ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಅಭಿವೃದ್ಧಿ; ಸೌಕರ್ಯದ ನಿರೀಕ್ಷೆ

ಸರ್ಕಾರಿ ಕಚೇರಿ ಸ್ಥಳಾಂತರ, ಸಾರಿಗೆ ಸೌಲಭ್ಯಕ್ಕೆ ಬಲ, ಹೊಗೇನಕಲ್‌ ಅಭಿವೃದ್ಧಿಯ ಆಶಯ
Last Updated 20 ಫೆಬ್ರುವರಿ 2022, 16:40 IST
ಅಕ್ಷರ ಗಾತ್ರ

ಹನೂರು: ಪ್ರತ್ಯೇಕ ತಾಲ್ಲೂಕು ಎಂಬ ಘೋಷಣೆಗಷ್ಟೇ ಸೀಮಿತವಾಗಿರುವ ಹನೂರಿನ ಜನರು ಈ ಬಾರಿಯ ಬಜೆಟ್‌ ನಲ್ಲಾದರೂ ತಾಲ್ಲೂಕಿಗೆ ಏನಾದರೂ ಕೊಡುಗೆ ಇರಬಹುದೇ? ಎಂಬ ಆಸೆ ಕಂಗಳಿಂದ ಎದುರು ನೋಡುತ್ತಿದ್ದಾರೆ.

ಭೌಗೋಳಿಕವಾಗಿ ಹೆಚ್ಚು ವಿಸ್ತಾರ ವಾಗಿರುವ, ಕಾಡಿನಿಂದಲೇ ಕೂಡಿರುವ ತಾಲ್ಲೂಕು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಯಾವ ಸೌಲಭ್ಯಗಳೂ ಇಲ್ಲಿ ಸರಿ ಯಾಗಿ ಜನರಿಗೆ ಸಿಗುತ್ತಿಲ್ಲ. ಹನೂರು ತಾಲ್ಲೂಕು ಕೇಂದ್ರವಾಗಿದ್ದರೂಬಿಇಒ, ತಹಶೀಲ್ದಾರ್, ಇಒ, ಖಜಾನೆ ಕಚೇರಿ ಗಳನ್ನು ಬಿಟ್ಟು ಉಳಿದ ಯಾವುದೇ ಕಚೇರಿ ಆರಂಭವಾಗಿಲ್ಲ.ಜನರು ತಮ್ಮ ಕೆಲಸಗಳಿಗಾಗಿ ಕೊಳ್ಳೇಗಾಲಕ್ಕೆ ಅಲೆಯ ಬೇಕಾದ ಪರಿಸ್ಥಿತಿ ಇದೆ.

ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಒಂದೆಡೆಯಾದರೆ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಕೊರತೆ ತಾಲ್ಲೂಕಿನ ಜನತೆಯನ್ನು ಹೈರಾಣಾ ಗಿಸಿದೆ.

ಚಿಕಿತ್ಸೆಗಾಗಿ ಅಲೆದಾಟ: ತಾಲ್ಲೂಕು ವ್ಯಾಪ್ತಿಯಲ್ಲಿ 24 ಗ್ರಾಮ ಪಂಚಾಯಿತಿ ಗಳಿವೆ. ಬಹುತೇಕ ಅರಣ್ಯದಿಂದಲೇ ಆವೃತವಾಗಿರುವ ಇಲ್ಲಿನ ಜನರಿಗೆ ವಾಹನ ವ್ಯವಸ್ಥೆಯೇ ಅತಿ ದೊಡ್ಡ ಸಮಸ್ಯೆ ಯಾಗಿ ಪರಿಣಮಿಸಿದೆ. ಮಹದೇಶ್ವರ ಬೆಟ್ಟದ ತಪ್ಪಲಿ ನಲ್ಲಿರುವ ಗ್ರಾಮಗಳ ಜನರು ತುರ್ತು ಸಂದರ್ಭದಲ್ಲಿ ವಾಹನವಿಲ್ಲದೇ ಗರ್ಭಿಣಿಯರನ್ನು, ವೃದ್ಧರನ್ನು ಡೋಲಿ ಕಟ್ಟಿಕೊಂಡು ಆಸ್ಪತ್ರೆಗೆ ಸಾಗಿಸಿರುವ ಘಟನೆ ಸಾಕಷ್ಟು ನಡೆದಿವೆ. ಮೂರ್ನಾಲ್ಕು ದಿನದ ಹಿಂದಷ್ಟೇ ಕೆರೆದಿಂಬ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡು ವಾಹನವಿಲ್ಲದೇ ಸಂಬಂಧಿಕರು ಆಕೆಯನ್ನು ಹೊತ್ತು ಕೊಂಡೇ ಆಸ್ಪತ್ರೆಗೆ ಸಾಗಿಸಿದ್ದಾರೆ.

ಮಹದೇಶ್ವರ ಬೆಟ್ಟ, ಕೌದಳ್ಳಿ, ರಾಮಾಪುರ, ಮಾರ್ಟಳ್ಳಿ, ಕೂಡ್ಲೂರು, ಮಿಣ್ಯಂ ಮುಂತಾದ ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ ಇಲ್ಲಿಯೂ ಜನರಿಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ. ಸಿಬ್ಬಂದಿ ಕೊರತೆಯಿಂದಾಗಿ ಎರಡೆರಡು ಆಸ್ಪತ್ರೆಗಳಿಗೆ ಒಬ್ಬೊಬ್ಬ ವೈದ್ಯರೇ ಕರ್ತವ್ಯ ನಿರ್ವಹಿಸಬೇಕಿದೆ.

ತಾಲ್ಲೂಕು ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದರ ಜೊತೆಗೆ ಇಡೀ ತಾಲ್ಲೂಕಿನ ಆರೋಗ್ಯ ಸೇವೆ ಬಲ ಪಡಿಸಬೇಕಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡ ಬೇಕು ಎಂಬುದು ಜನರ ಒತ್ತಾಯ.

ಮರೀಚಿಕೆಯಾದ ಸಾರಿಗೆ ವ್ಯವಸ್ಥೆ: ಮಹ ದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಎಂಬುದು ಇಂದಿಗೂ ಕನಸಾಗಿಯೇ ಉಳಿದಿದೆ. ಉನ್ನತ ಶಿಕ್ಷಣ, ಚಿಕಿತ್ಸೆಗಾಗಿ ಇಂದಿಗೂ ಅಲ್ಲಿನ ಜನ ಹತ್ತಾರು ಕಿ.ಮೀ. ಕಾಡಿನೊಳಗೆ ಕಾಲ್ನಡಿಗೆಯಲ್ಲೇ ಬರಬೇಕು.

ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು, ಅಸ್ತೂರು, ಹೂಗ್ಯಂ, ಮಿಣ್ಯಂ, ಪಿ.ಜಿ.ಪಾಳ್ಯ ಮುಂತಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸಂಪರ್ಕ ಸಾರಿಗೆ ವ್ಯವಸ್ಥೆಯಿಲ್ಲ. ವಿದ್ಯಾರ್ಥಿಗಳು, ಜನರು ವಿರಳವಾಗಿ ಸಂಚರಿಸುವ ವಾಹನಕ್ಕಾಗಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಭರವಸೆಯಾಗಿಯೇ ಉಳಿದ ಹೊಗೇನಕಲ್ ಅಭಿವೃದ್ಧಿ: ತಾಲ್ಲೂಕಿಗೆ ಕಳಶಪ್ರಾಯವಾಗಿರುವ ಹೊಗೇನಕಲ್ ಜಲಪಾತ ಅಭಿವೃದ್ಧಿ ಭರವಸೆಯಾಗಿಯೇ ಉಳಿದಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಎಚ್.ಎಸ್ ಮಹದೇವಪ್ರಸಾದ್ ಅವರು ಜಲಪಾತವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ತಯಾರಿಸುವಂತೆ ಸೂಚಿಸಿದ್ದರು. ಆದರೆ ಅವರ ನಿಧನದ ಬಳಿಕ ಯೋಜನೆ ನನೆಗುದಿಗೆ ಬಿದ್ದಿದೆ. ಈ ಬಾರಿಯ ಬಜೆಟ್‌ನಲ್ಲಾದರೂ ಈ ಯೋಜನೆಗೆ ಮನ್ನಣೆ ಸಿಗುವುದೇ ಎಂಬ ನಿರೀಕ್ಷೆಯೂ ತಾಲ್ಲೂಕಿನ ಜನರಲ್ಲಿದೆ.

‘ಮಹದೇಶ್ವರ ಬೆಟ್ಟ ಪಂಚಾಯಿತಿ ವ್ಯಾಪ್ತಿಗೆ ಬರುವ, ಅರಣ್ಯದಲ್ಲಿರುವ 10ಕ್ಕೂ ಹೆಚ್ಚು ಹಳ್ಳಿಗಳ ಜನರು ಕನಿಷ್ಠ ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಅವರಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಯೋಚಿಸಬೇಕು’ ಎಂಬ ಒತ್ತಾಯವನ್ನು ಪ್ರಜ್ಞಾವಂತರು ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಳೆ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಕೃಷಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ನೀರಾವರಿ ಯೋಜನೆ ಜಾರಿಗೆ ತರಬೇಕಿದೆ. ಕೆರೆ ತುಂಬಿಸುವ ಯೋಜನೆಯೂ ಅನುಷ್ಠಾನ ಗೊಳ್ಳಬೇಕಿದೆ.

ಪುನರ್ವಸತಿ: ಚಂಗಡಿ ಗ್ರಾಮಸ್ಥರ ನಿರೀಕ್ಷೆ

ಅರಣ್ಯ ಇಲಾಖೆ ರೂಪಿಸಿರುವ ಮಹತ್ವಕಾಂಕ್ಷೆಯ ಚಂಗಡಿ ಸ್ಥಳಾಂತರ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂಬ ಒತ್ತಾಯವನ್ನು ಅಲ್ಲಿನ ನಿವಾಸಿಗಳು ಹಾಗೂ ರೈತ ಸಂಘದ ಮುಖಂಡರು ಮಾಡುತ್ತಲೇ ಬಂದಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ.

ಮಲೆ ಮಹದೇಶ್ವರ ವನ್ಯಧಾಮದಲ್ಲಿರುವ ಕುಗ್ರಾಮ ಚಂಗಡಿಯ ಜನರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈಗಾಗಲೇ ಜಾಗ ಗುರುತಿಸಿ, ಸರ್ಕಾರಕ್ಕೆ ಸಮಗ್ರ ಯೋಜನಾ ವರದಿ ಸಲ್ಲಿಸಿದೆ. ವರದಿ ಸಲ್ಲಿಸಿ 6 ತಿಂಗಳಾದರೂ ಸರ್ಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗ್ರಾಮದ ಸ್ಥಳಾಂತರ ಯೋಜನೆಗೆ ₹ 35 ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಗ್ರಾಮೀಣ ರಸ್ತೆಗಳಿಗೆ ಕಾಯಕಲ್ಪ ಕೊಡಿ

ತಾಲ್ಲೂಕು ಕೇಂದ್ರದಿಂದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮೊದಲು ಸಾರಿಗೆ ಸಮಸ್ಯೆಯಿತ್ತು. ಆದರೆ, ಈಗ ಎಲ್ಲರ ಮನೆಗಳಲ್ಲೂ ಸಾಮಾನ್ಯವಾಗಿ ದ್ವಿಚಕ್ರ ವಾಹನಗಳಿವೆ. ರಸ್ತೆ ಸಂಪರ್ಕ ಸರಿಪಡಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಹಾಗಾಗಿ, ಬಜೆಟ್‌ನಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು.

‌–ಜಾನ್ ಡಾನ್ ಬೋಸ್ಕೊ, ಮಾರ್ಟಳ್ಳಿ

ಪುನರ್ವಸತಿಗೆ ಅನುದಾನ ಬೇಕು

ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಜನರಿಗೆ ಕುಡಿಯುವ ನೀರು, ವಿದ್ಯುತ್ ಹಾಗೂ ಸಾರಿಗೆ ವ್ಯವಸ್ಥೆ ಮರೀಚಿಕೆಯಾಗಿದೆ. ಚಂಗಡಿ ಪುನರ್ವಸತಿಗೆ ಜಂಟಿ ಸರ್ವೆ ಕಾರ್ಯ ಮುಗಿದಿದೆ. ಈ ಬಾರಿಯ ಬಜೆಟ್‌ನಲ್ಲಾದರೂ ಪುನರ್ವಸತಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು.

–ಕರಿಯಪ್ಪ, ಮುಖಂಡ ಚಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT