅರ್ಚಕ ರವಿಕುಮಾರ್ ತಿಳಿಸಿದರು.

ಖಾಸಗಿ ವಾಹನಕ್ಕೆ ಪ್ರವೇಶ ಇಲ್ಲ: ‘ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರದಿಂದ 100 ಸರ್ಕಾರಿ ಬಸ್ ಸಂಚರಿಸಲಿವೆ. ಖಾಸಗಿ ಬಸ್, ದ್ವಿಚಕ್ರ ವಾಹನ ಮತ್ತಿತರ ವಾಹನಗಳು ಚೆಕ್ ಪೋಸ್ಟ್ ತನಕ ತೆರಳಿ, ವಡಗೆರೆ ಗುಡ್ಡದ ಬಳಿ ನಿಲ್ಲಲಿವೆ. ಇಲ್ಲಿಂದ ಕೆಎಸ್ಆರ್ಟಿಸಿ ಮಿನಿ ಬಸ್‌ಗಳಲ್ಲಿ ಭಕ್ತರನ್ನು ಬೆಟ್ಟಕ್ಕೆ ಕರೆದೊಯ್ಯಲಿವೆ. ಇದರಿಂದ ವಾಹನ ದಟ್ಟಣೆಯನ್ನು ತಗ್ಗಿಸಿ, ಸುಗಮವಾಗಿ ಜನರು ರಥೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ’ ಎಂದು ಇಒ ಮೋಹನ್ಕುಮಾರ್ ತಿಳಿಸಿದರು.

ಚೆಕ್‌ಪೋಸ್ಟ್‌ನಿಂದ ಉಚಿತ ಬಸ್‌ ವ್ಯವಸ್ಥೆ
ಬ್ರಹ್ಮ ರಥೋತ್ಸವ ನಡೆಯಲಿರುವ ಶನಿವಾರ ಬಿಳಿಗಿರಿರಂಗನ ಬೆಟ್ಟದ ತಪ್ಪಲಿನಿಂದ ಬೆಟ್ಟದ ಮೇಲ್ಭಾಗಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಿರುವುದರಿಂದ ಬೆಟ್ಟದ ತಪ್ಪಲಿನಲ್ಲಿರುವ ಅರಣ್ಯ ತನಿಖಾ ಠಾಣೆಯಿಂದ ಸಾರ್ವಜನಿಕರು, ಭಕ್ತಾದಿಗಳಿಗೆ ಉಚಿತವಾಗಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ವಾಹನ ಸಂಚಾರ ದಟ್ಟಣೆ ತಡೆಯುವ ಉದ್ದೇಶದಿಂದ ಯಳಂದೂರು ಮಾರ್ಗವಾಗಿ ಗುಂಬಳ್ಳಿ ಅರಣ್ಯ ತನಿಖಾ ಠಾಣೆಯಿಂದ 15 ಬಸ್‌ ಹಾಗೂ ಚಾಮರಾಜನಗರದ ಮಾರ್ಗವಾಗಿ ಹೊಂಡರಬಾಳು ಅರಣ್ಯ ತನಿಖಾ ಠಾಣೆಯಿಂದ ಐದು ಉಚಿತ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT