ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡಮರಗಳಿದ್ದರೆ ನದಿಗಳ ಉಳಿವು: ಸಿಸಿಎಫ್‌

ಈಶಾ ಸಂಸ್ಥೆಯ ಕಾವೇರಿ ಕೂಗು ಮೊಬೈಲ್ ಆ್ಯಪ್‌ ಬಿಡುಗಡೆ ಮಾಡಿದ ಮನೋಜ್‌ ಕುಮಾರ್‌
Last Updated 3 ಸೆಪ್ಟೆಂಬರ್ 2021, 4:42 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕಾವೇರಿ ನದಿ ಉಳಿಸಬೇಕಾದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಜಮೀನುಗಳಲ್ಲಿ ಮರಗಳನ್ನು ಬೆಳೆಸಲು ಮುಂದಾಗಬೇಕು’ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಮನೋಜ್‌ ಕುಮಾರ್‌ ಗುರುವಾರ ಇಲ್ಲಿ ಹೇಳಿದರು.

ಈಶಾ ಫೌಂಡೇಷನ್‌ ಸಂಸ್ಥೆಯು ನದಿ ಪುನರುಜ್ಜೀವನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾವೇರಿ ಕೂಗು ಆ್ಯಪ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಮ್ಮ ಜಮೀನುಗಳಲ್ಲಿ ಮರಗಳನ್ನು ಬೆಳೆಸಿದರೆ ಅರಣ್ಯ ಇಲಾಖೆ ಅದನ್ನು ಕಡಿಯಲು ಬಿಡುವುದಿ‌ಲ್ಲ ಎಂಬ ಹಿಂಜರಿಕೆ ಜನರಲ್ಲಿ ಇದೆ. ಹಿಂದೆ ಮರಗಳನ್ನು ಕಡಿಯಲು ಅವಕಾಶ ಇದ್ದಾಗ ಎಲ್ಲರೂ ಬೇಕಾಬಿಟ್ಟಿ ಮರಗಳನ್ನು ಕಡಿಯುತ್ತಿದ್ದರು. ಈ ಕಾರಣಕ್ಕೆ ಮರ ಸಂರಕ್ಷಣೆ ಕಾಯ್ದೆ ಜಾರಿಗೆ ತರಲಾಯಿತು. ಇಡೀ ದೇಶದಲ್ಲಿ ನಮ್ಮಲ್ಲಿ ಮಾತ್ರ ಅಂತಹ ಕಾಯ್ದೆ ಇದೆ. ನಮ್ಮಲ್ಲಿ 47 ಜಾತಿಯ ಮರಗಳನ್ನು ಮಾತ್ರ ಅನುಮತಿ ಇಲ್ಲದೆ ಕಡಿಯಲು ಅವಕಾಶ ಇದೆ. ಸ್ವಂತ ಬಳಕೆಗಾಗಿ ತಾವೇ ಬೆಳೆಸಿದ ಮರಗಳನ್ನು ಕಡಿಯಲು ಅನುಮತಿ ನೀಡುವ ಕಾನೂನು ಮುಂದೆ ಬರಬಹುದು. ಹಾಗಾಗಿ, ಜನರು ಯಾವುದೇ ಅಳುಕು ಇಲ್ಲದೆ ಮರಗಳನ್ನು ಬೆಳೆಸಲು ಮುಂದಾಗಬೇಕು’ ಎಂದರು.

‘ಯಾವುದೇ ನದಿಯ ಉಳಿವಿಗೆ ಮರಗಳು ಮುಖ್ಯ. ಮರದ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತವೆ. ನದಿಯಲ್ಲಿ ಮಣ್ಣುಗಳು ಇದ್ದರೆ ಅದು ಅಭಿವೃದ್ಧಿಯ ಸಂಕೇತ. ಮಣ್ಣು ಹೀಗೆ ಕೊಚ್ಚಿ ಹೋಗುತ್ತಿದ್ದರೆ ನದಿ ಬಹುಬೇಗ ಬರಡಾಗುತ್ತದೆ’ ಎಂದು ಅವರು ಹೇಳಿದರು.

‘ಜನರು ನಿರ್ಲಕ್ಷ್ಯ ವಹಿಸಿದರೆ ಮುಂದಿನ ತಲೆಮಾರಿಗೆ ಕಾವೇರಿ ನದಿಯನ್ನು ನೋಡಲು, ಅದರ ನೀರನ್ನು ಬಳಸಲು ಸಾಧ್ಯವಿಲ್ಲ. ಕಾವೇರಿ ರಕ್ಷಿಸಬೇಕಾದರೆ, ನದಿ ಪಾತ್ರದಲ್ಲಿ ಗಿಡ–ಮರ ಬೆಳೆಸಬೇಕು. ಈಶಾ ಫೌಂಡೇಷನ್‌ ಅಭಿವೃದ್ಧಿ ಪಡಿಸಿರುವ ಆ್ಯಪ್‌ ಅನ್ನು ಎಲ್ಲರೂ ಬಳಸೋಣ’ ಎಂದು ಅವರು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಪ್ರಭುಸ್ವಾಮಿ ಮಾತನಾಡಿ ‘ನಮ್ಮ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಮುಂದಿನ ತಲೆಮಾರಿಗೆ ಮರಗಳ ಫೋಟೊ ತೋರಿಸುವಂತಾಗಬಾರದು. ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟರೆ ಮರಗಳನ್ನೇ ತೋರಿಸಬಹುದು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿ ದೇವಿ,ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಶರವಣ ಇದ್ದರು.

ರೈತರ ಬೇಡಿಕೆ ಸಂಗ್ರಹಿಸುವ ಆ್ಯಪ್‌

ಈಶಾ ಫೌಂಡೇಷನ್‌ ಸ್ವಯಂ ಸೇವೆಯ ಶರತ್ ರಘು ಮಾತನಾಡಿ, ‘ಕಾವೇರಿ ಕೂಗು ಅಭಿಯಾನದಡಿಯಲ್ಲಿ ಸಂಸ್ಥೆಯು ಕಾವೇರಿ ಅಚ್ಚುಕಟ್ಟು ಪ್ರದೇಶದ ಒಂಬತ್ತು ಜಿಲ್ಲೆಗಳಲ್ಲಿ ಮರ ಆಧಾರಿತ ಕೃಷಿಗೆ ಪ್ರೋತ್ಸಾಹ ನೀಡುತ್ತಿದೆ.

ರೈತರಿಂದ ಗಿಡಗಳಿಗೆ ಬರುವ ಬೇಡಿಕೆಗಳನ್ನು ನಮೂದಿಸಲು ಹಾಗೂ ಅವುಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ನಿರ್ವಹಿಸಲು ಆ್ಯಪ್‌ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಆ್ಯಪ್‌ ಮೂಲಕ ರೈತರಿಂದ ಗಿಡಗಳಿಗೆ ಬಂದಿರುವ ಬೇಡಿಕೆಯನ್ನು ನೋಂದಣಿ ಮಾಡಿಕೊಂಡು ಮುಂದಿನ ಮುಂಗಾರಿಗೆ ಸಸಿಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT