ಚಾಮರಾಜನಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದಕ್ಕೆ ನಗರದಲ್ಲಿ ರೈತ ಸಂಘಟನೆಗಳು ಹಾಗೂ ಕನ್ನಡ ಸಂಘಟನೆಗಳ ಆಕ್ರೋಶ ಬುಧವಾರವೂ ಮುಂದುವರಿದಿದೆ.
ರಾಜ್ಯ ಕಬ್ಬು ಬೆಳೆಗಾರರ ಸಂಘವು ಕೇಂದ್ರ,ರಾಜ್ಯ ಹಾಗೂ ತಮಿಳುನಾಡು ಸರ್ಕಾರಗಳ ಅಣಕು ಶವಯಾತ್ರೆ ನಡೆಸಿ ಪ್ರತಿಭಟಿಸಿದರೆ, ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಬೇವಿನ ಸೊಪ್ಪಿನಿಂದ ನೆಲಕ್ಕೆ ಬಡಿದು ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಭೂತ ಬಿಡಿಸುವ ಚಳವಳಿ ನಡೆಸಿದರು.
ಕರ್ನಾಟಕ ಸೇನಾ ಪಡೆಯ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಕಾಲ್ನಡಿಗೆ ಜಾಥಾ ನಡೆಸಿ, ತಕ್ಷಣವೇ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು.
ಅಣಕು ಶವಯಾತ್ರೆ: ನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಬಳಿ ಸೇರಿದ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಭುವನೇಶ್ವರಿ ವೃತ್ತದವರೆಗೂ ಕೇಂದ್ರ, ರಾಜ್ಯ ಹಾಗೂ ತಮಿಳು ಸರ್ಕಾರಗಳ ಅಣಕು ಶವಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮೈಸೂರು– ಚಾಮರಾಜನಗರ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ‘ತಮಿಳುನಾಡಿನ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗಳ ಆದೇಶದಂತೆ ರಾಜ್ಯದ ಜಲಾಶಯಗಳ ನೀರನ್ನು ಖಾಲಿ ಮಾಡುತ್ತಿದೆ’ ಎಂದು ಆರೋಪಿಸಿದರು.
‘ತಮಿಳುನಾಡು ಮೂರನೇ ಬೆಳೆಗೆ ನೀರು ಕೇಳುತ್ತಿದ್ದು, ರಾಜ್ಯದಲ್ಲಿ ಕುಡಿಯಲು ನೀರು ಇಲ್ಲದಂತೆ ಆಗಿದೆ. ಇದನ್ನು ಅರಿಯದ ರಾಜ್ಯ ಸರ್ಕಾರ, ‘ಇಂಡಿಯಾ’ ಎಂಬ ರಾಜಕೀಯ ಒಕ್ಕೂಟಕ್ಕೆ ಬೆಂಬಲ ಮತ್ತು ಪ್ರೋತ್ಸಾಹ ನೀಡಲು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಮಾತಿಗೆ ತಲೆಬಾಗಿ ರಾಜ್ಯದ ಜಲಾಶಯಗಳ ನೀರನ್ನು ಬರಿದು ಮಾಡಲು ಹೊರಟಿದೆ. ತಮ್ಮ ರಾಜಕೀಯ ಹಿತಾಸಕ್ತಿ ಏನೇ ಇದ್ದರೂ ರಾಜ್ಯದ ರೈತರ ಹಾಗೂ ಅಚ್ಚುಕಟ್ಟು ಭಾಗದ ರೈತರನ್ನು ರಕ್ಷಿಸುವುದು ಸರ್ಕಾರದ ಉದ್ದೇಶವಾಗಬೇಕು’ ಎಂದು ಒತ್ತಾಯಿಸಿದರು.
‘ಕಾವೇರಿ ಕಬಿನಿ ವ್ಯಾಪ್ತಿಯ ರೈತರಿಗೆ, ಜನ ಜಾನುವಾರುಗಳಿಗೆ ಕುಡಿಯುವ ನೀರು, ಅಂತರ್ಜಲ ವೃದ್ಧಿಗಾಗಿ ಕೆರೆಕಟ್ಟೆಗಳು ತುಂಬಿಸುವುದಕ್ಕಾಗಿ ನೀರನ್ನ ಬಳಸಬೇಕು. ಅದನ್ನು ಬಿಟ್ಟು ಅಧಿಕಾರಕ್ಕಾಗಿ ನೀರು ಹರಿಸುವ ಮೂಲಕ ರಾಜ್ಯ ಸರ್ಕಾರ ಜನರಿ ಆತ್ಮಹತ್ಯೆ ಭಾಗ್ಯ ಕೊಡಲು ಹೊರಟಿದೆ’ ಎಂದು ಭಾಗ್ಯರಾಜ್ ದೂರಿದರು.
‘ತಕ್ಷಣ ತಮಿಳುನಾಡಿಗೆ ಹರಿಸಲಾಗುತ್ತಿರುವ ನೀರನ್ನು ನಿಲ್ಲಿಸಬೇಕು ಹಾಗೂ ಈ ಭಾಗದ ರೈತರಿಗೆ ಬೆಳೆ ನಷ್ಟ ಪರಿಹಾರ ಘೋಷಣೆ ಮಾಡಬೇಕು. ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ರಾಜ್ಯದ ಪರವಾಗಿ ವಕೀಲರಾಗಲಿ, ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ನಮ್ಮ ರಾಜ್ಯ, ರೈತರ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ, ನೀರಾವರಿ ಸಚಿವರನ್ನು ಸಂಪುಟದಿಂದ ತಕ್ಷಣ ವಜಾ ಮಾಡಬೇಕು’ ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ಮಹದೇವಸ್ವಾಮಿ ತಾಲ್ಲೂಕು ಅಧ್ಯಕ್ಷ ಹಾಲಿನ ನಾಗರಾಜ್, ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ ಉಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್, ಅರಳಿಕಟ್ಟೆ ಗ್ರಾಮ ಘಟಕದ ಅಧ್ಯಕ್ಷ ಕುಮಾರ್, ಗೌಡಹಳ್ಳಿ ಷಡಕ್ಷರಿ, ಹಿರಿಯೂರು ಮಹೇಶ್, ಪ್ರವೀಣ್ ಕುಮಾರ್, ಮಹೇಂದ್ರ, ಸತೀಶ್, ಸಿದ್ದಪ್ಪ ಇತರರು ಇದ್ದರು.
‘ಜನರಿಗೆ ಬಗೆದ ಮಹಾ ದ್ರೋಹ’
ನಗರದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಬಂದ ತಕ್ಷಣ ರಾತ್ರೋ ರಾತ್ರಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಸರ್ಕಾರ ರಾಜ್ಯದ ಜನರಿಗೆ ಮಾಡುತ್ತಿರುವ ಮಹಾದ್ರೋಹ’ ಎಂದು ಕಿಡಿ ಕಾರಿದರು.
ಲೋಕಸಭಾ ಸದಸ್ಯರು, ರಾಜ್ಯ ಸರ್ಕಾರ ಪ್ರಧಾನಿಯವರ ಬಳಿ ಮಾತನಾಡಲಿ. ರಾಜ್ಯದ ಸಂಸದರು, ಬಿಜೆಪಿಯವರು ಕೇಂದ್ರದ ಮೇಲೆ ಒತ್ತಡ ಹಾಕಲಿ. ಸುಪ್ರೀಂ ಕೋರ್ಟ್‌ಗೆ ಹೋಗಲಿ. ಕನ್ನಡಿಗರಿಗೇ ಕುಡಿಯುವುದಕ್ಕೆ ನೀರು ಇಲ್ಲದಂತೆ ಆಗಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ಚೆನ್ನಪಟ್ಟಣ, ರಾಮನಗರ, ಬೆಂಗಳೂರು ಜನರಿಗೆ ನೀರು ಇಲ್ಲದಂತೆ ಆಗುತ್ತದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ನೀರು ಪೂರೈಸುವುದಾದರೂ ಹೇಗೆ? ಹಾಗಾಗಿ ತಕ್ಷಣವೇ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.