ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಸಸ್ಯಕಾಶಿಯಲ್ಲಿ ಬಾಡುತ್ತಿದೆ ವನರಾಶಿ

ಬಿಆರ್‌ಟಿ: ಹೆಚ್ಚಾಗುತ್ತಿದೆ ಉಷ್ಣತೆ, ಇನ್ನೂ ಫಲಪುಷ್ಪ ಬಿಡದ ಗಿಡಮರಗಳು
Last Updated 10 ಮೇ 2020, 19:45 IST
ಅಕ್ಷರ ಗಾತ್ರ

ಯಳಂದೂರು:ಸಮುದ್ರ ಮಟ್ಟದಿಂದ ಐದು ಸಾವಿರ ಅಡಿ ಎತ್ತರದಲ್ಲಿರುವ ಬಿಳಿಗಿರಿ ರಂಗನತಿಟ್ಟು ಗಿರಿಧಾಮ ಹಲವು ಜೀವಸಂಕುಲವನ್ನು ಪೋಷಿಸುತ್ತಿದೆ. ವರ್ಷಪೂರ್ತಿ ತಂಪು ವಾತಾವರಣ ಹೊಂದಿರುವ ಗಿರಿಧಾಮದಲ್ಲಿ ಬಾರಿವರುಣ ಕಣ್ಣು ಮುಚ್ಚಾಲೆ ಆಟವಾಡುತ್ತಿದ್ದಾನೆ.‌ ಗಿಡಮರಗಳು ಫಲಪುಷ್ಪ ಬಿಡಲು ಮಳೆಗಾಗಿ ಕಾಯುತ್ತಿವೆ.

ಬಿಳಿಗಿರಿರಂಗನ ಕಾನನದಿಂದಾಗಿ ತಾಲ್ಲೂಕಿನ ವ್ಯಾಪ್ತಿಯ ಬಹುಪಾಲು ಭೂಭಾಗ, ವಿಶಿಷ್ಟ ಹವಾಮಾನದಿಂದ ಸದಾ ತಂಪಾಗಿದೆ. ಅದಕ್ಕೆ ಇಲ್ಲಿ ಸುರಿಯುವ ಭಾರಿ ಮಳೆ ಕಾರಣ. ಮೂರುತಿಂಗಳು ಬಿಟ್ಟು, ಉಳಿದ ಎಲ್ಲ ತಿಂಗಳುಗಳಲ್ಲೂ ಇಲ್ಲಿ ಮಳೆಯಾಗುವ ಕಾಲವಿತ್ತು.ಆದರೆ, ಒಂದು ದಶಕದಿಂದೀಚೆಗೆ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಸಾಗಿದೆ.

‘ಮತ್ತಿ, ನೆಲ್ಲಿ, ದಡಸಲು, ಹೊನ್ನೆ, ಅಳಲೆ, ದೊಳ್ಳಿ, ಚೌವೆ, ನೇರಳೆ, ಕರ್ವಾಡಿ, ಬೀಟೆ, ಕೆಸಿಲು, ಅಂಟುವಾಳ, ಕೆಂಡೆ, ತೇಗ, ಸಂಪಿಗೆ, ಜಾಲ, ಬೂರಗ, ಕಾಡುಗೇರು,ಗಂದಿಗೆ, ಮುತ್ತುಗ, ಕಂಚುವಾಳ, ಕಿಂಚಗ, ಕಕ್ಕೆ, ಇಚ್ಚಿ, ಕಾಂಧೂಪ ವೃಕ್ಷಗಳುಫೆಬ್ರುವರಿ–ಮೇ ನಡುವೆ ಹೂ ಅರಳಿಸಬೇಕು. ನಂತರ ಫಲ ಕಚ್ಚಬೇಕು. ಆದರೆ, ಈ ವರ್ಷ ಇನ್ನೂಸಮೃದ್ಧ ಮಳೆ ಸಿಂಚನವಾಗಿಲ್ಲ. ಹಾಗಾಗಿ, ಅಪರೂಪದ ವೃಕ್ಷ ಸಂಕುಲಗಳು ಹೂ ಅರಳಿಸುವಕಾಲಮಾನದಲ್ಲೂ ವ್ಯತ್ಯಾಸವಾಗುತ್ತಿದೆ’ ಎಂದು ‘ಏಟ್ರೀ’ ವಿಜ್ಞಾನಿಸಿದ್ದಪ್ಪಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘50 ವರ್ಷಗಳಿಂದ ವಿಜಿಕೆಕೆ ಆವರಣದಲ್ಲಿ ಇರುವ ಮಳೆ ಮಾಪಕದಿಂದ ಅಂಕಿ ಅಂಶ ಸಂಗ್ರಹಿಸಿಇಡಲಾಗುತ್ತಿದೆ. ಸರಾಸರಿ ವಾರ್ಷಿಕ 250 ಸೆಂ.ಮೀ ನಿಂದ 300 ಸೆಂ.ಮೀ ಮಳೆ ಸುರಿದರೆ ಜಲಮೂಲಗಳಲ್ಲಿ ವರ್ಷ ಪೂರ್ತಿ ನೀರು ನಿಲ್ಲುತ್ತದೆ. ಉಷ್ಣಾಂಶ ಯಾವಾಗಲೂ 20 ಡಿಗ್ರಿ ಆಸುಪಾಸಿನಲ್ಲಿ ಇರುತ್ತದೆ. ಇದರಿಂದ ವನ್ಯಜೀವಿಗಳಿಗೆ ಆಹಾರ ಸಮೃದ್ಧವಾಗಿ ಲಭಿಸುತ್ತದೆ. ಇದರಿಂದ ಇವುಗಳ ಸಂತಾನೋತ್ಪತಿ ಮತ್ತು ಸಸ್ಯ ರಾಶಿಗಳ ಬೀಜ ಪ್ರಸರಣಕ್ಕೂ ಕಾರಣವಾಗುತ್ತದೆ’ ಎಂದು ಸಸ್ಯತಜ್ಞ ರಾಮಾಚಾರಿ ಅವರು ಹೇಳಿದರು.

‘ಸೋಲಿಗರು ಗಿಡಮೂಲಿಕೆಗಳಿಂದ ವನೌಷಧ ತಯಾರಿಸುತ್ತಿದ್ದರು. ತುಂಬೆ, ದಡಸಲು, ನವಲಾದಿ, ಕಗ್ಗಲಿ ಮೊದಲಾದ ಸಸ್ಯಗಳ ನಾರು–ಬೇರುಗಳಿಂದ ಸಣ್ಣ ಕಾಯಿಲೆಗಳನ್ನು ಗುಣಪಡಿಸುತ್ತಿದ್ದರು. ಸಕಾಲದಲ್ಲಿ ಸುರಿಯದ ಮಳೆ ಮತ್ತು ಏರಿಕೆ ಕಂಡ ಉಷ್ಣಾಂಶದಿಂದಕಾನನದಲ್ಲಿ ವೃದ್ಧಿಸುತ್ತಿದ್ದ ವನ ಮೂಲಿಕೆಗಳ ಪ್ರಭೇದಗಳಲ್ಲೂ ಇಳಿಕೆಯಾಗಿದೆ’ ಎಂದು ಬಿಳಿಗಿರಿರಂಗನಬೆಟ್ಟದ ಮೂಲಿಕೆ ತಜ್ಞ ಬೊಮ್ಮಯ್ಯ ಹೇಳಿದರು.

‘ಅಪರೂಪದ ಜೀವ ಮತ್ತು ಸಸ್ಯ ಸಂಕುಲಗಳನ್ನು ಹೊಂದಿದ ಬಿಆರ್‌ಟಿ ಸಮೃದ್ಧ ಮಳೆಕಾಡಿನತಾಣ. ಮಳೆನೀರು ಸಾಕಷ್ಟು ಪ್ರಮಾಣದಲ್ಲಿ ಕೆರೆಕಟ್ಟೆಗಳಲ್ಲಿ ಸಂಗ್ರಹವಾದರೆ, ಬೇಸಿಗೆಯಲ್ಲಿ ಕಾಳ್ಗಿಚ್ಚು ಕಾಣಿಸದು,ಸಸ್ಯ ವೈವಿಧ್ಯವೂ ಉಳಿಯುತ್ತದೆ’ ಎಂದು ವಲಯ ಅರಣ್ಯಾಧಿಕಾರಿ ಮಹದೇವಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ ಪ್ರಮಾಣ ಏರಿಳಿತ
10 ವರ್ಷಗಳ ಮಳೆಯ ಅಂಕಿ ಅಂಶಗಳನ್ನು ಗಮನಿಸಿದರೆ,ಅರಣ್ಯ ಪ್ರದೇಶದಲ್ಲಿ ಮಳೆಯ ಪ್ರಮಾಣ ಏರುಪೇರು ಆಗಿರುವುದನ್ನು ಗಮನಿಸಬಹುದು.

2010ರಲ್ಲಿ 95.6 ಸೆಂ.ಮೀ, 2011–163.1 ಸೆಂ.ಮೀ, 2012– 100.7ಸೆಂ.ಮೀ,2013–166.6 ಸೆಂ.ಮೀ, 2014 –‌131.7 ಸೆಂ.ಮೀ, 2015– 141.9 ಸೆಂ.ಮೀ, 2016– 82.9 ಸೆಂ.ಮೀ, 2017–171.4 ಸೆಂ.ಮೀ, 2018
–90.5 ಸೆಂ.ಮೀ, 2019ರಲ್ಲಿ 132.1 ಸೆಂ.ಮೀಗಳಷ್ಟು ಮಳೆ ಬಿದ್ದಿದೆ. ಈ ವರ್ಷ ಮೇ ವರೆಗೆ 16.3ಸೆಂ.ಮೀಯಾಗಿದೆ.

1981ರಲ್ಲಿ ಅತೀ ಹೆಚ್ಚು 242.3 ಸೆಂ.ಮೀ ದಾಖಲಾಗಿದ್ದು, 2002ರಲ್ಲಿ ಅತ್ಯಂತ ಕಡಿಮೆ 56.7 ಸೆಂ.ಮೀ ಮಳೆಯಾಗಿದೆ. ವನಮೇಟಿ ಪರಿಸರದಲ್ಲಿ ಅತೀ ಹೆಚ್ಚು ಅಂದರೆ250 ಸೆಂ.ಮೀ ಮಳೆ ಸುರಿದ ದಾಖಲೆಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT