ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ಮತದಾನ ಶಾಂತಿಯುತ

ಹರದನಹಳ್ಳಿಯಲ್ಲಿ ಶೇ 64, ಯಡಿಯೂರಿನಲ್ಲಿ ಶೇ 62.62, ಕೊಳ್ಳೇಗಾಲ 19ನೇ ವಾರ್ಡ್‌ನಲ್ಲಿ ಶೇ 71.40 ಮತದಾನ
Last Updated 12 ನವೆಂಬರ್ 2019, 17:10 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಪಂಚಾಯಿತಿಯ ಹರದನಹಳ್ಳಿ ಕ್ಷೇತ್ರ, ಯಳಂದೂರು ತಾಲ್ಲೂಕು ಪಂಚಾಯಿತಿಯ ಯರಿಯೂರು ಕ್ಷೇತ್ರ ಹಾಗೂ ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ಶಾಂತಿಯುತ ಮತದಾನವಾಗಿದೆ.

ಬೆಳಿಗ್ಗೆ 7ರಿಂದ ಸಂಜೆ 5ರವರೆಗೂ ಮತ ಚಲಾವಣೆಗೆ ಅವಕಾಶ ನೀಡಲಾಗಿತ್ತು. ಹರದನಹಳ್ಳಿ ಕ್ಷೇತ್ರದಲ್ಲಿ ಶೇ 64, ಯರಿಯೂರು ಕ್ಷೇತ್ರದಲ್ಲಿ ಶೇ 62.62 ಮತ್ತು ಕೊಳ್ಳೇಗಾಲದ 19ನೇ ವಾರ್ಡ್‌ನಲ್ಲಿ ಶೇ 71.40ರಷ್ಟು ಮತದಾನವಾಗಿದೆ.

ಬಿಗಿ ಬಂದೋಬಸ್ತ್‌: ಎಲ್ಲ ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಅವರು ಸ್ವತಃ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಒಂದೆರಡು ಕಡೆ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು ಬಿಟ್ಟರೆ, ಬೇರೆಲ್ಲೂ ಸಮಸ್ಯೆಯಾಗಿಲ್ಲ. ಅಹಿತಕರ ಘಟನೆಗಳೂ ನಡೆದಿಲ್ಲ.

ಮಂದಗತಿ: ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಿಧಾನಗತಿಯಲ್ಲಿ ಮತದಾನ ನಡೆಯಿತು. ಮೂರು ಗಂಟೆಯ ನಂತರ ಮತದಾರರು ಮತಗಟ್ಟೆಗಳಿಗೆ ಬರುವುದಕ್ಕೆ ಆಗಮಿಸಿದರು.

ಹಿರಿಯರಿಗೆ ಹಾಗೂ ಅಂಗವಿಕಲರಿಗೆ ಮತದಾನ ಮಾಡುವುದಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಎಲ್ಲ ಮತಗಟ್ಟೆಗಳಲ್ಲಿ ಗಾಲಿ ಕುರ್ಚಿಯ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಪಂಚಾಯಿತಿಯ ಹರದನಹಳ್ಳಿ ಕ್ಷೇತ್ರದಲ್ಲಿ ಒಟ್ಟು 38 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಇಲ್ಲಿಮೂವರು ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿಯ ಶ್ರೀನಿವಾಸ ಹಾಗೂ ಕಾಂಗ್ರೆಸ್‌ನ ರಮೇಶ್‌ ಅವರು ತಮ್ಮ ಸ್ವಗ್ರಾಮ ಬಸವಾಪುರದಲ್ಲಿ ಮತದಾನ ಮಾಡಿದರು.

ಮತಗಟ್ಟೆಯಿಂದ ಸಾಕಷ್ಟು ದೂರದಲ್ಲಿ ನಿಂತಿದ್ದ ಇಬ್ಬರೂ ಮತದಾರರಿಗೆ, ತಮಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದುದು ಕಂಡು ಬಂತು.

ಯ‌ರಿಯೂರು‌: 3,980 ಮಂದಿ ಹಕ್ಕು ಚಲಾವಣೆ

ಯಳಂದೂರು ತಾಲ್ಲೂಕು ಪಂಚಾಯಿತಿಯ ಯರಿಯೂರು ಕ್ಷೇತ್ರದ ಮತದಾನವೂ ಶಾಂತಿಯುತವಾಗಿತ್ತು. ಕ್ಷೇತ್ರದಲ್ಲಿ ಏಳು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಇಲ್ಲಿ 3,190 ಪುರುಷರು ಹಾಗೂ 3,170 ಮಹಿಳೆಯರು ಸೇರಿದಂತೆ 6,360 ಮತದಾರರಿದ್ದಾರೆ. ಈ ಪೈಕಿ 2,008 ಪುರುಷರು ಮತ್ತು 1,972 ಮಹಿಳೆಯರು ಹಕ್ಕನ್ನು ಚಲಾಯಿಸಿದ್ದಾರೆ.

ಬೆಳಿಗ್ಗೆ ಯರಿಯೂರಿನ 2ನೇ ಮತಗಟ್ಟೆಯಲ್ಲಿ ಮತಯಂತ್ರದ ಬಟನ್‌ನಲ್ಲಿ ದೋಷ ಕಂಡು ಬಂದಿದ್ದರಿಂದ 10 ನಿಮಿಷ ಮತದಾನ ವಿಳಂಬವಾಯಿತು. ಗಣಿಗನೂರಿನ ಮತಗಟ್ಟೆಯಲ್ಲೂ ಇದೇ ರೀತಿಯ ದೋಷ ಕಂಡು ಬಂತು. ಸಿಬ್ಬಂದಿ ಅದನ್ನು ಸರಿ ಪಡಿಸಿದ ನಂತರ ಮತದಾನ ಪ್ರಕ್ರಿಯೆ ಸರಾಗವಾಗಿ ನಡೆಯಿತು.

ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕ್ಷೇತ್ರದಲ್ಲಿ ಶೇ 50ರಷ್ಟು ಮತದಾನವಾಗಿತ್ತು. ಕೊನೆಯ ಎರಡು ಗಂಟೆಗಳಲ್ಲಿ ಶೇ 12.6ರಷ್ಟು ಮತ ಚಲಾವಣೆಯಾಯಿತು.

4 ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೂ ಮತದಾನ

ಕೊಳ್ಳೇಗಾಲ ತಾಲ್ಲೂಕಿನ ತೆಳ್ಳನೂರು ಗ್ರಾಮ ಪಂಚಾಯಿತಿಯ ಬಾಣೂರು ಕ್ಷೇತ್ರ, ಹನೂರು ತಾಲ್ಲೂಕಿನ ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿಯ ಚಿಕ್ಕಮಾಲಾಪುರ ಕ್ಷೇತ್ರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯಿತಿಯ ಬಂಡೀಪುರ ಕ್ಷೇತ್ರ ಮತ್ತು ರಾಘವಾಪುರ ಗ್ರಾಮ ಪಂಚಾಯಿತಿಯ ಹಸಗೂಲಿ–1 ಕ್ಷೇತ್ರದಲ್ಲೂ ಮಂಗಳವಾರ ಮತದಾನ ನಡೆದಿದೆ.

ಒಟ್ಟಾರೆಯಾಗಿ ಶೇ 66.98ರಷ್ಟು ಮತದಾನವಾಗಿದೆ. ಈ ನಾಲ್ಕೂ ಕ್ಷೇತ್ರಗಳಲ್ಲಿ ಮತಪತ್ರಗಳನ್ನು ಬಳಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT