ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಧಾರದ ಬಗ್ಗೆ ಪಕ್ಷದೊಳಗೆ ಪರ–ವಿರೋಧ

ವಿಶ್ವಾಸ ಮತಯಾಚನೆಗೆ ಎನ್‌.ಮಹೇಶ್‌ ಗೈರು: ಬಿಎಸ್‌ಪಿ ಕಾರ್ಯಕರ್ತರಲ್ಲಿ ಮೂಡಿದ ಗೊಂದಲ
Last Updated 24 ಜುಲೈ 2019, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಸದನಕ್ಕೆ ಗೈರಾಗಿ, ಪಕ್ಷದ ಮುಖ್ಯಸ್ಥರ ಆದೇಶ ಉಲ್ಲಂಘನೆಯ ಆರೋಪದಲ್ಲಿ ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿರುವ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರ ವಿಚಾರದಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ಪರ–ವಿರೋಧದ ಮಾತುಗಳು ಕೇಳಿ ಬರುತ್ತಿವೆ.

ಪಕ್ಷದ ಕಟ್ಟಾ ಬೆಂಬಲಿಗರು ಮಹೇಶ್‌ ಅವರು ಸದನಕ್ಕೆ ಗೈರಾಗಿದ್ದನ್ನು ಖಂಡಿಸಿದ್ದಾರೆ. ‘ಮಾಯಾವತಿ ಅವರು ಹೇಳಿದ ಹಾಗೆ ನಡೆದುಕೊಳ್ಳುತ್ತೇನೆ’ ಎಂದು ಹೇಳುತ್ತಿದ್ದವರು ಯಾಕೆ ಈ ರೀತಿ ಮಾಡಿದರು ಎಂದು ಪ್ರಶ್ನಿಸುತ್ತಿದ್ದಾರೆ. ‘ಸಂವಹನ ಕೊರತೆಯಿಂದ ಸದನಕ್ಕೆ ಗೈರು ಆದೆ’ ಎಂದು ಎನ್‌.ಮಹೇಶ್‌ ಅವರು ನೀಡಿರುವ ಕಾರಣವನ್ನು ಒಪ್ಪಲು ಅವರು ಸಿದ್ಧರಿಲ್ಲ.

ಇತ್ತ ಎನ್‌.ಮಹೇಶ್‌ ಅವರ ಕಟ್ಟಾ ಬೆಂಬಲಿಗರು ಅವರ ಬೆನ್ನಿಗೆ ನಿಂತಿದ್ದಾರೆ. ಸದನಕ್ಕೆ ಗೈರಾದ ನಿರ್ಧಾರ ಸರಿ ಎಂದು ವಾದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಮಹೇಶ್‌ ಅವರನ್ನು ಉಚ್ಚಾಟನೆ ಮಾಡುವ ನಿರ್ಧಾರವನ್ನು ಮಾಯಾವತಿಯವರು ತೆಗೆದುಕೊಳ್ಳಬಾರದಿತ್ತು ಎಂದು ಹೇಳುತ್ತಿದ್ದಾರೆ.

‘ಮಹೇಶಣ್ಣ ಅವರು ಸದನಕ್ಕೆ ಹೋಗಿದ್ದರೂ ಮೈತ್ರಿ ಸರ್ಕಾರಕ್ಕೆ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಗೆಲುವು ಸಿಗುತ್ತಿರಲಿಲ್ಲ. ಹಾಗಾಗಿ ಅಣ್ಣನ ನಡೆ ಸರಿಯಾಗಿಯೇ ಇದೆ. ಹಾಗಿದ್ದರೂ ಮಾಯಾವತಿಯವರು ಈ ನಿರ್ಧಾರ ಕೈಗೊಂಡಿದ್ದಾರೆ. ಇದು ತಾತ್ಕಾಲಿಕ. ಎಲ್ಲವೂ ಸರಿಯಾಗಲಿದೆ. ಬಿಎಸ್‌ಪಿ ಎಂದರೆ ನಮಗೆ ಮಹೇಶಣ್ಣ. ಅವರಿಗೇ ನಮ್ಮ ಬೆಂಬಲ’ ಎಂದು ಹೇಳುತ್ತಿದ್ದಾರೆ.

ಅತ್ತ‍ಪಕ್ಷಕ್ಕೂ ನಿಷ್ಠರಾಗಿ, ಇತ್ತ ಮಹೇಶ್ ಅವರಿಗೂ ಆಪ್ತರಾಗಿರುವ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಮೌನಕ್ಕೆ ಶರಣಾಗಿದ್ದಾರೆ.

‘ಈ ರೀತಿ ಯಾಕೆ ಆಯಿತು ಎಂಬುದೇ ಗೊತ್ತಾಗುತ್ತಿಲ್ಲ. ಮಹೇಶಣ್ಣ ಯಾಕೆ ಗೈರು ಹಾಜರಾದರೂ ಎಂಬುದೂ ತಿಳಿಯುತ್ತಿಲ್ಲ. ನಮ್ಮ ಜೊತೆ ಈ ವಿಚಾರವಾಗಿ ಅವರು ಮಾತನಾಡಲೂ ಇಲ್ಲ. ಒಟ್ಟು ಗೊಂದಲಮಯವಾಗಿದೆ’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಕ್ರೋಶ: ಎನ್‌.ಮಹೇಶ್‌ ಅವರು ತೆಗೆದುಕೊಂಡಿರುವ ನಿಲುವಿನ ಬಗ್ಗೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಪ್ರಗತಿಪರ ಚಿಂತನೆಯುಳ್ಳವರು ಕೂಡ ಎನ್‌.ಮಹೇಶ್‌ ನಡೆಗೆ ಅಚ್ಚರಿ ವ್ಯಕ್ತಪಡಿಸುವುದರ ಜೊತೆಗೆ, ಅವರ ನಿಲುವನ್ನು ವಿರೋಧಿಸಿದ್ದಾರೆ.

‘ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮಾಯಾವತಿ ಅವರು ಸೂಚಿಸಿದ್ದಾಗ, ತಡ ಮಾಡದೇ ಪದ ತ್ಯಾಗ ಮಾಡಿದ್ದ ಎನ್‌.ಮಹೇಶ್‌ ಅವರಿಗೆ, ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂಬ ಪಕ್ಷದ ಮುಖ್ಯಸ್ಥರ ಸೂಚನೆಯನ್ನು ಯಾಕೆ ಪಾಲಿಸಲು ಆಗಲಿಲ್ಲ’ ಎಂಬುದು ಅವರ ಪ್ರಶ್ನೆ.

‘ಸದನದಲ್ಲಿ ಯಾರಿಗೂ ಬೆಂಬಲ ನೀಡಬೇಕಾಗಿರಲಿಲ್ಲ. ಕನಿಷ್ಠ ಪಕ್ಷ ಹಾಜರಾಗಿ ಮೂರೂ ಪಕ್ಷಗಳ ವಿರುದ್ಧ, ಮುಖಂಡರ ನಡವಳಿಕೆಯ ಬಗ್ಗೆ ಮಾತನಾಡಿ ರಾಜ್ಯದ ಗಮನ ಸೆಳೆಯಲು ಅವರಿಗೆ ಅವಕಾಶ ಇತ್ತು. ರಾಜ್ಯದ ರಾಜಕೀಯ ಸ್ಥಿತಿ, ಕುದುರೆ ವ್ಯಾಪಾರ, ಶಾಸಕರಿಗೆ ಒಡ್ಡಲಾಗುತ್ತಿರುವ ಆಮಿಷ, ಪಕ್ಷಾಂತರ, ಅಧಿಕಾರದ ದಾಹದ ಬಗ್ಗೆ ಸದನದ ಮುಂದೆ ಎಳೆ ಎಳೆಯಾಗಿ ಬಿಚ್ಚಿಡಬಹುದಿತ್ತು. ಅದು ಬಿಟ್ಟು, ಸದನಕ್ಕೆ ಗೈರು ಆಗುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ಇದು ಪಕ್ಷದ ತತ್ವ ಸಿದ್ಧಾಂತ ಹಾಗೂ ಸ್ವತಃ ಮಹೇಶ್‌ ಅವರು ದಶಕಗಳಿಂದ ಪಾಲಿಸಿಕೊಂಡು ಬಂದಿದ್ದ ಸಿದ್ಧಾಂತಕ್ಕೆ ವಿರುದ್ಧವಾದ ನಡೆಯಲ್ಲವೇ? ಇವರ ಅಂಬೇಡ್ಕರ್‌ ವಾದ ಈಗ ಎಲ್ಲಿ ಹೋಯಿತು’ ಎಂದು ಅನೇಕರು ಖಾರವಾಗಿ ಪ್ರಶ್ನಿಸಿದ್ದಾರೆ.

ಮುಂದಿನ ನಡೆ: ಮೂಡಿದ ಕುತೂಹಲ

‘ಉಚ್ಚಾಟನೆ ಕೇವಲ ತಾತ್ಕಾಲಿಕ. ಖುದ್ದು ಮಾಯಾವತಿ ಅವರನ್ನು ಭೇಟಿಯಾಗಿ ಎಲ್ಲವನ್ನೂ ವಿವರಿಸುತ್ತೇನೆ. ಎಲ್ಲವೂ ಸರಿಯಾಗಲಿದೆ. ಪಕ್ಷದಲ್ಲೇ ಇರುತ್ತೇನೆ’ ಎಂದು ಎನ್‌.ಮಹೇಶ್‌ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಆದರೆ, ಮಾಯಾವತಿ ಅವರು ತೆಗೆದುಕೊಂಡ ನಿರ್ಧಾರವನ್ನು ವಾಪಸ್‌ ಪಡೆಯಲಿದ್ದಾರೆಯೇ ಎಂಬುದು ಪ್ರಶ್ನೆ.

ಸಚಿವ ಸ್ಥಾನಕ್ಕೆ ಎನ್‌.ಮಹೇಶ್‌ ಅವರು ರಾಜೀನಾಮೆ ನೀಡಿದ ನಂತರ ಇಬ್ಬರ ನಡುವಿನ ಸಂಬಂಧ ಹಳಸಿದೆ ಎಂದು ಹೇಳಲಾಗುತ್ತಿದೆ.‌ಪಕ್ಷದ ಚಟುವಟಿಕೆಗಳಲ್ಲಿ ಮಹೇಶ್‌ ಅವರಿಗೆ ಪ್ರಾಶಸ್ತ್ಯ ನೀಡಲಾಗುತ್ತಿಲ್ಲ. ಇದು ಮಹೇಶ್‌ ಅವರಿಗೆ ಬೇಸರ ತರಿಸಿದೆ ಎಂದು ಹೇಳುತ್ತಾರೆ ಮುಖಂಡರು.

ಒಂದು ವೇಳೆ, ಮಾಯಾವತಿ ಅವರು ನಿರ್ಧಾರ ಬದಲಿಸದಿದ್ದರೆ ಮಹೇಶ್‌ ಅವರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.ಉಚ್ಚಾಟನೆ ಆಗಿರುವುದರಿಂದ ಅವರ ಶಾಸಕ ಸ್ಥಾನಕ್ಕೆ ಧಕ್ಕೆ ಇಲ್ಲ. ಹಾಗಾಗಿ ಶಾಸಕ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT