ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | 6ನೇ ವಾರ್ಡ್‌ ಉಪ ಚುನಾವಣೆ; ಅಭ್ಯರ್ಥಿ ಯಾರು?

27ರಂದು ಮತದಾನ: ಎಸ್‌ಡಿಪಿಐ, ಕಾಂಗ್ರೆಸ್‌, ಬಿಜೆಪಿ ಸ್ಪರ್ಧೆ, ಕುತೂಹಲ
Last Updated 12 ಡಿಸೆಂಬರ್ 2021, 21:07 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ನಗರಸಭೆಯ 6ನೇ ವಾರ್ಡ್‌ನ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇನ್ನು ಎರಡು ದಿನಗಳಷ್ಟೇ ಬಾಕಿ ಇದ್ದು (ಡಿ.15 ಕೊನೆಯ ದಿನ) ಪಕ್ಷಗಳು ಯಾರನ್ನೂ ಕಣಕ್ಕಿಳಿಸಲಿವೆ ಎಂಬ ಕುತೂಹಲ ಮೂಡಿದೆ.

ಹಿಂದುಳಿದ ವರ್ಗ (ಎ)ಗೆ ಮೀಸಲಾತಿ ಈ ವಾರ್ಡ್‌ನಲ್ಲಿಎಸ್‌ಡಿಪಿಐನ ಸಮೀವುಲ್ಲಾ ಅವರು ಈ ಹಿಂದೆ ಸದಸ್ಯರಾಗಿದ್ದರು. ಅವರ ಅಕಾಲಿಕ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ.

ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ವಾರ್ಡ್‌ನಲ್ಲಿ 1,801 ಮತದಾರರಿದ್ದಾರೆ. ಎಸ್‌ಡಿಪಿಐ, ಕಾಂಗ್ರೆಸ್‌ ಹಾಗೂ ಬಿಜೆಪಿ... ಮೂರೂ ಪಕ್ಷಗಳು ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಕಾಂಗ್ರೆಸ್‌ ಪಕ್ಷವು ಆಕಾಂಕ್ಷಿಗಳಿಂದ ಅರ್ಜಿಗಳನ್ನೂ ಆಹ್ವಾನಿಸಿದೆ.

ಇಂದು ನಿರ್ಧಾರ ಸಾಧ್ಯತೆ: ಮೂರೂ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಸೋಮವಾರ ಅಂತಿಮಗೊಳಿಸುವ ನಿರೀಕ್ಷೆ ಇದೆ.

ಕಾಂಗ್ರೆಸ್‌ನಲ್ಲಿ ಪೈಪೋಟಿ: ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಪೈಪೋಟಿ ಕಂಡು ಬಂದಿದೆ. ನಾಲ್ಕು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಮುಖಂಡ ಅತೀಕ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಆಸ್ಗರ್‌, ಸೈಯದ್‌ ಮುಜಾಹೀದ್‌ ಹಾಗೂ ಆಯೂಬ್‌ ಖಾನ್‌ ಅವರು ಅರ್ಜಿ ಸಲ್ಲಿಸಿದ್ದಾರೆ. ಟಿಕೆಟ್‌ ಯಾರಿಗೆ ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸೂಚಿಸಿದ ವ್ಯಕ್ತಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

‘ಆಯೂಬ್‌ ಖಾನ್‌ ಅವರು ಹಿಂದಿನ ಚುನಾವಣೆಯಲ್ಲಿ ಸಮೀವುಲ್ಲಾ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಹಾಗಾಗಿ, ಅವರಿಗೆ ಮತ್ತೆ ಟಿಕೆಟ್‌ ನೀಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಅತೀಕ್‌ ಅವರ ಬಗ್ಗೆಯೂ ಪಕ್ಷದಲ್ಲಿ ಒಲವು ವ್ಯಕ್ತವಾಗುತ್ತಿದೆ’ ಎಂದು ಪ‍ಕ್ಷದ ಮುಖಂಡರು ಹೇಳುತ್ತಿದ್ದಾರೆ.

ಬಿಜೆಪಿ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಯಾರು ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಸಂಬಂಧ ಮುಖಂಡರು ಸೋಮವಾರ ಸಭೆ ಸೇರಿ ಚರ್ಚಿಸಲಿದ್ದಾರೆ.

27ರಂದು ಮತದಾನ: ಉಪಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಇದೇ 15 ಕೊನೆಯ ದಿನ. 16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂಪಡೆಯಲು 18 ಕೊನೆಯ ದಿನ. 27ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ.

ಮರು ಮತದಾನದ ಅವಶ್ಯವಿದ್ದರೆ19ರಂದು ನಡೆಯಲಿದೆ. 30ರಂದು ಫಲಿತಾಂಶ ಪ್ರಕಟವಾಗಲಿದೆ.

ಎಸ್‌ಡಿಪಿಐಗೆ ಪ್ರತಿಷ್ಠೆಯ ಕಣ
31 ಸದಸ್ಯ ಬಲದ ನಗರಸಭೆಯಲ್ಲಿ ಎಸ್‌ಡಿಪಿಐ ಸದ್ಯ ಐದು ಸ್ಥಾನಗಳನ್ನು ಹೊಂದಿದೆ. ಆರನೇ ವಾರ್ಡ್‌ ಕೂಡ ತನ್ನದೇ ಹಿಡಿತದಲ್ಲಿ ಇದ್ದುದರಿಂದ ಆ ಪಕ್ಷಕ್ಕೆ ಉಪ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ.

ಪಕ್ಷದ ಜಿಲ್ಲಾ ಸಮಿತಿಯು ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಸಮೀವುಲ್ಲಾ ಅವರ ಪತ್ನಿ ವಹಿದಾ ಖಾನಂ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆಯ ಬಗ್ಗೆ ಮುಖಂಡರು ಯೋಚಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ವಹಿದಾ ಅವರು ಈ ಹಿಂದೆ ನಗರಸಭೆ ಸದಸ್ಯರಾಗಿದ್ದವರು. ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ, ಚುನಾವಣೆ ಗೆದ್ದರೆ, ಸಮರ್ಥವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸದಲ್ಲಿ ಮುಖಂಡರು ಇದ್ದಾರೆ.

--

ಯಾರು ಅಭ್ಯರ್ಥಿ ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಸೋಮವಾರ ಈ ಬಗ್ಗೆ ಚರ್ಚಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಉಪ ಚುನಾವಣೆಯಲ್ಲಿ ಗೆಲುವು ಖಚಿತ
-ಅಬ್ರಾರ್‌ ಅಹಮದ್‌, ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ

--

ನಾಲ್ವರು ಅರ್ಜಿ ಸಲ್ಲಿಸಿದ್ದಾರೆ. ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿ ಮುಖಂಡರೆಲ್ಲ ಈ ಬಗ್ಗೆ ಚರ್ಚೆ ನಡೆಸಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಾಗುವುದು
-ಬಿ.ಕೆ.ರವಿಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ

---

ಉಪ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ. ಅಭ್ಯರ್ಥಿಯ ಆಯ್ಕೆಯಾಗಿ ಸೋಮವಾರ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆ ಕರೆಯಲಾಗಿದೆ
-ಆರ್‌.ಸುಂದರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT