ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿ: ಕಾಡಂಚಿನ ಅಣೆಕಟ್ಟೆಗಳಲ್ಲಿ ಮೀನುಗಾರಿಕೆ ನಿಷೇಧ?

ನೀರು ಹುಡುಕಿಕೊಂಡು ಬರುವ ಪ್ರಾಣಿಗಳಿಗೆ ತೊಂದರೆಯಾದಂತೆ ಮಾಡಲು ಕ್ರಮ
Last Updated 24 ಜನವರಿ 2021, 11:42 IST
ಅಕ್ಷರ ಗಾತ್ರ

ಯಳಂದೂರು/ಚಾಮರಾಜನಗರ: ಯಳಂದೂರು ತಾಲ್ಲೂಕಿನ ಬಿಆರ್‌ಟಿ ವ್ಯಾಪ್ತಿಯ ಕೆರೆ ಮತ್ತು ಅಣೆಕಟ್ಟೆಗಳಲ್ಲಿ ಇನ್ನು ಮುಂದೆ ಮೀನುಗಾರಿಕಾ ಚಟುವಟಿಕೆಗೆ ನಿಷೇಧ ಹೇರಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ಕೆರೆ ಹಾಗೂ ಜಲಾಶಯಗಳ ಸುತ್ತ ಮಾನವನ ಅಕ್ರಮ ಚಟುವಟಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ತಡೆಯೊಡ್ಡಿ, ವನ್ಯಜೀವಿಗಳ ಸ್ವಚ್ಛಂದ ವಿಹಾರಕ್ಕೆ ಅವಕಾಶ ಮಾಡಿಕೊಡುವ ಉದ್ದೇಶ ಅರಣ್ಯ ಇಲಾಖೆಯದ್ದು.

ಅರಣ್ಯದಂಚಿನ ಕೃಷ್ಣಯ್ಯನಕಟ್ಟೆ, ಬೆಲವತ್ತ ಡ್ಯಾಂ ಮತ್ತು ಗೌಡಹಳ್ಳಿ ಕೆರೆಗಳಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಮೀನುಗಾರರು ಇಲ್ಲಿ ಮೀನು ಹಿಡಿಯಲು ಕೊಪ್ಪರಿಗೆ ಮತ್ತುದೋಣಿಯ ಬಳಕೆ ಮಾಡುತ್ತಾರೆ. ಮೀನು ಹಿಡಿಯಲು ಕೆಲವೊಮ್ಮೆ ರಾತ್ರಿ ಪೂರ ಬಲೆ ಬಿಟ್ಟು, ಮುಂಜಾನೆ ಇಲ್ಲವೇ ಸಂಜೆ ಮೀನು ಸಂಗ್ರಹ ಮಾಡುತ್ತಿರುತ್ತಾರೆ. ಇದರಿಂದ ಹುಲಿ, ಜಿಂಕೆ,ಆನೆಗಳ ಮುಕ್ತ ಸಂಚಾರಕ್ಕೆ ಹಿನ್ನಡೆಯಾಗುತ್ತದೆ ಎಂಬುದು ಅರಣ್ಯ ಅಧಿಕಾರಿಗಳ ವಾದ.

ಅಣೆಕಟ್ಟೆಗಳ ಬಳಿ ಸಂಚರಿಸುವ ಪ್ರಾಣಿಗಳು ಬಲೆಗೆ ಸಿಲುಕಿ ಪ್ರಾಣಾಪಾಯ ಎದುರಿಸಿದ್ದವು. ನೀರಿನಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯಮತ್ತಿತರ ಪದಾರ್ಥಗಳು ವನ್ಯಜೀವಿಗಳ ಬದುಕಿಗೆ ಕಂಟಕವಾಗುತ್ತವೆ. ಈ ಕಾರಣದಿಂದ ಮೀನು ಹಿಡಿಯಲು ಅವಕಾಶ ನೀಡದಂತೆ ಪ್ರಾಣಿ ಪ್ರಿಯರು ಬಹು ವರ್ಷಗಳಿಂದ ಅರಣ್ಯಇಲಾಖೆಯನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ.

ಬಿಆರ್‌ಟಿಗೆ ಹೊಂದಿಕೊಂಡಿರುವ ಜಲಾಶಯ ಹಾಗೂ ಕೆರೆಗಳ ಸುತ್ತ ಜನ ಸಂಚಾರಕ್ಕೆ ಅರಣ್ಯ ಇಲಾಖೆ ಈಗಾಗಲೇ ನಿರ್ಬಂಧ ವಿಧಿಸಿದೆ.

ಮೀನುಗಾರಿಕೆಯಿಂದ ಆಗುವ ತೊಂದರೆಯ ಬಗ್ಗೆ ಇತ್ತೀಚೆಗೆ ಬಂಡೀಪುರ ವ್ಯಾಪ್ತಿಯಲ್ಲಿ ನುಗು ಜಲಾಶಯದಲ್ಲಿ ಸಂಭವಿಸಿದ ಘಟನೆಯನ್ನು ಉದಾಹರಣೆಯಾಗಿ ನೀಡುತ್ತಾರೆ ಅಧಿಕಾರಿಗಳು.

'ಬೇಸಿಗೆ ಕಾವು ಏರುತ್ತಿದ್ದಂತೆ ಕಾಡಿನಲ್ಲಿ ನೀರಿನ ಹರಿವು ಕಡಿಮೆಯಾಗುತ್ತದೆ. ನೀರು ಹುಡುಕಿಕೊಂಡು ಅರಣ್ಯದಂಚಿನ ಆಣೆಕಟ್ಟೆಗಳತ್ತವನ್ಯ ಜೀವಿಗಳು ಬರುತ್ತವೆ. ಈ ಸಂದರ್ಭದಲ್ಲಿ ನೀರಿನಲ್ಲಿ ಮೀನಿನ ಬಲೆ, ಇನ್ನಿತರ ಪ್ಲಾಸ್ಟಿಕ್‌ ತ್ಯಾಜ್ಯಗಳು ಪ್ರಾಣಿಗಳ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇರುತ್ತದೆ.ಇತ್ತೀಚಿಗೆ ಬಂಡೀಪುರದ ಬೇಗೂರು ಮತ್ತುನುಗು ವಲಯಗಳಲ್ಲಿ ಅಪಾಯಕ್ಕೆ ಸಿಲುಕಿದ್ದ ಎರಡು ಆನೆಗಳನ್ನು ಸಿಬ್ಬಂದಿ ರಕ್ಷಿಸಬೇಕಾಯಿತು’ ಎಂದು ಆರ್‌ಎಫ್‌ಒ ಲೋಕೇಶ್‌ ಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘2014-15ನೇ ಸಾಲಿನಿಂದ ಕೃಷ್ಣಯ್ಯನ ಕಟ್ಟೆಯಲ್ಲಿ ಮೀನುಗಾರಿಕಾ ಸಂಘಗಳು ಮತ್ಸೋಧ್ಯಮದಲ್ಲಿ ತೊಡಗಿವೆ. ಕೋವಿಡ್‌ ಕಾರಣದಿಂದಾಗಿ ಮೀನುಗಾರರ ಆರ್ಥಿಕತೆಗೆ ನೆರವಾಗಲು ಒಂದು ವರ್ಷ ಮೀನುಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. 2021-22ನೇ ಸಾಲಿನಲ್ಲಿ ಕಾಡಂಚಿನ ಜಲಾಶಯಗಳಲ್ಲಿ ಮೀನುಗಾರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಅಮೆಕೆರೆ ಅಣೆಕಟ್ಟೆಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡಿಲ್ಲ. ಬೆಲವತ್ತ ಆಣೆಕಟ್ಟು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಬಿ.ಶ್ವೇತಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಾರಿ ಅವಕಾಶ ನೀಡಿ: ‘ಈಗಾಗಲೇ ಕೆಲವೆಡೆ ಮೀನುಗಾರರು ಕಾಡಂಚಿನ ಕೆರೆಗಳಿಗೆ ಮೀನು ಬಿಟ್ಟಿದ್ದಾರೆ. ಒಳ್ಳೆಯ ಇಳುವರಿಯೂ ಬಂದಿದೆ. ಒಂದು ವೇಳೆ ಅರಣ್ಯ ಇಲಾಖೆ ಅವಕಾಶ ನೀಡದಿದ್ದರೆ ಮೀನುಗಾರಿಕೆ ನಂಬಿದವರಿಗೆ ತೊಂದರೆಯಾಗಲಿದೆ.ಪರಿಸರ ಸ್ನೀಹಿ ವಿಧಾನದಿಂದ ವನ್ಯ ಪ್ರಾಣಿಗಳಿಗೆ ಧಕ್ಕೆ ಆಗದಂತೆ ಮೀನು ಸಂಗ್ರಹ ಮಾಡಲು ಅವಕಾಶ ಕಲ್ಪಿಸಲಿ. ಈ ಬಾರಿ ಮೀನು ಸಂಗ್ರಹ ಮಾಡಲು ಅವಕಾಶ ನೀಡಬೇಕು’ ಎನ್ನುವುದು ಮೀನುಗಾರರ ಒತ್ತಾಯ.

ಪರಿಶೀಲಿಸಿ ಕ್ರಮ: ಡಿಸಿಎಫ್‌

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್‌ ಅವರು, ‘ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಕೆರೆ ಕಟ್ಟೆಗಳಲ್ಲಿ ಸಾಮಾನ್ಯವಾಗಿ ಮೀನುಗಾರಿಕೆಗೆ ಅವಕಾಶ ಇಲ್ಲ. ನಮ್ಮ ವ್ಯಾಪ್ತಿಯಲ್ಲೂ ಕೆಲವು ಜಲಾಶಯಗಳು ಹಾಗೂ ಕೆರೆಗಳು ಇವೆ. ಈ ಹಿಂದಿನಿಂದಲೇ ಅಲ್ಲಿ ಮೀನುಗಾರಿಕೆಗೆ ಅವಕಾಶ ನೀಡುತ್ತಿದ್ದರೆ, ದಿಢೀರ್‌ ಆಗಿ ಅದನ್ನು ರದ್ದು ಪಡಿಸಲು ಆಗುವುದಿಲ್ಲ. ಹಾಗಾಗಿ, ದಾಖಲೆಗಳು, ಹಿಂದಿನ ಆದೇಶಗಳನ್ನು ನೋಡಬೇಕಾಗುತ್ತದೆ. ಈ ವಿಚಾರದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT