ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌.ಮಹೇಶ್‌ ರಾಜೀನಾಮೆಗೆ ಬಿಎಸ್‌ಪಿ ಆಗ್ರಹ

ರಮೇಶ್‌ ಜಾರಕಿಹೊಳಿ ಹೇಳಿಕೆಯಿಂದ ಶಾಸಕರ ಮುಖವಾಡ ಕಳಚಿದೆ– ಎಸ್‌.ಪಿ.ಮಹೇಶ್‌
Last Updated 31 ಮೇ 2020, 15:06 IST
ಅಕ್ಷರ ಗಾತ್ರ

ಚಾಮರಾಜನಗರ: ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ತಮ್ಮ ಪಾತ್ರವಿಲ್ಲ ಎಂದು ಸುಳ್ಳು ಹೇಳುತ್ತಾ ಜನರನ್ನು ಮತ್ತು ಬಿಎಸ್‌ಪಿ ಬೆಂಬಲಿಗರನ್ನು ದಿಕ್ಕು ತಪ್ಪಿಸುತ್ತಾ ಬಂದಿದ್ದ ಎನ್. ಮಹೇಶ್ ಅವರ ನಾಟಕ ಈಗ ಬದಲಾಗಿದ್ದು, ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಪಿ.ಮಹೇಶ್ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ನಡೆದ ಪಕ್ಷದ ತಾಲ್ಲೂಕು ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಸಮ್ಮಿಶ್ರ ಸರ್ಕಾರ ಉರುಳಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ಕೂಡ ಕಾರಣರು ಎಂದು ಸಚಿವ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಎನ್.ಮಹೇಶ್ ಅವರು ಸಚಿವರ ಮಾತಿಗೆ ಸಹಮತ ಸೂಚಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಲ್ಲಿ ತಾವು ಒಬ್ಬರು ಎಂದು ಒಪ್ಪಿಕೊಂಡಿದ್ದಾರೆ.ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಮಾಡಿದ ಸಂದರ್ಭದಲ್ಲಿ ತಾನು ಧ್ಯಾನ ಮಾಡಲು ಹೋಗಿದ್ದೆ. ಸರ್ಕಾರ ಪರವಾಗಿ ಮತ ಚಲಾಯಿಸಬೇಕು ಎಂದು ಪಕ್ಷದ ವರಿಷ್ಠೆ ಮಾಯಾವತಿ ಟ್ವೀಟ್ ಮೂಲಕ ನೀಡಿದ ಆದೇಶ ತಲುಪಿರಲಿಲ್ಲ ಎಂದು ಇದುವರೆಗೆ ಸುಳ್ಳು ಹೇಳಿಕೊಂಡು ಬಂದಿದ್ದ ಎನ್ಅವರು ಶಾಸಕರಾಗಿ ಮುಂದುವರೆಯುವ ನೈತಿಕತೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಹೇಶ್‌ ಅವರನ್ನು ಸಮಾಜ ಕಲ್ಯಾಣ ಸಚಿವರಾಗಿ ಮಾಡಬೇಕು ಎಂದು ಷರತ್ತು ಹಾಕಿದ್ದರೂ ಎನ್.ಮಹೇಶ್ ಅವರೇ ಮಂತ್ರಿ ಸ್ಥಾನ ನಿರಾಕರಿಸಿದರು ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಸಚಿವ ಸ್ಥಾನ ಪಡೆದರೆ ತಾವು ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿರುವ ಗುಟ್ಟು ರಟ್ಟಾಗುತ್ತದೆ ಎನ್ನುವ ಕಾರಣದಿಂದಲೇ ಮಹೇಶ್‌ ಅವರು ಸಚಿವ ಸ್ಥಾನ ಒಪ್ಪಿಕೊಂಡಿಲ್ಲ ಎನ್ನುವ ಸತ್ಯ ಈಗ ಬಯಲಾಗಿದೆ. ಮಾತೆತ್ತಿದರೆ, ‘ನಾನು ಅಂಬೇಡ್ಕರ್‌ವಾದಿ, ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಂ ಅನುಯಾಯಿ. ನಾನು ಯಾರಿಗೂ ಮಾರಾಟವಾಗಿಲ್ಲ. ನನ್ನ ತಪ್ಪಿಲ್ಲದೇ ಮಾಯಾವತಿ ಅವರು ಪಕ್ಷದಿಂದ ನನ್ನನ್ನು ಉಚ್ಚಾಟಿಸಿದ್ದಾರೆ’ ಎಂದು ಹೇಳಿಕೊಂಡು ಬಂದಿದ್ದ ಎನ್.ಮಹೇಶ್ ಮುಖವಾಡವನ್ನು ಸಚಿವ ರಮೇಶ್ ಜಾರಕಿಹೂಳಿ ಹೇಳಿಕೆ ಕಳಚಿದೆ’ ಎಂದು ಅವರು ಹೇಳಿದರು.

ರಮೇಶ್ ‌ಜಾರಕಿಹೊಳಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಗೆದ್ದು ಸಚಿವರಾಗಿದ್ದಾರೆ. ಎನ್.ಮಹೇಶ್‌ ಅವರಿಗೆ ತಾಕತ್ತಿದ್ದರೆ ಬಿಎಸ್‌ಪಿ ಆನೆಯ ಗುರುತಿನಲ್ಲಿ ಗೆದ್ದಿರುವ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಅಥವಾ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಮಂತ್ರಿಯಾಗಲಿ’ ಎಂದು ಮಹೇಶ್‌ ಅವರು ಸವಾಲು ಹಾಕಿದರು.

ಬಿಎಸ್‌ಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ದೊಡ್ಡರಾಯಪೇಟೆ ಸಿದ್ದರಾಜು, ಮುಖಂಡರಾದ ಆಶ್ರೀತ್, ರವಿ ಕೋಡಿಉಗನೆ, ಶಿವಣ್ಣ ದೇವಾಲಪುರ, ಹಿರಿಯ ಮುಖಂಡರಾದ ಚಾಮಯ್ಯ, ದೇವರಾಜು ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT