ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿಗಟ್ಟಲೆ ಸಾಲ: ಗರ್ಭಿಣಿ ಪತ್ನಿ, ಮಗ, ಹೆತ್ತವರಿಗೆ ಗುಂಡಿಕ್ಕಿ ಬಳಿಕ ಆತ್ಮಹತ್ಯೆ

ಉದ್ಯಮಿ ಕುಟುಂಬ ಸಾವಿಗೆ ಶರಣು
Last Updated 16 ಆಗಸ್ಟ್ 2019, 20:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ/ಮೈಸೂರು: ವಿಪರೀತ ಸಾಲ ಹಾಗೂ ಹಣಕಾಸಿನ ಮುಗ್ಗಟ್ಟಿನಿಂದ ಕಂಗೆಟ್ಟಿದ್ದರು ಎನ್ನಲಾದ ಮೈಸೂರಿನ ಉದ್ಯಮಿ ಓಂಪ್ರಕಾಶ್‌ ಭಟ್ಟಾಚಾರ್ಯ ಹಾಗೂ ಅವರ ಕುಟುಂಬದ ಸದಸ್ಯರು ಗುಂಡ್ಲುಪೇಟೆಯ ಜಮೀನಿನಲ್ಲಿ ಗುಂಡಿಕ್ಕಿದ ಸ್ಥಿತಿಯಲ್ಲಿ ಶವವಾಗಿ ಶುಕ್ರವಾರ ಪತ್ತೆಯಾಗಿದ್ದಾರೆ.

ಮೈಸೂರಿನ ದಟ್ಟಗಳ್ಳಿಯಲ್ಲಿ ನೆಲೆಸಿದ್ದ ಓಂಪ್ರಕಾಶ್ ಭಟ್ಟಾಚಾರ್ಯ (35) ಅವರ ಪತ್ನಿ ನಿಖಿತಾ (26), ತಂದೆ ನಾಗರಾಜ ಭಟ್ಟಾಚಾರ್ಯ (60), ತಾಯಿ ಹೇಮಲತಾ (50) ಮಗ ಆರ್ಯನ್‌ (4) ಮೃತಪಟ್ಟವರು. ನಿಖಿತಾ ಆರು ತಿಂಗಳ ಗರ್ಭಿಣಿಯಾಗಿದ್ದರು ಎಂದು ಹೇಳಲಾಗಿದೆ.

ಇದು ಆತ್ಮಹತ್ಯೆ ಪ್ರಕರಣ ಆಗಿರಬಹುದು ಎಂದು ಪ್ರಾಥಮಿಕ ತನಿಖೆಯ ಬಳಿಕ ಪೊಲೀಸರು ಅಂದಾಜಿಸಿದ್ದಾರೆ. ಓಂಪ್ರಕಾಶ್ ಮೃತದೇಹದ ಬಳಿ ಪಿಸ್ತೂಲ್‌ ಕಂಡು ಬಂದಿದೆ. ಅವರು ಮೊದಲು ಕುಟುಂಬದ ನಾಲ್ವರಿಗೆ ಗುಂಡಿಕ್ಕಿ ಬಳಿಕ ತಾವು ಗುಂಡು ಹಾರಿಸಿಕೊಂಡಿರುವ ಸಾಧ್ಯತೆ ಇದೆ. ಶುಕ್ರವಾರ ನಸುಕಿನ 3.30ಗಂಟೆಯಿಂದ 4 ಗಂಟೆಯ ಸುಮಾರಿಗೆ ಘಟನೆ ನಡೆದಿರಬಹುದು. ಓಂಪ್ರಕಾಶ್‌ ತಂದೆ ಚಿಕ್ಕಬಳ್ಳಾಪುರದವರಾಗಿದ್ದು, ಹಲವು ವರ್ಷಗಳಿಂದ ಮೈಸೂರಿನಲ್ಲಿಯೇ ನೆಲೆಸಿದ್ದರು.

ಜಿ.ವಿ.ಇನ್ಫೋಟೆಕ್‌ ಹೆಸರಿನ ಡಾಟಾ ಬೇಸ್‌ ಸೇವೆ ಒದಗಿಸುವ ಸಂಸ್ಥೆಯನ್ನು ಆರಂಭಿಸಿದ್ದ ಓಂಪ್ರಕಾಶ್‌, ನಷ್ಟದಿಂದಾಗಿ ಅದನ್ನು ಮುಚ್ಚಿದ್ದರು. ನಂತರ, ಡಾ.ರಾಜಕುಮಾರ್, ವಜ್ರಮುನಿ, ಶಂಕರ್‌ನಾಗ್‌ ಅವರ ಪಾತ್ರಗಳನ್ನು ಒಳಗೊಂಡ ಅನಿಮೇಷನ್ ಸಿನಿಮಾ ಮಾಡಲು ಹೊರಟು ನಷ್ಟ ಅನುಭವಿಸಿದ್ದರು. ಬಳ್ಳಾರಿಯಲ್ಲಿ ಗಣಿ ವ್ಯವಹಾರದಲ್ಲೂ ತೊಡಗಿದ್ದರು. ಇದರಿಂದಾಗಿ ಆದಾಯ ತೆರಿಗೆ ಇಲಾಖೆಯಿಂದ ತನಿಖೆಯನ್ನೂ ಎದುರಿಸುತ್ತಿದ್ದರು ಎಂದು ಸ್ನೇಹಿತರೊಬ್ಬರು ಹೇಳಿದ್ದಾರೆ. ಕುಟುಂಬದ ಮೇಲೆ ಕೋಟಿಗಟ್ಟಲೇ ಸಾಲದ ಹೊರೆಯೂ ಇದ್ದಿದ್ದರಿಂದ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ನಾಲ್ಕು ದಿನಗಳ ಹಿಂದೆಯೇ ಬಂದಿದ್ದರು: ಸ್ನೇಹಿತ ಸುರೇಶ್‌ ಅವರ ಕಾರಿನಲ್ಲಿ ಮಂಗಳವಾರವೇ ಮೈಸೂರಿನಿಂದ ಗುಂಡ್ಲುಪೇಟೆಗೆ ಬಂದಿದ್ದ ಈ ಕುಟುಂಬ, ಪಟ್ಟಣದ ನಂದಿ ರೆಸಿಡೆನ್ಸಿ ಹಾಗೂ ಎಲ್ಚೆಟ್ಟಿ ಗ್ರಾಮದ ಸ್ನೇಹಿತರ ಫಾರ್ಮ್‌ ಹೌಸ್‌ನಲ್ಲಿ ಉಳಿದುಕೊಂಡಿತ್ತು.

ಗುರುವಾರ ಮಧ್ಯಾಹ್ನ ಬಿರಿಯಾನಿ ತಂದಿದ್ದ ‌ಕುಟುಂಬದ ಸದಸ್ಯರು, ಆತ್ಮಹತ್ಯೆ ಮಾಡಿಕೊಂಡಿರುವ ಜಾಗದಲ್ಲೇ ಊಟ ಮಾಡಿದ್ದರು. ಸಂಜೆ, ಮೈಸೂರಿಗೆ ವಾಪಸ್‌ ಹೋಗುವಂತೆ ಚೇತನ್‌ ಅವರಿಗೆ ಹೇಳಿದ್ದ ಓಂಪ್ರಕಾಶ್‌, ಶುಕ್ರವಾರ ಸೇಲಂಗೆ ಹೋಗಬೇಕಿದ್ದು ಅಂದು ಬೆಳಿಗ್ಗೆ ಬರುವಂತೆ ತಿಳಿಸಿದ್ದರು ಎಂದು ತಿಳಿದುಬಂದಿದೆ.

ವಿಶೇಷ ತನಿಖಾ ತಂಡ ರಚನೆ

ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆ ಕಂಡು ಬಂದರೂ, ಜಿಲ್ಲಾ ಪೊಲೀಸ್‌ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಪ್ರಕರಣದ ತನಿಖೆಗಾಗಿ ಡಿವೈಎಸ್‌ಪಿ ಜೆ. ಮೋಹನ್‌, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಲತೇಶ್‌ ಕುಮಾರ್‌, ಲೋಹಿತಕುಮಾರ್‌ ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿದ್ದು, ಈ ಕುಟುಂಬದ ಆರ್ಥಿಕ ಪರಿಸ್ಥಿತಿ ಹಾಗೂ ವ್ಯವಹಾರಗಳು ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಚಾಮರಾಜನಗರ ಎಸ್‌ಪಿ ಎಚ್‌.ಡಿ. ಆನಂದ ಕುಮಾರ್‌ ಸೂಚಿಸಿದ್ದಾರೆ.

ನಾಲ್ವರು ಗನ್‌ಮ್ಯಾನ್‌

ಉದ್ಯಮಿ ಓಂಪ್ರಕಾಶ್ ಭಟ್ಟಾಚಾರ್ಯ, ತಮ್ಮ ರಕ್ಷಣೆಗೆ ಖಾಸಗಿಯಾಗಿ ನಾಲ್ವರು ಗನ್‌ಮ್ಯಾನ್‌ಗಳನ್ನು ಇಟ್ಟುಕೊಂಡಿದ್ದರು ಎಂದು ದಟ್ಟಗಳ್ಳಿಯ ಅವರ ಮನೆಯ ನೆರೆಹೊರೆಯವರು ತಿಳಿಸಿದ್ದಾರೆ.

‘ಸಾಲ ನೀಡಿದವರ ಬೆದರಿಕೆಯಿಂದ ತನ್ನ ಮಾನ ಹಾಳಾಗುತ್ತದೆ ಎಂದು ಓಂಪ್ರಕಾಶ್ ಅಂಜಿದ್ದ. ಕುಟುಂಬದವರನ್ನು ಪ್ರವಾಸಕ್ಕೆ ಕರೆತಂದು, ಕಾರಿನಲ್ಲಿ ಗನ್‌ ಮ್ಯಾನ್‌ ಇಟ್ಟಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ತನ್ನ ತಂದೆ, ತಾಯಿ, ಮಗ ಮತ್ತು ಹೆಂಡತಿಯನ್ನು ಕೊಲೆ ಮಾಡಿ, ಅದೇ ಪಿಸ್ತೂಲಿನಿಂದ ಹೊಡೆದುಕೊಂಡು ಮೃತಪಟ್ಟಿದ್ದಾನೆ’ ಎಂದು ಓಂಪ್ರಕಾಶ್‌ ಸ್ನೇಹಿತನೂ ಆಗಿದ್ದ ಕಾರು ಚಾಲಕ ಚೇತನಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ. ಕಾರು ಚಾಲಕ ಚೇತನ್‌ ಕುಮಾರ ನೀಡಿದ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT