ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಎಲ್ಲ ಕ್ಷೇತ್ರಗಳಲ್ಲೂ ಬಿಎಸ್‌ಪಿ ಸ್ಪರ್ಧೆ: ನಾಗಯ್ಯ

ಜಿಲ್ಲೆ ನಾಲ್ಕೂ ಕ್ಷೇತ್ರಗಳಿಗೆ ಸ್ಪರ್ಧೆ, ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಲು ಇದೇ 25 ಕೊನೆಯ ದಿನ.
Last Updated 20 ಡಿಸೆಂಬರ್ 2022, 5:30 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಕ್ಷ ಸ್ಪರ್ಧಿಸಲಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನಾಗಯ್ಯ ಸೋಮವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಳ್ಳೇಗಾಲ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ. ಎರಡೂ ಕ್ಷೇತ್ರಗಳಲ್ಲಿ ಗೆಲುವಿನ ಶ್ರಮವಹಿಸುತ್ತೇವೆ’ ಎಂದರು.

ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ:ಪಕ್ಷದ ವರಿಷ್ಠೆ ಮಾಯಾವತಿಯವರ ನಾಯಕತ್ವದಲ್ಲಿ, ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನದ ಆಶಯದ ಮೇಲೆ ನಂಬಿಕೆಯಿಟ್ಟು ರಾಜ್ಯದ 224 ಕ್ಷೇತ್ರಗಳಿಗೆ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ಪಕ್ಷದ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಕೆಗೆ ಇದೇ 25 ಕೊನೆಯ ದಿನ’ ಎಂದು ಹೇಳಿದರು.

25 ಕ್ಷೇತ್ರ ಗೆಲ್ಲುವ ಗುರಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 25 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯನ್ನು ಪಕ್ಷ ಹೊಂದಿದೆ. ಅದಕ್ಕಾಗಿ ಸಿದ್ಧತೆಗಳನ್ನೂ ಮಾಡಲಾಗಿದೆ ಎಂದು ನಾಗಯ್ಯ ಹೇಳಿದರು.

ಇದೇ 27ರಂದು ಬೆಂಗಳೂರಿನಲ್ಲಿ ಪಕ್ಷದ ರಾಷ್ಟ್ರೀಯ ಸಂಘಟಕರಾದ ಆಕಾಶ್ ಆನಂದ್ ನೇತೃತ್ವದಲ್ಲಿ ಪಕ್ಷದ ಮುಖಂಡರ ಹಾಗೂ ಪದಾಧಿಕಾರಿಗಳ ಸಭೆ ನಡೆಯಲಿದೆ. ಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಸಂಬಂಧ ಸಮಗ್ರವಾದ ಚರ್ಚೆ ನಡೆಯಲಿದೆ ಎಂದರು.

‘ದೇಶವನ್ನು ಆಳಿದ ಕಾಂಗ್ರೆಸ್, ಬಿಜೆಪಿ,ಜೆಡಿಎಸ್‌ ಪಕ್ಷಗಳು ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಿಲ್ಲ. ಈ ಪಕ್ಷದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆದುಕೊಂಡಿವೆ’ ಎಂದು ಆಪಾದಿಸಿದರು.

‘ದೇಶ ಹಾಗೂ ರಾಜ್ಯದಲ್ಲಿ ಧರ್ಮ ಧರ್ಮಗಳ ನಡುವೆ ದ್ವೇಷ ಹರಡುವ ಕೆಲಸ ನಡೆಯುತ್ತಿದೆ. ಕೋಮುವಾದವನ್ನು ಹುಟ್ಟು ಹಾಕಿ ಜನರ ನಡುವೆ ಕಂದಕ ನಿರ್ಮಿಸಲಾಗುತ್ತಿದೆ. ಜನರ ಪರ ಕೆಲಸಗಳನ್ನು ಮಾಡದೆ ಕೆಲವು ಕಾರ್ಪೊರೇಟ್‌ ವ್ಯಕ್ತಿಗಳ ಸೇವೆ ಮಾಡಲಾಗುತ್ತಿದೆ’ ಎಂದರು.

‘ಕೋಮುವಾದ, ಭ್ರಷ್ಟತೆ, ಆಡಳಿತಾರೂಢರ ನಿರ್ಲಕ್ಷ್ಯ, ಸಮಾಜದಲ್ಲಿರುವ ಜೀವಂತ ಸಮಸ್ಯೆಗಳ ಬಗ್ಗೆ ಪಕ್ಷವು ಜನರಿಗೆ ಮನವರಿಕೆ ಮಾಡಿಕೊಡಲಿದೆ. ಇತರೆ ಪಕ್ಷಗಳ ಜನವಿರೋಧಿ ನಿಲುವುಗಳ ಕುರಿತು ಅರಿವು ಮೂಡಿಸಲಿದೆ’ ಎಂದು ನಾಗಯ್ಯ ಹೇಳಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ತಾಲ್ಲೂಕು ಅಧ್ಯಕ್ಷ ಅಮಚವಾಡಿ ಪ್ರಕಾಶ್, ತಾಲ್ಲೂಕು ಉಪಾಧ್ಯಕ್ಷ ಗಗನ್‌ಚಂದ್ರಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT